ನವದೆಹಲಿ: ಅಬಕಾರಿ ಹಗರಣದಲ್ಲಿ ಗುರುವಾರ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದಿಂದ ದೆಹಲಿ ಸೇರಿ ಇತರ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ಸಂಬಂಧ ಆಮ್ ಆದ್ಮಿ ಪಕ್ಷ (ಎಎಪಿ) ಕೈಗೊಂಡಿರುವ ಪ್ರಚಾರಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಸಜ್ಜಾಗಿರುವ ಎಎಪಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ದೆಹಲಿ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದೆ.
ಆದರೆ ಪ್ರಚಾರಕ್ಕೆ ಪಕ್ಷದ ತಾರಾ ಪ್ರಚಾರಕರಿಲ್ಲದೆ ಮಂಕಾಗಿದೆ. ಅಬಕಾರಿ ಹಗರಣದಲ್ಲಿ ಈಗಾಗಲೇ ಎಎಪಿಯ ಹಿರಿಯ ನಾಯಕರಾದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಜೈಲು ಸೇರಿದ್ದಾರೆ.
ಈಗ ಕೇಜ್ರಿವಾಲ್ ಬಂಧನವಾಗಿದೆ. ಇದರಿಂದ ಎಎಪಿ ಅತಂತ್ರ ಸ್ಥಿತಿಗೆ ತಲುಪಿದೆ. ಇದಕ್ಕೂ ಮುನ್ನ ಯಾವಾಗ ಈ ಪ್ರಶ್ನೆ ಉದ್ಭವಿಸಿದರೂ, ಪಕ್ಷದ ಚಿಂತನಾ ಲಹರಿ ಬರಿದಾಗಿಲ್ಲ. ಸಮಸ್ಯೆ ಎದುರಿಸಲು ಹೋರಾಡುತ್ತೇವೆ ಎಂದು ಎಎಪಿ ಹೇಳುತ್ತಿತ್ತು.
ದೆಹಲಿ, ಗುಜರಾತ್‌ನಲ್ಲಿ ಪ್ರಚಾರಕ್ಕೆ ಎಎಪಿ ಕೇಜ್ರಿವಾಲ್ ಅವರನ್ನೇ ಆಶ್ರಯಿಸಿತ್ತು. ಕೇಜ್ರಿವಾಲ್ ಹೆಸರಲ್ಲಿ ಪ್ರಚಾರ ನಡೆಸಿತ್ತು. ಪ್ರಚಾರದ ವೇಳೆ ಕೇಜ್ರಿವಾಲ್ ಅವರ ಪ್ರಶ್ನೆಗಳು ಬಿಜೆಪಿಗೆ ಅಹಿತಕರವಾಗಿದ್ದವು.
ಈಗ ಬಂಧನದಿಂದ ಕೇಜ್ರಿವಾಲ್ ಗೈರು ಹಾಜರಿಯಲ್ಲಿ ಎಎಪಿ ಪ್ರಚಾರ ಹೇಗೆ ಮುಂದುವರಿಯುತ್ತದೆ ಎಂಬ ಪ್ರಶ್ನೆ ಮೂಡಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.