ನಟ ದೇವರಕೊಂಡ ಕಾರು ಅಪಘಾತ: ಅಪಾಯವಿಲ್ಲ

KannadaprabhaNewsNetwork |  
Published : Oct 07, 2025, 01:02 AM ISTUpdated : Oct 07, 2025, 03:46 AM IST
ಅಪಘಾತ | Kannada Prabha

ಸಾರಾಂಶ

ನಟ ವಿಜಯ್‌ ದೇವರಕೊಂಡ ಅವರಿದ್ದ ಕಾರು, ಆಂಧ್ರ ಪ್ರದೇಶದ ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಮರಳುವಾಗ ಜೋಗುಳಾಂಬ ಗದ್ವಾಲ್‌ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್‌ ಅವರಿಗೆ ಯಾವುದೇ ಗಾಯವಾಗಿಲ್ಲ.

ಹೈದರಾಬಾದ್‌: ನಟ ವಿಜಯ್‌ ದೇವರಕೊಂಡ ಅವರಿದ್ದ ಕಾರು, ಆಂಧ್ರ ಪ್ರದೇಶದ ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಮರಳುವಾಗ ಜೋಗುಳಾಂಬ ಗದ್ವಾಲ್‌ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್‌ ಅವರಿಗೆ ಯಾವುದೇ ಗಾಯವಾಗಿಲ್ಲ.

ನಟನಿದ್ದ ಲೆಕ್ಸಸ್‌ ಕಾರು ಬಲತಿರುವು ಪಡೆಯುವಾಗ ಬೊಲೆರೊ ಜತೆ ಅಪಘಾತಕ್ಕೀಡಾಗಿದೆ. ಪರಿಣಾಮ ಕಾರಿಗೆ ಕೊಂಚ ಹಾನಿಯಾಗಿದೆ. ಅಪಘಾತ ಬಳಿಕ ವಿಜಯ್‌ ತಮ್ಮ ಸ್ನೇಹಿತರ ಕಾರಿನಲ್ಲಿ ಮರಳಿದ್ದಾರೆ.

ಇತ್ತೀಚೆಗೆ ದೇವರಕೊಂಡ ಅವರ ವಿವಾಹ ನಿಶ್ಚಿತಾರ್ಥ ನಟಿ ರಶ್ಮಿಕಾ ಮಂದಣ್ಣ ಅವರ ಜತೆ ನೆರವೇರಿತ್ತು.

ಚಿನ್ನದ ಬೆಲೆ 1.30 ಲಕ್ಷ ರು.: ದಾಖಲೆ 

  ನವದೆಹಲಿದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯು ಏರುಗತಿಯಲ್ಲಿಯೇ ಮುಂದುವರಿದಿದ್ದು, ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ.

ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ 9700 ರು. ಏರಿ ದಾಖಲೆಯ 1.30 ಲಕ್ಷ ರು.ಗೆ ತಲುಪಿದೆ. ಇದೇ ವೇಳೆ ಇಲ್ಲಿ 10 ಗ್ರಾಂ 99.5 ಶುದ್ಧತೆ ಚಿನ್ನ 2700 ರು. ಜಿಗಿದು, 1.22 ಲಕ್ಷ ರು.ಗೆ ಏರಿದೆ.ಮತ್ತೊಂದೆಡೆ ಬೆಳ್ಳಿ ಬೆಲೆಯು 7400 ರು. ಏರಿಕೆ ಕಂಡು, ಜೀವಮಾನದ ಗರಿಷ್ಠವಾದ ಕೇಜಿಗೆ 1.57 ಲಕ್ಷ ರು.ಗೆ ತಲುಪಿದೆ.

ಜಾಗತಿಕ ಚಿನ್ನದ ಬೇಡಿಕೆ ಮತ್ತು ರುಪಾಯಿ ಸಾರ್ವಕಾಲಿಕ ಕನಿಷ್ಠಕ್ಕೆ ತಲುಪಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಬದರೀನಾಥ ದರ್ಶನ ಪಡೆದ ಸೂಪರ್‌ಸ್ಟಾರ್‌ ರಜನಿ

ಬದರೀನಾಥ್‌ (ಉತ್ತರಾಖಂಡ): ಭಾನುವಾರವಷ್ಟೇ ಹೃಷಿಕೇಶದಲ್ಲಿದ್ದ ಸೂಪರ್‌ಸ್ಟಾರ್‌ ರಜನೀಕಾಂತ್‌, ಸೋಮವಾರ ಚಾರ್‌ಧಾಮ್‌ ಯಾತ್ರೆಗಳಲ್ಲಿ ಒಂದಾದ ಬದರೀನಾಥ ದೇಗುಲಕ್ಕೆ ಭೇಟಿ ನೀಡಿ ಬದರಿ ವಿಶಾಲ್‌ ದರ್ಶನ ಪಡೆದರು.ಈ ವೇಳೆ ದೇಗುಲ ಆಡಳಿತ ಮಂಡಳಿಯು ರಜನಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪ್ರಸಾದ ನೀಡಿದರು. ರಜನಿ ನೀಲಿ ಬಣ್ಣದ ಸ್ವೆಟರ್‌ ಧರಿಸಿ ನಡೆದುಕೊಂಡು ಬರುತ್ತಿರುವ ಚಿತ್ರದ ಹರಿದಾಡಿದೆ.

ಭಾನುವಾರ ಬದರಿ ಮಾರ್ಗದಲ್ಲಿ ರಜನಿ ಅವರು ತಮ್ಮ ಸ್ನೇಹಿತರ ಜೊತೆ ರಸ್ತೆ ಬದಿಯಲ್ಲಿ ನಿಂತು ಸಾಮಾನ್ಯರಂತೆ ಆಹಾರ ಸೇವಿಸುತ್ತಿದ್ದ ಚಿತ್ರಗಳು ವೈರಲ್‌ ಆಗಿ, ಭಾರಿ ಮೆಚ್ಚುಗೆ ಗಳಿಸಿತ್ತು.ಬದರೀನಾಥ ದೇಗುಲವು ಚಳಿಗಾಲದ ನಿಮಿತ್ತ ನವೆಂಬರ್‌ 25ರಿಂದ ಮುಚ್ಚಿರುತ್ತದೆ. ಮುಂದಿನ ವರ್ಷ ಮತ್ತೆ ಮುಕ್ತವಾಗುತ್ತದೆ.

ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಫ್ರಾನ್ಸ್‌ ಪ್ರಧಾನಿ ರಾಜೀನಾಮೆ 

ಪ್ಯಾರಿಸ್‌: ಫ್ರಾನ್ಸ್‌ ಆರ್ಥಿಕ ಸ್ಥತಿ ಹದಗೆಟ್ಟು ಸರ್ಕಾರದ ವಿರುದ್ಧ ಜನಾಕ್ರೋಶ ಭುಗಿಲೆದ್ದಿರುವ ನಡುವೆಯೇ ಪ್ರಧಾನಿ ಸೆಬಾಸ್ಟಿಯನ್‌ ಲೆಕೋರ್ನು ಅವರು ಅಧಿಕಾರ ಸ್ವೀಕರಿಸಿದ ಕೇವಲ ಒಂದು ತಿಂಗಳ ಒಳಗಾಗಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಹಿಂದಿನ ಪ್ರಧಾನಿ 1 ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ಬಳಿಕ ಲೋಕೊರ್ನು ಅವರನ್ನು ಪ್ರಧಾನಿ ಎಂದು ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ನೇಮಿಸಿದ್ದರು. ಆದರೆ ಲೋಕೊರ್ನು ಮೇಲೂ ಆಕ್ರೋಶ ಕೇಳಿಬಂದ ಕಾರಣ ಅವರೂ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೇಶವು ಕೇವಲ 1 ವರ್ಷದ ಅವಧಿಯಲ್ಲಿ ಐವರು ಪ್ರಧಾನಿಗಳ ರಾಜೀನಾಮೆಗೆ ಸಾಕ್ಷಿಯಾಗಿದೆ.ಸೆ.9ರಂದು ಫ್ರಾಂಕೋಯಿಸ್‌ ಬೈರೌ ಅವರು 9 ತಿಂಗಳ ಅಧಿಕಾರದ ಬಳಿಕ ಅಧಿಕಾರದಿಂದ ಕೆಳಗಿಳಿದಿದ್ದರು. ಇವರಗಿಂತ ಮೊದಲಿನ ಮೈಕಲ್‌ ಬಾರ್ನಿಯರ್‌ ಅವರು 4 ತಿಂಗಳು, ಗೇಬ್ರಿಯಲ್‌ ಅಟ್ಟಲ್‌ ಎಂಬುವರು 3 ತಿಂಗಳು ಅಧಿಕಾರ ನಡೆಸಿದ್ದರು. ಎಲಿಸಬೆತ್‌ ಬೋರ್ನೆ ಎಂಬುವರು ಮಾತ್ರ 2 ವರ್ಷದ ಅವಧಿಗೆ ಪ್ರಧಾನಿಯಾಗಿದ್ದರು.

ಶಬರಿಮಲೆ ಚಿನ್ನಕ್ಕೆ ಕನ್ನ: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಪಿಟಿಐ ಕೊಚ್ಚಿಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣದ ಎಸ್ಐಟಿ (ವಿಶೇಷ ತನಿಖಾ ತಂಡ) ರಚನೆಗೆ ಕೇರಳ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ತಿರುವಾಂಕೂರು ದೇವಸ್ವಂ ಸಮಿತಿಯ (ಟಿಡಿಬಿ) ವಿಚಕ್ಷಣ ದಳದ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದ ಬಳಿಕ ನ್ಯಾಯಪೀಠವು ಎಸ್ಐಟಿ ರಚನೆಗೆ ಆದೇಶಿಸಿದೆ. ಎಸ್ಪಿ ಎಸ್. ಶಶಿಧರನ್ ಎಸ್‌ಐಟಿ ನೇತೃತ್ವ ವಹಿಸಲಿದ್ದು, ಎಡಿಜಿಪಿ ಎಚ್. ವೆಂಕಟೇಶ್ ಮೇಲ್ವಿಚಾರಣೆ ನಡೆಸಲಿದ್ದಾರೆ. ಸೈಬರ್ ಪೊಲೀಸ್ ಅಧಿಕಾರಿಗಳನ್ನು ಸಹ ತಂಡದಲ್ಲಿ ಸೇರಿಸಲಾಗಿದೆ.

2019ರಲ್ಲಿ ದ್ವಾರಪಾಲಕ ಮೂರ್ತಿಗಳ ಕವಚಗಳನ್ನು ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ ಮರುಲೇಪನಕ್ಕಾಗಿ ಕೊಂಡೊಯ್ದಿದ್ದ. ಮರಳಿಸುವಾಗ ಅದರಲ್ಲಿನ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಟಿಡಿಬಿ ವಿಚಕ್ಷಣ ದಳ ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿ, ಕೋರ್ಟ್‌ಗೆ ವರದಿ ಸಲ್ಲಿಸಿದೆ.

PREV
Read more Articles on

Recommended Stories

ಲವ್‌ ಜಿಹಾದ್‌ ಸಂತ್ರಸ್ತೆ ಸ್ವಧರ್ಮಕ್ಕೆ ಮರಳದಿದ್ರೆ ವಿಷ ಕೊಡಿ: ಶಾಸಕ
ಗಾಜಾ ಸಂಧಾನ ಬಗ್ಗೆ ನಿರುತ್ಸಾಹ ತೋರಿದ ನೆತನ್ಯಾಹುಗೆ ಟ್ರಂಪ್ ಚಾಟಿ