ಬಿಹಾರ ಹೈವೋಲ್ಟೇಜ್‌ ಫೈಟ್‌ : ನ.6,11ಕ್ಕೆ ಮತ, 14ಕ್ಕೆ ರಿಸಲ್ಟ್‌ ಮತಸಮರ

KannadaprabhaNewsNetwork |  
Published : Oct 07, 2025, 01:02 AM ISTUpdated : Oct 07, 2025, 03:49 AM IST
ಬಿಹಾರ ಚುನಾವಣೆ | Kannada Prabha

ಸಾರಾಂಶ

  ಮತದಾರರ ವಿಶೇಷ ಪರಿಷ್ಕರಣೆ ವಿವಾದದಿಂದಾಗಿ ಚರ್ಚೆಗೆ ಗ್ರಾಸವಾಗಿರುವ ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ಸೋಮವಾರ ಘೋಷಣೆಯಾಗಿದೆ. ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತ ನ.6 ಮತ್ತು 2ನೇ ಹಂತದಲ್ಲಿ ನ.11ರಂದು ಮತದಾನ ನಡೆಯಲಿದೆ. ನ.14ರಂದು ಮತ ಎಣಿಕೆ 

 ನವದೆಹಲಿ :  ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ, ಮತದಾರರ ವಿಶೇಷ ಪರಿಷ್ಕರಣೆ ವಿವಾದದಿಂದಾಗಿ ಚರ್ಚೆಗೆ ಗ್ರಾಸವಾಗಿರುವ ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ಸೋಮವಾರ ಘೋಷಣೆಯಾಗಿದೆ. ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತ ನ.6 ಮತ್ತು 2ನೇ ಹಂತದಲ್ಲಿ ನ.11ರಂದು ಮತದಾನ ನಡೆಯಲಿದೆ. ನ.14ರಂದು ಮತಎಣಿಕೆ ಅಂದರೆ ಫಲಿತಾಂಶ ಪ್ರಕಟವಾಗಲಿದೆ.

ಈ ಸಲದ ಚುನಾವಣೆ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಹಾಗೂ ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾಘಠಬಂಧನದ ಮಧ್ಯೆ ನೇರ ಹಣಾಹಣಿಗೆ ವೇದಿಕೆಯಾಗಲಿದೆ.

ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್‌ ಕುಮಾರ್‌, ‘ಬಿಹಾರ ಚುನಾವಣೆ ದೇಶದಲ್ಲೇ ಪ್ರಮುಖ ಮತ್ತು ಮಹತ್ವದ ಚುನಾವಣೆಯಾಗಿದೆ. ಈ ಕಾರಣಕ್ಕಾಗಿ ಈ ಚುನಾವಣೆಗೆ 8.5 ಲಕ್ಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದ ಮತದಾನ ಪ್ರಕ್ರಿಯೆಗಳು ನ.22ರಂದು ಪೂರ್ಣಗೊಳ್ಳಲಿದೆ. ಈ ಚುನಾವಣೆಯನ್ನು ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಉದ್ದೇಶಿಸಲಾಗಿದೆ. ಯಾವುದೇ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.

7.4 ಕೋಟಿಗಿಂತಲೂ ಹೆಚ್ಚು ವೋಟರ್ಸ್‌:

ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 7.42 ಕೋಟಿ ಗಿಂತಲೂ ಹೆಚ್ಚು ಮಂದಿ ಮತದಾನದ ಹಕ್ಕು ಪಡೆದಿದ್ದಾರೆ. ಇವರಲ್ಲಿ 14 ಲಕ್ಷ ಮಂದಿ ನವ ಮತದಾರರು. ಒಟ್ಟು 7.42 ಕೋಟಿ ಮತದಾರರಲ್ಲಿ 3.92 ಕೋಟಿ ಪುರುಷ ಮತ್ತು 3.5 ಕೋಟಿ ಮಹಿಳಾ ಮತದಾರರಿದ್ದರೆ, 4 ಲಕ್ಷ ಮಂದಿ ಹಿರಿಯ ನಾಗರಿಕರು.

ಈ ಬಾರಿ ಕೊನೆಯ ಎರಡು ಸುತ್ತಿನ ಮತಎಣಿಕೆಗೂ ಮುನ್ನ ಅಂಚೆ ಮತಗಳ ಎಣಿಕೆ ನಡೆಸುವುದು ಕಡ್ಡಾಯ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪ್ರತಿ 243 ಕ್ಷೇತ್ರಗಳಿಗೂ ಒಬ್ಬೊಬ್ಬ ವೀಕ್ಷಕರನ್ನು ನೇಮಿಸಲಾಗುತ್ತಿದೆ. 38 ಜಿಲ್ಲೆಗಳಿಗೆ ಒಬ್ಬ ಪೊಲೀಸ್‌ ವೀಕ್ಷಕರನ್ನು ನಿಯೋಜಿಸಲಾಗುತ್ತಿದೆ.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗುವ 10 ದಿನಗಳ ಮೊದಲವರೆಗೂ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅ‍ವಕಾಶ ನೀಡಲಾಗಿದೆ.

ಮೇಲ್ದರ್ಜೆಗೇರಿಸಿದ ಇವಿಎಂ:

ಈ ಬಾರಿ ಮೇಲ್ದರ್ಜೆಗೇರಿಸಿದ ಬ್ಯಾಲೆಟ್‌ ಪೇಪರ್‌ಗಳನ್ನು ಇವಿಎಂಗಳಲ್ಲಿ ಪರಿಚಯಿಸಲು ನಿರ್ಧರಿಸಿದೆ. ಈ ಬಾರಿ ಬ್ಯಾಲೆಟ್‌ಪೇಪರ್‌ಗಳಲ್ಲಿ ಅಭ್ಯರ್ಥಿಯ ಸ್ಪಷ್ಟ ಕಲರ್‌ ಫೋಟೋ ಮತ್ತು ಸೀರಿಯಲ್‌ ದಪ್ಪ ಅಕ್ಷರಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ. ಬೂತ್‌ ಹಂತದ ಅಧಿಕಾರಿಗಳು ಗುರುತಿನ ಚೀಟಿಯನ್ನು ಹೊಂದಿರಲಿದ್ದು, ಈ ಮೂಲಕ ಪಾರದರ್ಶಕ ಹಾಗೂ ಸುಗಮ ಮತದಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಮತದಾರರು ಬೂತ್‌ನ ಹೊರಗೇ ಮೊಬೈಲ್ ಇಟ್ಟು ಹೋಗುವುದು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ವಿಶೇಷ ಕೇಂದ್ರಗಳನ್ನು ಸೃಷ್ಟಿಸಲಾಗಿದೆ. ಪ್ರತಿ ಮತದಾನ ಕೇಂದ್ರಗಳಲ್ಲಿ ಶೇ.100ರಷ್ಟು ವೆಬ್‌ಕಾಸ್ಟಿಂಗ್‌ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು. ಆದರೆ ವೆಬ್‌ಕಾಸ್ಟ್ ವಿಡಿಯೋಗಳನ್ನು ಕೇವಲ ಕೋರ್ಟಿನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಗೌಪ್ಯತೆ ಕಾರಣ ಪಕ್ಷಗಳ ಜತೆ ಹಂಚಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದರು.

ಈ ಬಾರಿಯ ವಿಶೇಷ

243 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ 7.42 ಕೋಟಿ ಮತದಾರರಿಗೆ ಮತ ಹಕ್ಕು. ಚುನಾವಣೆಗೆ 8.5 ಲಕ್ಷ ಅಧಿಕಾರಿಗಳ ನಿಯೋಜನೆ

ಇವಿಎಂಗಳ ಮೇಲೆ ದಪ್ಪ ಅಕ್ಷರಗಳಲ್ಲಿ ಅಭ್ಯರ್ಥಿ ಹೆಸರು ಪ್ರಕಟ. ಗೊಂದಲ ತಪ್ಪಿಸಲು ಇದೇ ಮೊದಲ ಸಲ ಅಭ್ಯರ್ಥಿಗಳ ಕಲರ್ ಫೋಟೋ ಮುದ್ರಣ

ಮತದಾರರು, ಮತಗಟ್ಟೆ ಒಳಗೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ. ಈ ಬಾರಿ ಪ್ರತಿಮತಗಟ್ಟೆಯಲ್ಲೂ ವೆಬ್‌ಕಾಸ್ಟಿಂಗ್‌ಗೆ ಆಯೋಗದಿಂದ ವ್ಯವಸ್ಥೆ

ಎನ್‌ಡಿಎ, ಇಂಡಿಯಾ ಕೂಟದ ಜೊತೆಗೆ ಪ್ರಶಾಂತ್‌ ಕಿಶೋರ್‌, ಅಸಾಸುದ್ದೀನ್‌ ಒವೈಸಿ ಸ್ಪರ್ಧೆಯಿಂದಾಗಿ ತುರುಸು ಹೆಚ್ಚಳ. ಹೆಚ್ಚಿದ ಕುತೂಹಲ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ