ಮುಂಬೈ: ಮನೆ ಕೆಲಸದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಸತತ 10 ವರ್ಷಗಳ ಕಾಲ ಅತ್ಯಾ*ರ ಎಸಗಿದ ಆರೋಪದ ಮೇರೆಗೆ ಧುರಂಧರ್‌ನಲ್ಲಿ ನಟಿಸಿರುವ ಬಾಲಿವುಡ್ ನಟ ನದೀಂ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನದೀಂ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಈ ಹಿಂದೆ ಹಲವು ನಟರ ಮನೆಗಳಲ್ಲಿ ಕೆಲಸದಾಕೆಯಾಗಿದ್ದರು. ಕಳೆದ ವರ್ಷದಿಂದ ನದೀಂ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ತನ್ನ ಮನೆ ಮತ್ತು ನದೀಂ ಮನೆಯಲ್ಲಿ ಹಲವು ಬಾರಿ ನದೀಂ ಮೊದಲು ಮದುವೆ ಆಗುವುದಾಗಿ ನಂಬಿಸಿ ಅತ್ಯಾ*ರ ಎಸಗಿದ್ದಾನೆ. ಜೊತೆಗೆ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಘಟನೆ ಸಂಬಂಧ ಜ.22ರಂದು ಪೊಲೀಸರು ನದೀಂನನ್ನು ಬಂಧಿಸಿದ್ದಾರೆ.
ಮುಂಬೈ: ಶಿವಾಜಿ ಮಹಾರಾಜರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಹಾಗೂ ಉದ್ಧವ ಠಾಕ್ರೆ ಸರ್ಕಾರ ಅಸ್ಥಿರಗೊಳಿಸಿದ್ದ ಆರೋಪ ಹೊತ್ತ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಮಹಾರಾಷ್ಟ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.ಕಾಂಗ್ರೆಸ್ ಹಾಗೂ ಶಿವಸೇನೆ ಯುಬಿಟಿ ನಾಯಕರು, ‘ಇದು ಮರಾಠಿಗರಿಗೆ ಮಾಡಿದ ಅವಮಾನ’ ಎಂದಿದ್ದಾರೆ.
ಶಿವಾಜಿ ಹಳೆಯ ಕಾಲದ ಕಣ್ಮಣಿ. ಈಗಲ್ಲ ಎಂದು ಕೋಶಿಯಾರಿ ಮಹಾರಾಷ್ಟ್ರ ರಾಜ್ಯಪಾಲ ಆಗಿದ್ದಾಗ ಹೇಳಿದ್ದರು. ಇದು ಮರಾಠಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಠಾಕ್ರೆ ಸರ್ಕಾರಕ್ಕೆ ಅನೇಕ ತೊಂದರೆ ನೀಡಿದ ಆರೋಪ ಅವರ ಮೇಲಿತ್ತು.
ಲಖನೌ: ಯುಜಿಸಿ ಕಳೆದ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದಕ್ಕೀಡಾಗಿದ್ದು, ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ, ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಅಧಿಸೂಚನೆ ಪ್ರಕಾರ ಕಾಲೇಜು ಮತ್ತು ವಿವಿಗಳಲ್ಲಿ ಜಾತಿ ತಾರತಮ್ಯವನ್ನು ನಿಲ್ಲಿಸಲು ಸಮಿತಿ ರಚನೆ ಕಡ್ಡಾಯವಾಗಿದೆ. ಈ ಸಮಿತಿಗೆ ಎಸ್ಸಿಎಸ್ಟಿ, ಒಬಿಸಿ ವಿದ್ಯಾರ್ಥಿಗಳು ದೂರು ನೀಡಬಹುದು. ಆದರೆ ಈ ನಿಯಮವು ಮೇಲ್ವರ್ಗದವರು ಅದರಲ್ಲೂ ಬ್ರಾಹ್ಮಣರ ವಿರುದ್ಧ ಸುಖಾಸುಮ್ಮನೇ ದೂರು ನೀಡಲು ಅನುವು ಮಾಡಿಕೊಡುತ್ತದೆ ಎಂಬುದು ರಾಜೀನಾಮೆ ನೀಡಿದವರ ಆರೋಪ.
ಸಿಪಿಎಂ ಸೇರ್ಪಡೆ ಬಗ್ಗೆ ಮಾತು ಈಗ ಸೂಕ್ತವಲ್ಲ: ತರೂರ್ ಮಾರ್ಮಿಕ ನುಡಿ
ತಿರುವನಂತಪುರ: ತಾವು ಕಾಂಗ್ರೆಸ್ ತೊರೆದು ಸಿಪಿಎಂ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ದುಬೈನಲ್ಲಿ ಸಿಪಿಎಂ ನಾಯಕರ ಜತೆ ಮಾತುಕತೆ ನಡೆದಿದೆ ಎಂಬ ವರದಿ ಕುರಿತು ಪ್ರತಿಕ್ರಿಯಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಕರಿಸಿದ್ದಾರೆ.ದುಬೈಗೆ ಲಿಟ್ ಫೆಸ್ಟ್‌ಗಾಗಿ ತೆರಳಿರುವ ತರೂರ್ ಅವರನ್ನು ಸೋಮವಾರ ಪತ್ರಕರ್ತರು ಸಿಪಿಎಂ ಸೇರ್ಪಡೆ ಕುರಿತು ಪ್ರಶ್ನಿಸಿದರು. ಈ ವೇಳೆ ‘ನಾನು ಸಿಪಿಎಂ ಸೇರ್ಪಡೆ ಕುರಿತ ವರದಿಗಳನ್ನು ನೋಡಿದ್ದೇನೆ. ಆದರೆ ವಿದೇಶದಲ್ಲಿ ನಿಂತು ಈ ವಿಚಾರಗಳ ಕುರಿತು ಮಾತನಾಡುವುದು ಸರಿಯಲ್ಲ’ ಎಂದರು.
ತರೂರ್ ಅವರು ಇತ್ತೀಚಿನ ದಿನಗಳಲ್ಲಿ ಪಕ್ಷದಿಂದ ಕಡೆಗಣನೆ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಬೇಸರ ಹೊಂದಿದ್ದಾರೆ ಎನ್ನಲಾಗಿದೆ.
ಹಿಂದಿ ಹಲವು ಭಾಷೆಗಳನ್ನು ಕಬಳಿಸಿದೆ: ಉದಯನಿಧಿ ಕಿಡಿ
ಚೆನ್ನೈ: ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ‘ಹಿಂದಿ’ ವಿರುದ್ಧ ಮತ್ತೆ ಕಿಡಿಕಾರಿದ್ದು, ‘ಹಿಂದಿ ಹೇರಿಕೆಯು ಭಾರತದಲ್ಲಿ ಹಲವು ಮಾತೃಭಾಷೆಗಳನ್ನು ನುಂಗಿ ನೀರು ಕುಡಿದಿದೆ’ ಎಂದು ಆರೋಪಿಸಿದ್ದಾರೆ.
ಭಾಷಾ ಹುತಾತ್ಮರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1960ರ ಹಿಂದಿ ವಿರೋಧಿ ಹೋರಾಟದಲ್ಲಿ ಜೀವತೆತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ತ್ರಿಭಾಷಾ ಸೂತ್ರಕ್ಕೆ ಡಿಎಂಕೆ ಸರ್ಕಾರ ವಿರುದ್ಧವಾಗಿದೆ ಎಂದು ಪುನರುಚ್ಚರಿಸಿದರು.‘ಉತ್ತರ ಭಾರತದಲ್ಲಿ ಹಿಂದಿಯ ಪರಿಚಯದಿಂದಾಗಿ ಹರಿಯಾಣವಿ, ಭೋಜ್‌ಪುರಿ, ಬಿಹಾರಿ ಮತ್ತು ಛತ್ತೀಸ್‌ಗಢಿಯಂಥ ಹಲವು ಸ್ಥಳೀಯ ಮಾತೃಭಾಷೆಗಳು ಕ್ರಮೇಣ ಕಣ್ಮರೆಯಾಗಿವೆ. ಯಾವ ರೀತಿ ಭಾಷಾ ಪ್ರಾಬಲ್ಯ ಪ್ರಾದೇಶಿಕ ಗುರುತು ಮತ್ತು ಸಂಸ್ಕೃತಿ ನಾಶ ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿ’ ಎಂದರು.
‘ಯಾವ್ಯಾವ ರಾಜ್ಯಗಳಿಗೆ ಹಿಂದಿ ಪ್ರವೇಶ ಆಗಿದೆಯೋ ಅಲ್ಲೆಲ್ಲಾ ಜನ ತಮ್ಮ ಮಾತೃಭಾಷೆ ಮರೆತಿದ್ದಾರೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹಿಂದಿ ಹೇರಿಕೆಗೆ ಇಂದಿಗೂ ವಿರೋಧ ಮಾಡುತ್ತಲೇ ಬಂದಿದ್ದಾರೆ’ ಎಂದರು.’ತ್ರಿಭಾಷಾ ಸೂತ್ರವು ಹಿಂದಿ ಹೇರಿಕೆ ತಂತ್ರವಾಗಿದೆ. ತ್ರಿಭಾಷಾ ಸೂತ್ರಕ್ಕೆ ವಿರೋಧಿಸುತ್ತಿರುವ ಸ್ಟಾಲಿನ್ ಅವರ ಉದ್ದೇಶ ಕೇವಲ ತಮಿಳು ಭಾಷೆ, ಸಂಸ್ಕೃತಿ ಹಾಗೂ ಗುರುತನ್ನು ರಕ್ಷಿಸುವುದೇ ಆಗಿದೆ’ ಎಂದರು.
‘ತಮಿಳುನಾಡು ಹಿಂದಿನಿಂದಲೂ ತಮಿಳು-ಇಂಗ್ಲಿಷ್ ಎಂಬ ದ್ವಿಭಾಷಾ ಸೂತ್ರಕ್ಕೆ ಬದ್ಧವಾಗಿದೆ. ಇದು ರಾಜ್ಯದ ಶಿಕ್ಷಣ, ಉದ್ಯಮ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿಗೆ ಉತ್ತೇಜನ ನೀಡಿದ ಪ್ರಮಾಣಿತ ಮಾದರಿಯಾಗಿದೆ’ ಎಂದು ಹೇಳಿದರು.