ರಾಂಚಿ : ಜಾರ್ಖಂಡ್‌ನಲ್ಲಿ ನಾಗರಿಕ ಸೇವಾ ಪರೀಕ್ಷೆ ನೇಮಕಾತಿ ಅಕ್ರಮ ವಿರೋಧಿಸಿ ವಿದ್ಯಾರ್ಥಿಗಳು (ಜೆನ್ ಝೀ) ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 14ಕ್ಕೆ ದಿನಕ್ಕೆ ಕಾಲಿಟ್ಟಿದೆ. ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಪ್ರತಿಭಟನಾನಿರತರ ಜತೆ ಸರ್ಕಾರ ಮಾತುಕತೆ ನಡೆಸಿ, ಬೇಡಿಕೆ ಪರಿಶೀಲನೆಯ ಭರವಸೆ ನೀಡಿದೆ. ಆದರೆ ಪರೀಕ್ಷೆ ಪೂರ್ತಿ ರದ್ದತಿ ಘೋಷಣೆವರೆಗೆ ಹೋರಾಟ ನಿಲ್ಲಿಸಲ್ಲ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ.

ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯ

14ನೇ ಜೆಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯನ್ನು ರದ್ದುಗೊಳಿಸಬೇಕು ಮತ್ತು ಅಕ್ರಮಗಳ ಬಗ್ಗೆ ಸಿಬಿಐ ಅಥವಾ ರಾಜ್ಯದ ಹೊರಗಿನ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. 6 ಜನ ಉಪವಾಸ ಕೂಡ ಮಾಡುತ್ತಿದ್ದಾರೆ.

ಆಕ್ರೋಶದ ಕಾವು ಜೋರಾಗುತ್ತಿದ್ದಂತೆ, ಸಿಎಂ ಹೇಮಂತ ಸೊರೇನ್‌, ಸಚಿವ ಸದ್ವಿದ್ಯಾ ಕುಮಾರ್‌ರನ್ನು ಮಾತುಕತೆಗೆ ನಿಯೋಜಿಸಿದರು. ಅವರು 11 ವಿದ್ಯಾರ್ಥಿ ನಾಯಕರ ಜತೆ ಮಾತುಕತೆ ನಡೆಸಿ, ಬೇಡಿಕೆ ಪರಿಶೀಲನೆಯ ಭರವಸೆ ನೀಡಿದರು. ಆದರೆ, ‘ಸರ್ಕಾರ ಪರೀಕ್ಷೆ ರದ್ದು ಮಾಡುವವರೆಗೆ ಹೋರಾಟ ನಿಲ್ಲಲ್ಲ. ಆ.10ರಂದು ವಿಧಾನಸಭೆ ಚಲೋ ನಡೆಸುತ್ತೇವೆ’ ಎಂದು ಜೆಪಿಎಸ್ಸಿ ಸುಧಾರಣಾ ಮಂಚ್‌ ನಾಯಕರು ಘೋಷಿಸಿದರು.


ಈ ನಡುವೆ, ಉಪವಾಸ ನಿರತ ಇನ್ನೊಬ್ಬ ನಾಯಕ ದೇವೇಂದ್ರ ಮಹತೋರನ್ನು ಪ್ರತ್ಯೇಕ ಚರ್ಚೆಗೆ ಸರ್ಕಾರ ಆಹ್ವಾನಿಸಿದೆ.

ಅಸ್ವಸ್ಥ:

ಇದರ ನಡುವೆ, ಉಪವಾಸ ನಿರತರ ಪೈಕಿ ರಾಹುಲ್‌ ಕ್ರಾಂತಿ ಎಂಬಾತ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.