ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಗಿದ್ದ ವೆಚ್ಚ ಎಷ್ಟು ? ಕುತೂಹಲಕಾರಿ ಸಂಗತಿಯಿದು

Published : Jan 26, 2026, 05:53 AM IST
republic day

ಸಾರಾಂಶ

77ನೇ ಗಣರಾಜ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೇಶದ ಸೇನಾ, ಸಾಂಸ್ಕೃತಿಕ ಸಾಮರ್ಥ್ಯವನ್ನು ಜಗತ್ತಿನೆದುರಿಗೆ ತೆರೆದಿಡುವ ಕಾರ್ಯಕ್ರಮಕ್ಕೆ ಈ ಬಾರಿ ವಂದೇ ಮಾತರಂ ಪರಿಕಲ್ಪನೆ ಇನ್ನಷ್ಟು ಮೆರಗು ನೀಡಲಿದೆ.

 77ನೇ ಗಣರಾಜ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೇಶದ ಸೇನಾ, ಸಾಂಸ್ಕೃತಿಕ ಸಾಮರ್ಥ್ಯವನ್ನು ಜಗತ್ತಿನೆದುರಿಗೆ ತೆರೆದಿಡುವ ಕಾರ್ಯಕ್ರಮಕ್ಕೆ ಈ ಬಾರಿ ವಂದೇ ಮಾತರಂ ಪರಿಕಲ್ಪನೆ ಇನ್ನಷ್ಟು ಮೆರಗು ನೀಡಲಿದೆ. ವಂದೇಮಾತರಂಗೆ 150 ವರ್ಷ ಸಂದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಕಾರ್ಯಕ್ರಮ ಈ ಬಾರಿ ಇನ್ನಷ್ಟು ಹೊಸತನಗಳಿಗೆ ಸಾಕ್ಷಿಯಾಗಲಿದೆ. 1950ರಲ್ಲಿ ನಡೆದ ಮೊದಲ ಸಲ ಗಣರಾಜ್ಯೋತ್ಸವ ಅತ್ಯಂತ ಸರಳವಾಗಿ 11093 ರು. ವೆಚ್ಚದಲ್ಲಿ ಮುಗಿದಿದ್ದರೆ, 77ನೇ ವರ್ಷಕ್ಕೆ ನೂರಾರು ಕೋಟಿ ರು. ಹಾಗಿದ್ದರೆ 7 ದಶಕದಲ್ಲಿ ಭಾರತದ ಗಣತಂತ್ರ ನಡೆದು ಬಂದಿದ್ದು ಹೇಗೆ ? ಈ ವರ್ಷದ ವಿಶೇಷತೆಗಳೇನು ಎನ್ನುವುದರ ಕುರಿತು ಸ್ವಾರಸ್ಯಕರ ಸಂಗತಿ ಇಲ್ಲಿದೆ.

ನವ್ಯಶ್ರೀ

ಸರಳವಾಗಿದ್ದು ಮೊದಲ ಗಣರಾಜ್ಯೋತ್ಸವ ಆಚರಣೆ

ಮೊದಲ ಗಣರಾಜ್ಯೋತ್ಸವ ಸರಳವಾಗಿತ್ತು. 1950ರಂದು ಜ.26ರ ಗುರುವಾರ 10.18ಕ್ಕೆ ಗಂಟೆಗೆ ಆಗಿನ ವೈಸ್‌ರಾಯ್‌ ಭವನದ ದರ್ಬಾರ್‌ ಹಾಲ್‌, ಈಗಿನ ರಾಷ್ಟ್ರಪತಿ ಭವನದಲ್ಲಿ ಭಾರತದ ಕೊನೆಯ ಗವರ್ನರ್‌ ಸಿ,ರಾಜಗೋಪಾಲಾಚಾರಿ ಅವರು ಭಾರತವನ್ನು ಪ್ರಜಾಸತ್ತಾತ್ಮಕ ರಾಷ್ಟ್ರವೆಂದು ಘೋಷಿಸಿದ್ದರು. ಅದಾಗಿ 6 ನಿಮಿಷಗಳಲ್ಲೇ ರಾಜೇಂದ್ರ ಪ್ರಸಾದ್‌ ಅವರನ್ನು ಮೊದಲ ರಾಷ್ಟ್ರಪತಿಯಾಗಿ ಘೋಷಿಸಲಾಯಿತು. ಬಳಿಕ ಅವರು ಪ್ರಮಾಣವಚನ ಸ್ವೀಕರಿಸಿದರ. ನಂತರ ಗವರ್ನರ್‌ ಧ್ವಜ ಕೆಳಗಿಳಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಧ್ವಜ ಹಾರಿಸಲಾಯಿತು. ರಾಷ್ಟ್ರಗೀತೆ ಮೊಳಗಿತು. ಅನಂತರವೇ ಆರಂಭವಾಗಿದ್ದು ಸಂಭ್ರಮ. ಮೊದಲ ಗಣರಾಜ್ಯೋತ್ಸವ ಮೆರವಣಿಗೆಯನ್ನು ಇರ್ವಿನ್ ಆಂಫಿಥಿಯೇಟರ್‌ನಲ್ಲಿ (ಈಗಿನ ಧ್ಯಾನ್‌ ಚಂದ್‌ ರಾಷ್ಟ್ರೀಯ ಕ್ರೀಡಾಂಗಣ) ನಡೆಸಲಾಯಿತು. ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು ರಾಷ್ಟ್ರ ಲಾಂಛನವಾಗಿದ್ದ ಅಶೋಕ ಲಾಂಛನವನ್ನು ಹಿಡಿದು ಅಂಗರಕ್ಷಕರೊಂದಿಗೆ ಭವನದಿಂದ ಹೊರಟರು. ಮೆರವಣಿಗೆ ಸಾಗಿತು. ಬಳಿಕ ಅವರು ಮೊದಲ ಗಣರಾಜ್ಯೋತ್ಸವ ಭಾಷಣ ಮಾಡಿದರು. 15,000 ಮಂದಿ ಇದಕ್ಕೆ ಸಾಕ್ಷಿಯಾಗಿದ್ದರು.

ಮೆರವಣಿಗೆಯಲ್ಲಿ 3000 ಸೈನಿಕರು:

ರಾಜೇಂದ್ರ ಪ್ರಸಾದ್‌ರ ಪ್ರಮಾಣ ವಚನದ ಬಳಿಕ ಅತ್ಯಂತ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಯಿತು. ಈಗಿನ ರೀತಿ ಟ್ಯಾಬ್ಲೋ, ಮೋಟಾರ್‌ ಸೈಕಲ್‌ ಸಾಹಸ, ಸಾಂಸ್ಕೃತಿಕ ಪ್ರದರ್ಶನ ಇರಲಿಲ್ಲ. ಸಂಪೂರ್ಣವಾಗಿ ಸಶಸ್ತ್ರ ಪಡೆಗಳ ಮೇಲೆ ಕಾರ್ಯಕ್ರಮ ಕೇಂದ್ರೀಕೃತವಾಗಿತ್ತು. ಸೇನಾ ಶಕ್ತಿ, ದೇಶದ ಸಂಸ್ಕೃತಿಯನ್ನು ಬಿಂಬಿಸುವಂತೆ ರೂಪಿಸಲಾಗಿತ್ತು. 3000 ಸೈನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗೂರ್ಖಾ ರೆಜಿಮೆಂಟ್‌ನ ಬ್ರಿಗೇಡಿಯರ್‌ ಮೋತಿ ಸಾಗರ್‌ ಸೈನಿಕರ ಪಥ ಸಂಚಲನದ ನೇತೃತ್ವ ವಹಿಸಿದ್ದರು.

ಕೇವಲ 11000 ರು.ವೆಚ್ಚ

ಭಾರತ ಸ್ವಾತಂತ್ರ ಪಡೆದ ಮೂರು ವರ್ಷದ ಬಳಿಕ ಭಾರತದ ಪ್ರಜಾಪ್ರಭುತ್ವ ಹಬ್ಬಕ್ಕೆ ಸಾಕ್ಷಿಯಾಗಿತ್ತು. ಅಂದಿನ ಸರ್ಕಾರ ಖರ್ಚು ಮಾಡಿದ್ದು, ಕೇವಲ 11,093 ರು. ಮಾತ್ರ. ಆದರೆ ಆ ಬಳಿಕ ಆ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿತು. ಅದಾಗಿ 6 ವರ್ಷಗಳಲ್ಲೇ ಲಕ್ಷಕ್ಕೆ ಏರಿತ್ತು. ವರದಿಗಳ ಪ್ರಕಾರ 1956 ರಲ್ಲಿ 5.75 ಲಕ್ಷ ರು. , 1971ರಲ್ಲಿ 17.12 ಲಕ್ಷ ರು. , 1973ರಲ್ಲಿ 23.38 ಲಕ್ಷ ರು. 1988ರಲ್ಲಿ 69.69 ಲಕ್ಷ ರು.ಗೆ ಹೆಚ್ಚಳವಾಯಿತು. ಇತ್ತೀಚಿನ ಅಂಕಿ ಅಂಶಗಳು ಲಭ್ಯವಿಲ್ಲದಿದ್ದರೂ 2015ರಲ್ಲಿ 320 ಕೋಟಿ ರು. ಖರ್ಚಾಗಿತ್ತು.

ಮೊದಲ ವಿದೇಶಿ ಅತಿಥಿ ಸುಕರ್ಣೋ

ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ವಿದೇಶಿ ಅತಿಥಿಗಳ ಆಹ್ವಾನಿಸುವುದು ವಾಡಿಕೆ. 1950ರಲ್ಲಿ, ಇಂಡೋನೇಷ್ಯಾದ ಮೊದಲ ಪ್ರಧಾನಿ ಸುಕರ್ಣೋ ಮೊದಲ ಅತಿಥಿಯಾಗಿದ್ದರು. ಈ ಭೇಟಿ ಉಭಯ ದೇಶಗಳ ರಾಜತಾಂತ್ರಿಕತೆಯ ದ್ಯೋತಕವಾಗಿತ್ತು. ಸುಕರ್ಣೋ ಆಹ್ವಾನದ ಮೂಲಕ ಡಚ್ ಆಳ್ವಿಕೆಯ ವಿರುದ್ಧ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟವನ್ನು ಭಾರತದ ಪ್ರಧಾನಿ ನೆಹರೂ ಸದ್ದಿಲ್ಲದೇ ಬೆಂಬಲಿಸಿದ್ದರು. ಹೀಗಾಗಿ ಸುಕರ್ಣೋ ಉಪಸ್ಥಿತಿಯು ಹೊಸದಾಗಿ ಸ್ವತಂತ್ರ ರಾಷ್ಟ್ರಗಳ ನಡುವಿನ ಒಗ್ಗಟ್ಟು ಪ್ರದರ್ಶಿಸಿತ್ತು. ಅಂದಿನಿಂದ ಪ್ರತಿ ವರ್ಷ ಈ ಸಂಪ್ರದಾಯ ಮುಂದುವರೆದಿದೆ. ಆದರೆ 1952, 1953, 1966, 2021 ಮತ್ತು 2022 ರಲ್ಲಿ ವಿದೇಶಿ ಗಣ್ಯರಿಗೆ ಆಹ್ವಾನ ಇರಲಿಲ್ಲ.

 ಹಲವು ಮೊದಲುಗಳಿಗೆ ಕರ್ತವ್ಯಪಥ ಸಾಕ್ಷಿ

ಪ್ರತಿ ವರ್ಷ ಹಲವು ಹೊಸತನಗಳಿಗೆ ಸಾಕ್ಷಿಯಾಗುವ ಪರೇಡ್‌, ಆ ಸಂಪ್ರದಾಯವನ್ನು ಈ ಬಾರಿಯೂ ಪಾಲಿಸಲಿದೆ. ಸೂರ್ಯಾಸ್ತ್ರ ರಾಕೆಟ್‌ ಲಾಂಚರ್‌, ಭೈರವ ಕಮಾಂಡರ್‌. 6000ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ, 10,000 ಅತಿಥಿಗಳು ಹೀಗೆ ಹತ್ತು ಹಲವು ಪ್ರಥಮಗಳಿಗೆ ಈ ಬಾರಿಯ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ಬ್ಯಾಟರ್ ಅರೇ/ ಸಮರ ವಿನ್ಯಾಸ:

ಕರ್ತವ್ಯಪಥದಲ್ಲಿ ಭಾರತೀಯ ಸೇನೆಯು ಪಥಸಂಚಲನ ನಡೆಸುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಬ್ಯಾಟಲ್‌ ಅರೇ ಅಂದರೆ ಯುದ್ಧ ಸನ್ನದ್ಧ ಸ್ಥಿತಿಯಲ್ಲೇ ಪಾಲ್ಗೊಳ್ಳಲಿದೆ. ಯುದ್ಧ ಭೂಮಿಯಲ್ಲಿ ಸೇನೆ ಟ್ಯಾಂಕರ್‌, ಕ್ಷಿಪಣಿ, ಡ್ರೋನ್‌ಗಳೊಂದಿಗೆ ಸೇನೆ ಹೇಗೆ ಸಜ್ಜಾಗಿರುತ್ತದೆಯೋ ಅದೇ ರೀತಿ ಯಾಂತ್ರೀಕೃತ ಪಡೆಗಳು ಹೆಜ್ಜೆ ಹಾಕಲಿವೆ.

ಅತಿಥಿಗಳ ಗ್ಯಾಲರಿಗೆ ನದಿ ಹೆಸರು:

ಕರ್ತವ್ಯಪಥದಲ್ಲಿರುವ ಅತಿಥಿಗಳ ಗ್ಯಾಲರಿಗೆ ಈ ಬಾರಿ ನದಿ ಹೆಸರಿಡಲಾಗಿದೆ. ಬಿಯಾಸ್‌, ಬ್ರಹ್ಮಪುತ್ರ, ಚಂಬಲ್‌, ಚೆನಾಬ್‌, ಗಂಗಾ, ಸಿಂಧೂ, ಝೀಲಂ, ಕಾವೇರಿ, ಕೃಷ್ಣ ಯುಮುನಾ ಸೇರಿದಂತೆ ಪ್ರಮುಖ ನದಿಗಳ ಹೆಸರು ಇಡಲಾಗಿದೆ.

ಸೂರ್ಯಾಸ್ತ್ರ ರಾಕೆಟ್‌, ಭೈರವ ಮೆರುಗು:

ಮೊದಲ ಬಾರಿಗೆ ಸೂರ್ಯಾಸ್ತ್ರ ರಾಕೆಟ್‌ ಲಾಂಚರ್‌ ವ್ಯವಸ್ಥೆ ಪ್ರದರ್ಶಿಸಲಾಗುತ್ತಿದೆ. 300 ಕಿ.ಮೀ ತನಕ ಗುರಿ ತಲುಪಿ, ಶತ್ರಗಳ ಅಡಗುತಾಣ ಧ್ವಂಸ ಮಾಡಬಲ್ಲ ಈ ರಾಕೆಟ್‌ ಇಸ್ರೇಲ್‌ ನೆರವಿನಿಂದ ಮೇಕ್‌ಇನ್‌ ಇಂಡಿಯಾ ಕಲ್ಪನೆಯಲ್ಲಿ ನಿರ್ಮಿಸಲಾಗಿದೆ. ಹೊಸದಾಗಿ ನಿರ್ಮಿಸಲಾದ ಬೈರವ ಬೆಟಾಲಿಯನ್‌ ಕೂಡ ಭಾಗಿಯಾಗಲಿದೆ.

ಮೊದಲ ಬಾರಿ ಪ್ರಾಣಿಗಳು, ಮುಧೋಳ ನಾಯಿ

ಇದೇ ಮೊದಲ ಸಲ ಸೇನೆಯಲ್ಲಿನ ಪ್ರಾಣಿಗಳು ಕೂಡಾ ಪರೇಡ್‌ನಲ್ಲಿ ಭಾಗಿಯಾಗಲಿವೆ. ಇದರಲ್ಲಿ ಸೇನೆಯಲ್ಲಿರುವ ಕರ್ನಾಟಕದ ಮುಧೋಳ ನಾಯಿ, ಜನ್ಸ್‌ಕಾರ್‌ ಕುದುರೆ, ಅಪರೂಪದ ಬ್ಯಾಕ್ಟ್ರಿಯನ್ ಒಂಟೆ ಸೇರಿ ಹಲವು ಪ್ರಾಣಿಗಳು ಆಕರ್ಷಕ ವಸ್ತ್ರದೊಂದಿಗೆ ಭಾಗಿಯಾಗಲಿವೆ.

ಸಿಆರ್‌ಪಿಎಫ್‌ ತುಕಡಿಗೆ ಸಿಮ್ರನ್‌ ಸಾರಥ್ಯ

ಇದೇ ಮೊದಲ ಬಾರಿ ಸಿಆರ್‌ಪಿಎಫ್‌ನ ಪುರುಷರ ತುಕಡಿಯನ್ನು ಮಹಿಳಾ ಅಧಿಕಾರಿ ಮುನ್ನಡೆಸಲಿದ್ದಾರೆ. ಜಮ್ಮು ಕಾಶ್ಮೀರದವರಾದ ಸಹಾಯಕ ಕಮಾಂಡೆಂಟ್ ಸಿಮ್ರನ್‌ ಬಾಲಾ 140 ಪುರುಷರಿರುವ ತಂಡ ಮುನ್ನಡೆಸಲಿದ್ದಾರೆ.ರಜೌರಿಯ ನೌಷೇರಾದವರಾದ ಸಿಮ್ರನ್‌, ಸಿಆರ್‌ಪಿಎಫ್‌ಗೆ ಅಧಿಕಾರಿಯಾಗಿ ಸೇರಿದ ಆ ಗ್ರಾಮದ ಮೊದಲ ಮಹಿಳೆ.

10000 ವಿಶೇಷ ಅತಿಧಿಗಳಿಗೆ ಆಹ್ವಾನ

ಕ್ರೀಡೆ, ಕೃಷಿ, ವಿಜ್ಞಾನ, ಉದ್ಯಮ, ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದು ಜೀವನದಲ್ಲಿ ಯಶಸ್ವಿಯಾದವರು, ವಿಜ್ಞಾನಿಗಳು, ಕಾರ್ಮಿಕರು, ಬಿಕ್ಷಾಟನೆಯಿಂದ ರಕ್ಷಿಸಲ್ಪಟ್ಟವರು, ಕುಶಲಕರ್ಮಿಗಳು, ಸಾಧಕ ಸ್ವಸಹಾಯ ಸಂಘಗಳು, ಮಹಿಳಾ ಉದ್ಯಮಿಗಳು, ಬೀದಿ ವರ್ತಕರು, ಸಾಧಕ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ.

ರಾಜ್ಯಗಳ ಸಾಂಪ್ರದಾಯಿಕ ವಸ್ತ್ರ ಪ್ರದರ್ಶನ

ದೆಹಲಿಯಲ್ಲಿ ಇರುವ ವಿವಿಧ ರಾಜ್ಯಗಳ 50 ದಂಪತಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅವರು ತಮ್ಮ ತಮ್ಮ ರಾಜ್ಯಗಳ ಸಾಂಪ್ರದಾಯಿಕ ವಸ್ತ್ರದಲ್ಲಿ ಭಾಗಿಯಾಗಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಂದು ‘ವಂದೇ..’ ಪರಿಕಲ್ಪನೆಯಲ್ಲಿ 77ನೇ ಗಣರಾಜ್ಯ ದಿನ
ಮೈಸೂರಿನ ಮಾಜಿ ಬಸ್‌ ಕಂಡಕ್ಟರ್‌ ಅಂಕೇಗೌಡ ಸೇರಿ 45 ಅನನ್ಯ ತೆರೆಮರೆ ಸಾಧಕರಿಗೆ ಪದ್ಮ ಗೌರವ