ಹರ್ಯಾಣದಲ್ಲಿ ಬಿಜೆಪಿಗೆ ಜಿಲೇಬಿ

KannadaprabhaNewsNetwork |  
Published : Oct 09, 2024, 01:49 AM IST
ಮೋದಿ ನಡ್ಡಾ | Kannada Prabha

ಸಾರಾಂಶ

ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ದಾಖಲೆಯ 3ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ‘ಜಯದ ಜಿಲೇಬಿ’ ಸವಿದಿದೆ. ಇನ್ನು ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ಈ ಸಲ ಸರ್ವಾಧಿಕ 29 ಸ್ಥಾನ ಗೆದ್ದಿದೆಯಾದರೂ, ಕಾಶ್ಮೀರ ಭಾಗದಲ್ಲಿ ಉತ್ತಮ ಸ್ಥಾನ ಗಳಿಸಲು ವಿಫಲವಾಗಿದೆ.

ಚಂಡೀಗಢ/ ಶ್ರೀನಗರ: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ದಾಖಲೆಯ 3ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ‘ಜಯದ ಜಿಲೇಬಿ’ ಸವಿದಿದೆ. ಇನ್ನು ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ಈ ಸಲ ಸರ್ವಾಧಿಕ 29 ಸ್ಥಾನ ಗೆದ್ದಿದೆಯಾದರೂ, ಕಾಶ್ಮೀರ ಭಾಗದಲ್ಲಿ ಉತ್ತಮ ಸ್ಥಾನ ಗಳಿಸಲು ವಿಫಲವಾಗಿದೆ. ಹೀಗಾಗಿ 10 ವರ್ಷದ ನಂತರ ನಡೆದ ಇಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.90 ಸ್ಥಾನಗಳ ಹರ್ಯಾಣ ಚುನಾವಣೆ ಫಲಿತಾಂಶದ ಆರಂಭಿಕ 1 ತಾಸಿನ ಅವಧಿಯಲ್ಲಿ ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿದಂತೆ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಸಂಭ್ರಮಾಚರಣೆಯನ್ನೂ ಆರಂಭಿಸಿತು. ಕಾರ್ಯಕರ್ತರಿಗೆ ಹಂಚಲು ಜಿಲೇಬಿಯನ್ನು ತಯಾರಿಸಿಟ್ಟುಕೊಂಡಿತ್ತು. ಆದರೆ ಅನಿರೀಕ್ಷಿತ ಎಂಬಂತೆ 10 ಗಂಟೆ ಸುಮಾರಿಗೆ ಟ್ರೆಂಡ್‌ ಉಲ್ಟಾ ಆಗಿ ಬಿಜೆಪಿ ಮುನ್ನಡೆ ಸಾಧಿಸಿತು. ಮತ್ತೆಂದೂ ಅದು ಹಿನ್ನಡೆ ಸಾಧಿಸದೇ ಸರಳ ಬಹುಮತವಾದ 48 ಸ್ಥಾನ ಗಳಿಸಿ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿತು ಹಾಗೂ ಹರ್ಯಾಣದಲ್ಲಿ ಪ್ರಖ್ಯಾತವಾದ ‘ಮಾಥುರಾಮ್‌ ಹಲ್ವಾಯಿ’ ಬ್ರಾಂಡ್‌ನ ಜಿಲೇಬಿ ಸವಿದು ಬಿಜೆಪಿಗರು ಸಂಭ್ರಮಿಸಿದರು. ಇದೇ ವೇಳೆ, ಈ ಜಿಲೇಬಿ ಬಗ್ಗೆ ಚುನಾವಣಾ ಭಾಷಣದಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಟಾಂಗ್ ನೀಡಿದರು.ಹರ್ಯಾಣದಲ್ಲಿ ಪಕ್ಷವೊಂದು ಹ್ಯಾಟ್ರಿಕ್‌ ಜಯ ಬಾರಿಸಿದ್ದು ಇದೇ ಮೊದಲು. ಪಕ್ಷಕ್ಕೆ ಮತ್ತೊಂದು ಗೆಲುವು ತಂದಕೊಟ್ಟ ಹಾಲಿ ಸಿಎಂ ನಯಾಬ್‌ ಸಿಂಗ್‌ ಸೈನಿ ಮತ್ತೆ ಅಧಿಕಾರಕ್ಕೆ ಏರುವುದು ನಿಶ್ಚಿತ.ಕಾಶ್ಮೀರ ಕಾಂಗ್ರೆಸ್‌-ಎನ್‌ಸಿ ತೆಕ್ಕೆಗೆ:ಇನ್ನು ಜಮ್ಮು-ಕಾಶ್ಮೀರದಲ್ಲಿ 10 ವರ್ಷ ನಂತರ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಯಶಸ್ವಿಯಾಗಿ ಅಧಿಕಾರಕ್ಕೇರಿದೆ. ಈ ಕೂಟ 48 ಸ್ಥಾನ ಪಡೆದಿದೆ. ಮತ್ತೊಂದೆಡೆ ಬಿಜೆಪಿ 29 ಸ್ಥಾನ ಗೆಲ್ಲುವುದರೊಂದಿಗೆ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ ಕಳೆದ ಸಲದ 28ರ ಬದಲು ಈ ಸಲ ಕೇವಲ 3 ಸ್ಥಾನ ಗೆದ್ದು ದಯನೀಯ ಸೋಲು ಕಂಡಿದೆ.

ರಾಜ್ಯದಲ್ಲಿ ಹಿಂದೂ ಬಾಹುಳ್ಯದ ಜಮ್ಮುವಿನಲ್ಲಿ ಬಿಜೆಪಿ ಹೆಚ್ಚೂ ಕಡಿಮೆ ಕ್ಲೀನ್‌ ಸ್ವೀಪ್‌ ಮಾಡಿದ್ದರೆ, ಕಾಶ್ಮೀರ ಭಾಗದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌-ಕಾಂಗ್ರೆಸ್ ಕೂಟ ಪ್ರಾಬಲ್ಯ ಮೆರೆದಿದೆ. ಆದರೆ ರಾಜ್ಯದಲ್ಲಿ ಕಳೆದ ಸಲ 12 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಈ ಸಲ ಕೇವಲ 6 ಸ್ಥಾನಕ್ಕೆ ಇಳಿದಿದ್ದು ಇಲ್ಲಿ ಗಮನಾರ್ಹ.ಇದೇನೇ ಇದ್ದರೂ ಎನ್‌ಸಿ-ಕಾಂಗ್ರೆಸ್‌ ಕೂಟವು ‘ಅತಂತ್ರ ಸ್ಥಿತಿ ಬರಬಹುದು’ ಎಂಬ ಅಂದಾಜನ್ನು ಸುಳ್ಳು ಮಾಡಿದೆ. ಹೀಗಾಗಿ ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾ 2ನೇ ಬಾರಿ ಕಾಶ್ಮೀರ ಸಿಎಂ ಆಗುವುದು ಬಹುತೇಕ ಖಚಿತ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು