ಸಂವಾದ ವೇಳೆ ಮೋದಿ ಎದುರು ಸಂತ್ರಸ್ತರ ಕಣ್ಣೀರು

KannadaprabhaNewsNetwork |  
Published : Sep 14, 2025, 01:04 AM IST
ಮೋದಿ | Kannada Prabha

ಸಾರಾಂಶ

ಮಣಿಪುರದ ಜನಾಂಗೀಯ ಹಿಂಸಾಚಾರದಿಂದ ಆಂತರಿಕವಾಗಿ ಸ್ಥಳಾಂತರಗೊಂಡ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ತಾವು ಎದುರಿಸಿದ ಕಷ್ಟಗಳನ್ನು ಹೇಳಿಕೊಂಡು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತರು. ಅವರಿಗೆ ಮೋದಿ ಸಾಂತ್ವನ ಹೇಳಿದರು.

 ಇಂಫಾಲ್‌ :  ಮಣಿಪುರದ ಜನಾಂಗೀಯ ಹಿಂಸಾಚಾರದಿಂದ ಆಂತರಿಕವಾಗಿ ಸ್ಥಳಾಂತರಗೊಂಡ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ತಾವು ಎದುರಿಸಿದ ಕಷ್ಟಗಳನ್ನು ಹೇಳಿಕೊಂಡು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತರು. ಅವರಿಗೆ ಮೋದಿ ಸಾಂತ್ವನ ಹೇಳಿದರು. 

ಶನಿವಾರ ಬೆಳಿಗ್ಗೆ ಮಣಿಪುರದ ಚುರಾಚಾಂದ್‌ಪುರದ ಶಾಂತಿ ಮೈದಾನದಲ್ಲಿ, ತಮ್ಮ ಮನೆಗಳನ್ನು ಕಳೆದುಕೊಂಡು ನಿರ್ವಸಿತರಾದ ಜನರನ್ನು ಭೇಟಿಯಾದ ಪ್ರಧಾನಿ, ಅವರ ಕಷ್ಟ ಸುಖ ಆಲಿಸದರು. ಈ ವೇಳೆ ತಮ್ಮ ಎದುರು ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ ಸಂತ್ರಸ್ತರಿಗೆ ಸಮಾಧಾನ ಹೇಳಿದ ಅವರು, ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಮರಳಿ ಸ್ಥಾಪಿಸಲು ತಮ್ಮ ಸರ್ಕಾರ ಬದ್ಧವಾಗಿರುವುದಾಗಿ ತಿಳಿಸಿದರು.

ಬಳಿಕ ಐತಿಹಾಸಿಕ ಕಂಗ್ಲಾ ಕೋಟೆಯ ಸಂಕೀರ್ಣದಲ್ಲಿ ಪುನರ್ವಸತಿ ಪಡೆದಿರುವ ಸಂತ್ರಸ್ತರನ್ನು ಭೇಟಿಯಾಗಿ ಅವರ ಸಂಕಷ್ಟಗಳನ್ನು ಆಲಿಸಿದರು. ಮಣಿಪುರದಲ್ಲಿ ಶಾಂತಿ ಮತ್ತು ಸಾಮಾನ್ಯ ಜನಜೀವನವನ್ನು ಪುನಃಸ್ಥಾಪಿಸಲು ಸರ್ವ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು. ಈ ವೇಳೆ ಪುಟ್ಟ ಮಕ್ಕಳು ಹೂಗುಚ್ಛ ಮತ್ತು ತಾವೇ ರಚಿಸಿದ ಕಲಾಕೃತಿಗಳನ್ನು ಮೋದಿಯವರಿಗೆ ನೀಡಿ ಸಂತಸಪಟ್ಟರು.  ಮಗುವೊಂದು ನೀಡಿದ ಹಕ್ಕಿಯ ಗರಿಗಳಿಂದ ಕೂಡಿದ ಟೋಪಿಯನ್ನು ಧರಿಸಿ ಪ್ರಧಾನಿ ಗಮನ ಸೆಳೆದರು. 

2023ರಿಂದ ಆರಂಭವಾಗಿರುವ ಜನಾಂಗೀಯ ಹಿಂಸಾಚಾರದಿಂದಾಗಿ ಮಣಿಪುರದಲ್ಲಿ 60,00ಕ್ಕೂ ಹೆಚ್ಚು ಜನ ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ. ಇವರಲ್ಲಿ ಕೆಲವರು ಹೊರರಾಜ್ಯಗಳಿಗೆ ತೆರಳಿದರೆ, ಬಹುತೇಕರು ರಾಜ್ಯದ ನಿರಾಶ್ರಿತರ ಶಿಬಿರಗಳಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ಜೀವನ ದೂಡುತ್ತಿದ್ದಾರೆ. ಇವರಿಗೆ ಪುನರ್ವಸತಿ ಕಲ್ಪಿಸುವ ದೊಡ್ಡ ಸವಾಲು ಸರ್ಕಾರಗಳ ಮುಂದಿದೆ.

ಮಣಿಪುರ ಕಷ್ಟದಲ್ಲಿದ್ದಾಗ ಮೋದಿ 46 ದೇಶ ಪ್ರವಾಸ: ಖರ್ಗೆ ಟೀಕೆ 

ನವದೆಹಲಿ: ಸಂಘರ್ಷಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದು, ‘ಇದು ಕೇವಲ ತುರ್ತು ಭೇಟಿ (ಪಿಟ್‌ ಸ್ಟಾಪ್‌). ಮಣಿಪುರದ ಜನರಿಗೆ ಮಾಡಿದ ಗಂಭೀರ ಅಪಮಾನ.

 ಮಣಿಪುರದ ಜನ ಸಂಕಷ್ಟದಲ್ಲಿದ್ದಾಗ ಮೋದಿ 46 ದೇಶಗಳ ಪ್ರವಾಸದಲ್ಲಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ‘ಮೋದಿಯವರ 3 ಗಂಟೆಯ ಪಿಟ್ ಸ್ಟಾಪ್‌ (ತುರ್ತು ವಿಶ್ರಾಂತಿ) ಮಣಿಪುರದ ಜನರಿಗೆ ತೋರಿದ ಸಹಾನುಭೂತಿಯಲ್ಲ.

 ಬದಲಿಗೆ ಅವರಿಗೆ ಮಾಡಿದ ಗಂಭೀರ ಅಪಮಾನವಾಗಿದೆ. 864 ದಿನಗಳ ಸಂಘರ್ಷದಲ್ಲಿ 300 ಜೀವಗಳ ಹಾನಿ, 67,000 ಜನರ ಸ್ಥಳಾಂತರ, 1,500ಕ್ಕೂ ಹೆಚ್ಚು ಜನರಿಗೆ ಗಾಯ ಸಂಭವಿಸಿದೆ. ಆಗ ನೀವು 46 ದೇಶಗಳ ಪ್ರವಾಸದಲ್ಲಿದ್ದಿರಿ. ಮಣಿಪುರದ ಜನರಿಗೆ ಸಹಾನುಭೂತಿ ತೋರಲು ಒಂದು ಭೇಟಿಯನ್ನೂ ನೀಡಲಿಲ್ಲ. 2022ರ ಜನವರಿಯಲ್ಲಿ ಚುನಾವಣೆಗಾಗಿ ನೀಡಿದ ಭೇಟಿಯೇ ನಿಮ್ಮ ಕಡೆಯ ಭೇಟಿ. ನಿಮ್ಮ ‘ಡಬಲ್ ಎಂಜಿನ್’ ಸರ್ಕಾರ ಮಣಿಪುರದ ನಿರ್ದೋಷಿ ಜೀವಗಳನ್ನು ಧ್ವಂಸಗೊಳಿಸಿದೆ’ ಎಂದು ಟೀಕಿಸಿದ್ದಾರೆ.

PREV
Read more Articles on

Recommended Stories

ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು? : ಸಿದ್ದರಾಮಯ್ಯ