ನವದೆಹಲಿ: 1xBet ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ್ಯಪ್ ಪರ ಪ್ರಚಾರ ನಡೆಸಿದ್ದ ಜನಪ್ರಿಯ ನಟ ಸೋನು ಸೂದ್ ಬುಧವಾರ ಇ.ಡಿ. ವಿಚಾರಣೆಗೆ ಹಾಜರಾದರು. ಈ ವೇಳೆ ಸೋನು ಸೂದ್ ಅವರಿಗೆ ಬೆಟ್ಟಿಂಗ್ ಆ್ಯಪ್ ನಂಟು ಸೇರಿ ಹಲವು ಪ್ರಶ್ನೆಗಳನ್ನು ಕೇಳಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಶಿಖರ್ ಧವನ್, ರಾಬಿನ್ ಉತ್ತಪ್ಪ, ನಟಿ ಮಿಮಿ ಚಕ್ರವರ್ತಿ, ಊರ್ವಶಿ ರೌಟೇಲಾ ಸೇರಿ ಹಲವು ಖ್ಯಾತನಾಮರನ್ನು ಇ,ಡಿ. ವಿಚಾರಣೆ ನಡೆದಿದೆ.
ಈಗ ಕತಾರ್‌ನಲ್ಲಿಯೂ ಯುಪಿಐ ಮೂಲಕ ಪಾವತಿ ಸಾಧ್ಯ
ನವದೆಹಲಿ : ಭಾರತದ ಜನಪ್ರಿಯ ಪಾವತಿ ವೇದಿಕೆಯಾಗಿರುವ ಭೀಮ್ ಯುಪಿಐ ಈಗ ಮತ್ತೊಂದು ದೇಶಕ್ಕೆ ವಿಸ್ತರಿಸಿದೆ. ಕೊಲ್ಲಿ ಭಾಗದ ಪ್ರಮುಖ ದೇಶವಾಗಿರುವ ಕತಾರ್‌ನಲ್ಲಿಯೂ ಯುಪಿಐ ಚಾಲು ಆಗಿದ್ದು, ಭಾರತೀಯರು ತಮ್ಮ ಯುಪಿಐ ಆ್ಯಪ್ ಮೂಲಕ ಸುಲಭವಾಗಿ ಪಾವತಿಗಳನ್ನು ಮಾಡಬಹುದಾಗಿದೆ.
ಮೊದಲ ಹಂತದಲ್ಲಿ ಕತಾರ್ ವಿಮಾನ ನಿಲ್ದಾಣದ ಆಮದು ಸುಂಕ ರಹಿತ ಅಂಗಡಿಗಳಲ್ಲಿ (ಡ್ಯೂಟಿ ಫ್ರೀ ಅಂಗಡಿ) ಕ್ಯೂಆರ್ ಕೋಡ್ ಆಧರಿಸಿ ಪಾವತಿ ಮಾಡಬಹುದಾಗಿದೆ. ಕತಾರ್‌ನ ರಾಷ್ಟ್ರೀಯ ಬ್ಯಾಂಕ್‌ನೊಂದಿಗೆ (ಕ್ಯೂಎನ್‌ಬಿ) ಎನ್‌ಪಿಸಿಐ ಒಪ್ಪಂದ ಮಾಡಿಕೊಂಡಿದೆ.ಇದರಿಂದಾಗಿ ಭಾರತೀಯರು ವಿದೇಶಿ ವಿನಿಮಯ ಅಡೆತಡೆಗಳಿಲ್ಲದೇ, ನಗದು ಕೊಂಡೊಯ್ಯುವ ತಲೆನೋವಿಲ್ಲದೇ ಪಾವತಿ ಪ್ರಕ್ರಿಯೆ ಮಾಡಬಹುದಾಗಿದೆ.
ಇದರಿಂದಾಗಿ ಯುಪಿಐ ಪಾವತಿ ಹೊಂದಿರುವ ದೇಶಗಳ ಪಟ್ಟಿಯು 8ಕ್ಕೆ ಏರಿಕೆಯಾಗಿದೆ.ಯಾವ ದೇಶಗಳಲ್ಲಿವೆ ಯುಪಿಐ:
ಭಾರತ ಹೊರತುಪಡಿಸಿ ಯುಪಿಐ ಹೊಂದಿದ ಮೊದಲ ದೇಶ ಭೂತಾನ್ ಆಗಿದೆ. ಇದರ ನಂತರದಲ್ಲಿ ಫ್ರಾನ್ಸ್, ಮಾರಿಷಸ್, ನೇಪಾಳ, ಸಿಂಗಾಪುರ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳಲ್ಲಿಯೂ ಸಹ ಯುಪಿಐ ಪಾವತಿ ಮಾಡಬಹುದಾಗಿದೆ.ಥಾಯ್ಲೆಂಡ್ ಸೇರಿ ಇತರೆ ಆಗ್ನೇಯ ಏಷ್ಯಾ ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ.
ವಿಶ್ವಸಂಸ್ಥೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ‘ಓಂ ಶಾಂತಿ’ ಪಠಣ
ವಿಶ್ವಸಂಸ್ಥೆ: 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ‘ಓಂ ಶಾಂತಿ, ಓಂ ಶಾಂತಿ’ ಎಂಬ ಸಂಸ್ಕೃತ ಮಂತ್ರದೊಂದಿಗೆ ಭಾಷಣ ಮುಗಿಸಿ ಗಮನ ಸೆಳೆದರು.ಜಾಗತಿಕ ಶಾಂತಿ, ನ್ಯಾಯ ಮತ್ತು ಸಮಾನ ಅವಕಾಶಕ್ಕಾಗಿ ಕರೆ ನೀಡಿದ ಅವರು, ‘ಬೆದರಿಕೆ, ಜನಾಂಗೀಯತೆ, ದ್ವೇಷ, ದಬ್ಬಾಳಿಕೆ ಮತ್ತು ವರ್ಣಭೇದ ನೀತಿಯಿಂದ ಸಮಾಜಕ್ಕೆ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ,
ಜಾಗತಿಕ ಅನಿಶ್ಚಿತತೆಯ ನಡುವೆಯೂ ಸಾಮರಸ್ಯದ ಸಂದೇಶ ಸಾರುತ್ತ ‘ಓಂ ಶಾಂತಿ ಓಂ ಶಾಂತಿ’ ಎಂದು ಹೇಳಿ 19 ನಿಮಿಷದ ಭಾಷಣ ಮುಗಿಸಿದರು.
ಮುಸ್ಲಿಮರನ್ನು ಅಯೋಧ್ಯೆಯಿಂದ ಹೊರಗಟ್ಟುತ್ತೇವೆ: ಬಿಜೆಪಿ ನಾಯಕ ವಿವಾದ
ಅಯೋಧ್ಯೆ: ‘ಮುಸ್ಲಿಮರು ಅಯೋಧ್ಯೆಯಿಂದ ಹೊರಗೆ ಹೋಗಬೇಕು. ಇಲ್ಲಿರಲು ಅವರಿಗೆ ಯಾವುದೇ ಹಕ್ಕಿಲ್ಲ. ಇಲ್ಲಿ ಯಾವುದೇ ಮಸೀದಿ ಕಟ್ಟಲು ಅವಕಾಶ ನೀಡಲಾಗುವುದಿಲ್ಲ’ ಎಂದು ರಾಮಮಂದಿರ ಹೋರಾಟಗಾರ ಹಾಗೂ ಬಿಜೆಪಿ ನಾಯಕ ವಿನಯ್ ಕಟಿಯಾರ್ ಬುಧವಾರ ಹೇಳಿಕೆ ನೀಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.ಸುದ್ದಿಗೋಷ್ಠಿ ವೇಳೆ, ಧನ್ನಿಪುರ ಮಸೀದಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಆಡಳಿತ ನಿರಾಕರಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಟಿಯಾರ್, ‘ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಅಥವಾ ಇನ್ಯಾವುದೇ ಮಸೀದಿಯ ಬದಲಿಗೆ ಮಸೀದಿ ನಿರ್ಮಿಸಲು ಅವಕಾಶವಿಲ್ಲ. ಮುಸ್ಲಿಮರಿಗೆ ಇಲ್ಲಿ ಉಳಿಯಲು ಹಕ್ಕಿಲ್ಲ. ಯಾವುದೇ ಬೆಲೆ ತೆತ್ತಾದರೂ ನಾವು ಅವರನ್ನು ಅಯೋಧ್ಯೆಯಿಂದ ಹೊರಗಿಡಲಿದ್ದೇವೆ’ ಎಂದರು.
ವಾಟ್ಸಾಪ್‌ನಲ್ಲೇ ಸಂದೇಶ ಅನುವಾದ : ಹೊಸ ಫೀಚರ್
ನವದೆಹಲಿ: ಜಗತ್ತಿನಾದ್ಯಂತ ಅತಿಹೆಚ್ಚು ಬಳಕೆಯಲ್ಲಿರುವ ಸಮಾಜಿಕ ಮಾಧ್ಯಮ ವಾಟ್ಸಾಪ್ ಇದೀಗ ಸಂದೇಶವನ್ನು ನಾವು ಬಯಸುವ ಭಾಷೆಗೆ ಅನುವಾದಿಸುವ ಹೊಸ ಫೀಚರ್‌ಅನ್ನು ಪರಿಚಯಿಸಿದೆ.
ಯಾರಿಗಾದರೂ ಹಿಂದಿಯಲ್ಲಿ ಸಂದೇಶ ಕಳಿಸಬೇಕೆಂದರೆ, ಮೊದಲಿಗೆ ಕನ್ನಡದಲ್ಲಿ ಟೈಪಿಸಿ ಅದನ್ನು ದೀರ್ಘವಾಗಿ ಒತ್ತಿ ಹಿಡಿಯಬೇಕು. ಆಗ ಕಾಣಿಸುವ‘ಟ್ರಾನ್ಸ್‌ಲೇಟ್’ ಒತ್ತಬೇಕು. ಅಲ್ಲಿ ತೋರಿಸುವ ಭಾಷೆಗಳ ಪಟ್ಟಿಯಲ್ಲಿ ‘ಹಿಂದಿ’ ಆಯ್ಕೆ ಮಾಡಿ ಸಂದೇಶವನ್ನು ಕಳಿಸಬಹುದು. ಇದನ್ನು ಖಾಸಗಿ ಅಥವಾ ಗುಂಪು ಚಾಟ್‌ನಲ್ಲಿ ಬಳಸಬಹುದು.ಪ್ರಸ್ತುತ ಆ್ಯಂಡ್ರಾಯ್ಡ್‌ನಲ್ಲಿ ಹಿಂದಿ ಸೇರಿ 6 ಭಾಷೆ ಮತ್ತು ಐಫೋನ್‌ನಲ್ಲಿ 19 ಭಾಷೆಗಳಿಗೆ ತರ್ಜುಮೆ ಸಾಧ್ಯ.