ನವದೆಹಲಿ : ದಿಲ್ಲಿ ಸಿಎಂ ಹುದ್ದೆ ಬಿಟ್ಟ ನಂತರ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಅವರು ತೆರವು ಮಾಡಿದ್ದ ಫ್ಲಾಗ್‌ಸ್ಟಾಫ್ ರಸ್ತೆಯ ಸಿಎಂ ಅಧಿಕೃತ ನಿವಾಸಕ್ಕೆ 2 ದಿನದ ಹಿಂದೆ ಸ್ಥಳಾಂತರಗೊಂಡಿದ್ದ ನೂತನ ಮುಖ್ಯಮಂತ್ರಿ ಆತಿಶಿಗೆ ಆಘಾತವಾಗಿದೆ.
ಕೇಂದ್ರ ಸರ್ಕಾರದ ಅಧೀನದ ಲೋಕೋಪಯೋಗಿ ಇಲಾಖೆಯು ಬುಧವಾರ ಅವರನ್ನು ಸಿಎಂ ನಿವಾಸದಿಂದ ತೆರವುಗೊಳಿಸಿ ಮನೆಯನ್ನು ಸೀಲ್ ಮಾಡಿದೆ. ಇದು ಆಪ್-ಉಪರಾಜ್ಯಪಾಲರು-ಕೇಂದ್ರ ಸರ್ಕಾರದ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.
‘ಬೇಕೆಂದೇ ಉಪರಾಜ್ಯಪಾಲರ ಸೂಚನೆ ಮೇರೆಗೆ ಆತಿಶಿ ಅವರನ್ನು ತೆರವು ಮಾಡಿಸಲಾಗಿದೆ. ಬಿಜೆಪಿ ಮುಖಂಡರೊಬ್ಬರಿಗೆ ಈ ನಿವಾಸ ಹಸ್ತಾಂತರಿಸುವ ಸಂಚು ನಡೆದಿದೆ. ನಿವಾಸವು ಅಧಿಕೃತವಾಗಿ ಆತಿಶಿಗೆ ಹಸ್ತಾಂತರ ಆಗಿರಲಿಲ್ಲವಾದರೂ ಔಪಚಾರಿಕತೆ ಪೂರೈಸಿಯೇ ಅವರು ಸೋಮವಾರ ಇಲ್ಲಿ ಶಿಫ್ಟ್ ಆಗಿದ್ದರು. ಆದರೂ ಹಸ್ತಾಂತರವನ್ನು ಬೇಕೆಂದೇ ವಿಳಂಬ ಮಾಡಿ ಅವರನ್ನು ಹೊರಹಾಕಿಸಲಾಗಿದೆ.
ಇದೊಂದು ಕಂಡು ಕೇಳರಿಯದ ನಡೆ’ ಎಂದು ಆಪ್ ದೂರಿದೆ.ಆದರೆ ಆಪ್ ಆರೋಪವನ್ನು ಪಿಡಬ್ಲುಡಿ ಇಲಾಖೆ ನಿರಾಕರಿಸಿದ್ದು, ‘ಅಧಿಕೃತವಾಗಿ ಹಸ್ತಾಂತರ ಆಗದ ನಿವಾಸಗಳು ಇಲಾಖೆಯ ಸ್ವಾಧೀನದಲ್ಲಿ ಇರಬೇಕು. ಹೀಗಾಗಿ ಆತಿಶಿ ಅವರನ್ನು ಹೊರಹೋಗಲು ಸೂಚಿಸಿ ಮನೆ ಕೀಗಳನ್ನು ಪಡೆಯಲಾಗಿದೆ’ ಎಂದಿದೆ.
ಬಿಜೆಪಿ ಕೂಡ ಇದೇ ವಾದವನ್ನು ಇಟ್ಟು ಮನೆಯನ್ನು ಸೀಲ್ ಮಾಡಿದ್ದನ್ನು ಸಮರ್ಥಿಸಿಕೊಂಡಿದೆ.ಈ ನಡುವೆ, ಬೆಳಗ್ಗೆ 11.30ರ ಸುಮಾರಿಗೆ ಆತಿಶಿ ಪಿಡಬ್ಲುಡಿ ಅಧಿಕಾರಿಗಳು ಅವರ ಮನೆಗೆ ಬಂದಿದ್ದು ಹಾಗೂ ಅವರ ಮನೆಯ ಸಾಮಾನು-ಸರಂಜಾಮನ್ನು ಸೈಕಲ್, ಎಕ್ಕಾ ಗಾಡಿ, ಲಗೇಜ್ ವ್ಯಾನ್‌ಗಳಲ್ಲಿ ಕಾರ್ಮಿಕರು ಹೊರಸಾಗಿಸುವ ವಿಡಿಯೋಗಳು ವೈರಲ್ ಆಗಿವೆ.
ಕೇಜ್ರಿವಾಲ್ ಸೆ.17ರಂದು ರಾಜೀನಾಮೆ ನೀಡಿದ್ದರು, ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಳೆದ ಶುಕ್ರವಾರ ಮನೆ ಖಾಲಿ ಮಾಡಿದ್ದರು. ಬಳಿಕ ಈ ನಿವಾಸ ತನಗೇ ದೊರಕುತ್ತದೆ ಎಂಬ ಭಾವನೆಯಿಂದ ಆತಿಶಿ ಸೋಮವಾರ ಈ ನಿವಾಸಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಅವರ ಬಳಿ ನಿವಾಸ ಹಂಚಿಕೆಯ ಅಧಿಕೃತ ಪತ್ರ ಇರಲಿಲ್ಲ.