ಗಗನಯಾನಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಗೌರವ

KannadaprabhaNewsNetwork |  
Published : Jan 27, 2026, 03:00 AM ISTUpdated : Jan 27, 2026, 05:00 AM IST
Shubhanshu Shukla

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಗನಯಾನಿ, ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರವನ್ನು ನೀಡಿ ಸೋಮವಾರ ಸನ್ಮಾನಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯಪಥದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಗನಯಾನಿ, ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರವನ್ನು ನೀಡಿ ಸೋಮವಾರ ಸನ್ಮಾನಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯಪಥದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಶುಕ್ಲಾ ಅವರು ಪೈಲಟ್‌ ಆಗಿ 2000 ಗಂಟೆಗಳ ಕಾಲ ವಿವಿಧ ಯುದ್ಧ ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ. ಕಳೆದ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಈ ಮೂಲಕ ಅಲ್ಲಿಗೆ ತೆರಳಿದ ಮೊದಲ ಭಾರತೀಯ ಎನ್ನಿಸಿಕೊಂಡಿದ್ದರು.

ಬನಾರಸಿ ಬಂದ್‌ಗಲಾ ಜಾಕೆಟ್‌ನಲ್ಲಿ ಮಿಂಚಿನ ಇಯು ಮುಖ್ಯಸ್ಥೆ

ನವದೆಹಲಿ: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುರೋಪ್‌ ಒಕ್ಕೂಟ (ಇಯು) ಮುಖ್ಯಸ್ಥೆ ಉರ್ಸುಲಾ ವೊನ್‌ ಡಿರ್‌ ಲೆಯೆನ್‌ ಅವರು ಭಾರತೀಯ ಸಾಂಪ್ರದಾಯಿಕ ಬಂದ್ ಗಲಾ ಉಡುಗೆ ತೊಟ್ಟ ಎಲ್ಲರ ಗಮನ ಸೆಳೆದರು. ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಿರ್ಮಿಸಲಾದ ಬನಾರಸಿ ಬಂದ್‌ಗಲಾ ಜಾಕೆಟ್‌ ತೊಟ್ಟಿದ್ದ ಉರ್ಸುಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕುಳಿತು ಪಥಸಂಚಲನ, ವೈಮಾನಿಕ ಪ್ರದರ್ಶನ, ಟ್ಯಾಬ್ಲೋ ವೀಕ್ಷಿಸಿದರು. ಗಾಢ ಕೆಂಪುಬಣ್ಣದ ಮೇಲೆ ಚಿನ್ನದ ಬಣ್ಣದಲ್ಲಿ ಹೂವಿನ ವಿನ್ಯಾಸಗಳನ್ನು ಹೊಂದಿದ್ದ ವಸ್ತ್ರವನ್ನು ಧರಿಸಿದ್ದು, ಭಾರತೀಯರ ಮನಸೂರೆಗೊಳಿಸಿತು. ಐರೋಪ್ಯ ಮಂಡಳಿಯ ಅಧ್ಯಕ್ಷ ಆ್ಯಂಟೋನಿಯೋ ಕೋಸ್ಟಾ ಕೂಡ ಅತಿಥಿಯಾಗಿದ್ದರು.

3ನೇ ಸಾಲಲ್ಲಿ ಖರ್ಗೆ, ರಾಹುಲ್ ಗಾಂಧಿ: ವಿವಾದ

ನವದೆಹಲಿ: ಇಲ್ಲಿನ ಕರ್ತವ್ಯಪಥದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಕಾಂಗ್ರೆಸ್‌ ನಾಯಕರಾದ ಖರ್ಗೆ, ರಾಹುಲ್‌ ಗಾಂಧಿ ಪಾಲ್ಗೊಂಡರು. ಆದರೆ ರಾಹುಲ್‌ ಗಾಂಧಿ ಲೋಕಸಭೆ ವಿಪಕ್ಷ ನಾಯಕರಾಗಿದ್ದರೂ ಅವರಿಗೆ 3ನೇ ಸಾಲಿನಲ್ಲಿ ಸೀಟು ನೀಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಕಿಡಿಕಾರಿದೆ.

ಮೊದಲು ಖರ್ಗೆ ಕೂಡ 3ನೇ ಸಾಲಲ್ಲಿ ರಾಹುಲ್‌ ಗಾಂಧಿ ಜತೆ ಆಸೀನರಾಗಿದ್ದರು. ಆದರೆ ನಂತರ ಮುಂದೆ ಬಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಜತೆ ಆಸೀನರಾದರು.ಪ್ರತಿಪಕ್ಷ ನಾಯಕರು ಶಿಷ್ಟಾಚಾರದ ಪ್ರಕಾರ 7ನೇ ಪ್ರಮುಖ ವ್ಯಕ್ತಿ. ಅವರಿಗೆ ಮೊದಲ ಸಾಲಿನಲ್ಲೇ ಆದ್ಯತೆ ನೀಡಬೇಕಿತ್ತು. ಆದರೆ ಏಕೆ ನೀಡಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಭಾರತ, ಚೀನಾ ಒಳ್ಳೆಯ ಸ್ನೇಹಿತರು: ಕ್ಸಿ ಜಿನ್‌ಪಿಂಗ್‌

ಬೀಜಿಂಗ್‌: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಭಾರತಕ್ಕೆ 77ನೇ ಗಣರಾಜ್ಯೋತ್ಸವ ಶುಭಾಶಯ ಕೋರಿದ್ದು, ‘ಭಾರತ ಮತ್ತು ಚೀನಾವನ್ನು ಒಳ್ಳೆಯ ಸ್ನೇಹಿತರು, ನೆರೆಹೊರೆಯವರು ಮತ್ತು ಸ್ನೇಹಿತರು. ಡ್ರ್ಯಾಗನ್‌ ಮತ್ತು ಆನೆ ಜತೆಯಾಗಿ ಕುಣಿಯುವುದು ಎರಡೂ ದೇಶಗಳ ಪಾಲಿಗೆ ಸೂಕ್ತವಾದ ಆಯ್ಕೆಯಾಗಿದೆ’ ಎಂದು ಹೇಳಿದ್ದಾರೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ ಶುಭಾಶಯ ಸಂದೇಶದಲ್ಲಿ ಅವರು ಎರಡೂ ದೇಶಗಳು ಪರಸ್ಪರರ ಅಭಿವೃದ್ಧಿಗೆ ಪಾಲುದಾರರು ಹಾಗೂ ಗೆಳೆಯರ ರೀತಿ ಒಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಸಂಬಂಧವು ಎರಡೂ ದೇಶಗಳ ನಡುವಿನ ಜನರ ಹಾಗೂ ಮೂಲಭೂತ ಹಿತಾಸಕ್ತಿಗೆ ಅನುಗುಣವಾಗಿ ಸುಧಾರಣೆ ಕಾಣುತ್ತಿದೆ. ಇದು ಭಾರತ ಮತ್ತು ವಿಶ್ವ ಶಾಂತಿ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹೇಳಿಕೊಂಡಿದ್ದಾರೆ.ವ್ಯೂಹಾತ್ಮಕ ಸಂವಹನ ಬಲಪಡಿಸುವ, ಸಹಕಾರ ಹಾಗೂ ವಿನಿಮಯದ ವಿಸ್ತರಣೆ, ಪರಸ್ಪರರ ಕಳವಳ ಪರಿಹರಿಸುವ ಹಾಗೂ ಆರೋಗ್ಯಕರ, ಸ್ಥಿರ ಅಭಿವೃದ್ಧಿಗೆ ಎರಡೂ ದೇಶಗಳು ಬದ್ಧವಾಗಿರಬೇಕಿದೆ ಎಂದು ಅವರು ಹೇಳಿದ್ದಾರೆ.

ಕಡುಗೆಂಪು ಬಣ್ಣದ ಪೇಟದಲ್ಲಿ ಕಂಗೊಳಿಸಿದ ಮೋದಿ!

ನವದೆಹಲಿ: ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ವಿಶಿಷ್ಟ ವಿನ್ಯಾಸಗಳ ಪೇಟವನ್ನು ಧರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಹ ಹೂವಿನ ಪಕಳೆ ಆಕಾರದ ವಿನ್ಯಾಸಗಳುಳ್ಳ ಪೇಟವನ್ನು ಧರಿಸಿ ಗಣರಾಜ್ಯ ದಿನದ ಪಥಸಂಚಲನದಲ್ಲಿ ಪಾಲ್ಗೊಂಡರು. ಮೆರೂನ್‌ ಮತ್ತು ತಿಳಿ ಹಸಿರು ಬಣ್ಣ ಮಿಶ್ರಿತ ಶಾಲ್‌ನಲ್ಲಿ ಚಿನ್ನದ ಬಣ್ಣದಲ್ಲಿ ಹೂವಿನ ಪಕಳೆ ಆಹಾರ ಹೊಂದಿದ್ದ ಪೇಟ ಧರಿಸಿದ್ದರು. ಈ ಪೇಟದ ಎಡಬದಿ ಬಹುಬಣ್ಣಗಳ ನೇಯ್ಗೆ ಕಂಗೊಳಿಸಿತ್ತು. ಇದರೊಂದಿಗೆ ಕಡುನೀಲಿ ಬಣ್ಣದ ಪೈಜಾಮದ ಮೇಲೆ ತಿಳಿ ನೀಲಿ ಬಣ್ಣದ ಜಾಕೆಟ್‌ ಅನ್ನು ಮೋದಿ ಧರಿಸಿದ್ದರು.

ಗ್ಯಾಲರಿಗಳಿಗೆ ಕರ್ನಾಟಕದ ಕೃಷ್ಣಾ ಸೇರಿ ವಿವಿಧ ನದಿಗಳ ಹೆಸರು

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ನ ಸುತ್ತಮುತ್ತಲಿನ ಗ್ಯಾಲರಿಗಳಿಗೆ ವಿವಿಐಪಿ, ವಿಐಪಿ ಎಂಬ ಹೆಸರುಗಳಿಗೆ ಮುಕ್ತಿ ನೀಡಿ, ಭಾರತದ ನದಿಗಳ ಹೆಸರುಗಳನ್ನು ಇರಿಸಲಾಗಿತ್ತು. ಗಂಗಾ, ಯಮುನಾ, ಗೋದಾವರಿ, ಕಾವೇರಿ, ಪೆರಿಯಾರ್‌, ನರ್ಮದಾ, ಕರ್ನಾಟಕದ ಕೃಷ್ಣಾ, ಬ್ರಹ್ಮಪುತ್ರ, ವೈಗೈ, ಚೆನಾಬ್‌, ರಾವಿ, ಚಂಬಲ್‌, ಗಂಢಕ್‌, ಘಾಗ್ರ, ಝೇಲಂ, ತೀಸ್ಟಾ, ಸಟ್ಲೇಜ್‌, ಬಿಯಾಸ್‌ ಸೇರಿ ಮುಂತಾದ ನದಿಗಳ ಹೆಸರುಗಳನ್ನು ನೋಡುಗರ ಗ್ಯಾಲರಿಗಳಿಗೆ ಇರಿಸಲಾಗಿತ್ತು.ಜ.29ರಂದು ನಡೆವ ಬೀಟಿಂಗ್‌ ರಿಟ್ರೀಟ್‌ ಸಮಾರಂಭಕ್ಕೆ ಭಾರತೀಯ ವಾದ್ಯಗಳ ಹೆಸರು ಇಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಂದೇ ಮಾತರಂಗೂ ರಾಷ್ಟ್ರಗೀತೆ ರೀತಿ ಸ್ಥಾನಕ್ಕೆ ಚಿಂತನೆ
ಕಾಂಬೋ, ಥಾಯ್‌ ಯುದ್ಧ ವೇಳೆ ಕೆಡವಲಾಗಿದ್ದ ವಿಷ್ಣು ಪ್ರತಿಮೆ ಸ್ಥಳಕ್ಕೆ ಬುದ್ಧ ಪ್ರತಿಮೆ