ನವದೆಹಲಿ: ಇಂಡಿಯಾ ಮೈತ್ರಿಕೂಟದ ಬಿರುಕು ದಿನೇ ಮತ್ತಷ್ಟು ವ್ಯಾಪಕವಾಗುತ್ತಿದ್ದು, ಟಿಎಂಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಬಳಿಕ ಇದೀಗ ಆಮ್‌ಆದ್ಮಿ ಪಕ್ಷ ಕೂಡಾ ಕಾಂಗ್ರೆಸ್‌ಗೆ ಕೈಕೊಟ್ಟಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಪ್ರಬಲವಾಗಿರುವ ಪಂಜಾಬ್‌ನಲ್ಲಿ ಎಲ್ಲ 13 ಮತ್ತು ಚಂಡೀಗಢದ 1 ಸ್ಥಾನಗಳಲ್ಲಿ ಕಣಕ್ಕಿಳಿಯುವುದಾಗಿ ಆಮ್‌ಆದ್ಮಿ ಪಕ್ಷ ಘೋಷಿಸಿದೆ.
ಈ ಕುರಿತು ಸ್ವತಃ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಯ ಸಾಧ್ಯತೆಯನ್ನು ಸ್ಥಳೀಯ ಆಪ್ ನಾಯಕರು ಆರಂಭದಿಂದಲೇ ತಿರಸ್ಕರಿಸುತ್ತಲೇ ಬಂದಿದ್ದರಾದರೂ, ಈ ಬಗ್ಗೆ ಕೇಜ್ರಿವಾಲ್ ಅವರಿಂದ ಹೇಳಿಕೆ ಬಂದಿರಲಿಲ್ಲ.
ಇದಕ್ಕೂ ಮೊದಲು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಎಲ್ಲ ಕ್ಷೇತ್ರಗಳಲ್ಲಿ ಪ್ರಕಟಿಸುವುದಾಗಿ ಘೋಷಿಸಿತ್ತು. ಹಾಗೆಯೇ ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡಾ ಕಳೆದ ವರ್ಷ ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಈ ಬಾರಿ ಕಣಕ್ಕೆ ಇಳಿಯಲಿದ್ದು, ಕಾಂಗ್ರೆಸ್ ಬೇಕಿದ್ದರೆ ಎನ್‌ಸಿಪಿಯೊಂದಿಗೆ ಸೀಟು ಹಂಚಿಕೆ ಮಾತುಕತೆ ನಡೆಸಲಿ ಎಂದು ಸ್ಪಷ್ಟಪಡಿಸಿದೆ.
ಇನ್ನು ಬಿಹಾರದಲ್ಲೂ ಜೆಡಿಯು ಇತ್ತೀಚೆಗೆ ಕಾಂಗ್ರೆಸ್- ಆರ್‌ಜೆಡಿ ಜೊತೆಗಿನ ಮೈತ್ರಿ ಮುರಿದುಕೊಂಡಿತ್ತು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಈಗಾಗಲೇ 16 ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ಅಭ್ಯರ್ಥಿಗಳ ಘೋಷಣೆ ಮಾಡಿದೆ.