ಮಹಾಕುಂಭ ನಗರ : ಪ್ರಯಾಗ್‌ರಾಜ್‌ನಲ್ಲಿ ವಸಂತ ಪಂಚಮಿಯ ಅಮೃತ ಸ್ನಾನ ಸುಸೂತ್ರವಾಗಿ ಸಂಪನ್ನ

KannadaprabhaNewsNetwork | Updated : Feb 04 2025, 03:40 AM IST

ಸಾರಾಂಶ

ಯಾಗ್‌ರಾಜ್‌ನಲ್ಲಿ ವಸಂತ ಪಂಚಮಿಯ ಅಮೃತ ಸ್ನಾನ ಯಾವುದೇ ಅಹಿತಕರ ಘಟನೆಗೆ ವೇದಿಕೆಯಾಗದಂತೆ ಸುಸೂತ್ರವಾಗಿ ಸಂಪನ್ನಗೊಂಡಿದೆ.

ಮಹಾಕುಂಭ ನಗರ: ಪ್ರಯಾಗ್‌ರಾಜ್‌ನಲ್ಲಿ ವಸಂತ ಪಂಚಮಿಯ ಅಮೃತ ಸ್ನಾನ ಯಾವುದೇ ಅಹಿತಕರ ಘಟನೆಗೆ ವೇದಿಕೆಯಾಗದಂತೆ ಸುಸೂತ್ರವಾಗಿ ಸಂಪನ್ನಗೊಂಡಿದೆ. ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತ ಮರುಕಳಿಸದಂತೆ ತಡೆಯಲು ಉತ್ತರ ಪ್ರದೇಶದ ಯೋಗಿ ಸರ್ಕಾರ ತೆಗೆದುಕೊಂಡ ‘ಆಪರೇಷನ್‌ 11’ ಹೆಸರಿನ ಮುನ್ನೆಚ್ಚರಿಕಾ ಕ್ರಮದ ಫಲವಾಗಿ ಇದು ಸಾಧ್ಯವಾಗಿದೆ. 

ಜನಸಂದಣಿ ನಿಯಂತ್ರಣಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ಅಪಾರ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಅಧಿಕ ಜನ ಸೇರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಮಹಾ ಕುಂಭದ ಡಿಐಜಿ ಸೇರಿದಂತೆ ಕೆಲ ಅಶ್ವಾರೋಹಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದರು. ಸಿಎಂ ಯೋಗಿ ನಸುಕಿನಿಂದಲೇ ತಮ್ಮ ನಿವಾಸದಿಂದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದರು.

ಮುಂಜಾನೆ 4 ಗಂಟೆಗೆ ಅಮೃತ ಸ್ನಾನ ಆರಂಭವಾಗಿದ್ದು, ಮೊದಲಿಗೆ ನಾಗಾ ಸಾಧುಗಳು ಸೇರಿದಂತೆ ವಿವಿಧ ಅಖಾಡದ ಸನ್ಯಾಸಿಗಳು ತ್ರಿವೇಣಿ ಸಂಗಮದಲ್ಲಿ ನಿಂದೆದ್ದರು. ಜನದಟ್ಟಣೆ ತಡೆಯಲು ಪ್ರತಿ ಅಖಾಡದವರಿಗೆ ಸ್ನಾನಕ್ಕೆ 40 ನಿಮಿಷ ಅವಕಾಶ ನೀಡಲಾಗಿತ್ತು. ಈ ವೇಳೆ ಹೆಲಿಕಾಪ್ಟರ್‌ಗಳಿಂದ ಗುಲಾಬಿ ಎಸಳುಗಳ ಮಳೆಗರೆಯಲಾಯಿತು.

ಸೋಮವಾರದಂದು ಒಟ್ಟು 2 ಕೋಟಿ ಭಕ್ತರು ಸಂಗಮದಲ್ಲಿ ಮಿಂದೆದ್ದರು ಎಂದು ಸರ್ಕಾರ ಮಾಹಿತಿ ನೀಡಿದೆ.

ಮಹಾಕುಂಭದ ನೀರು ಅತಿ ಕಲುಷಿತ, ನದಿಯಲ್ಲೇ ಶವ: ಜಯಾ ಬಚ್ಚನ್‌ ಆರೋಪ

ನವದೆಹಲಿ: ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಸಂಬಂಧ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌, ‘ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೇ ಎಸೆಯಲಾಗಿದ್ದು, ನೀರು ಅತ್ಯಂತ ಕಲುಷಿತವಾಗಿದೆ’ ಎಂದು ಆರೋಪಿಸಿದ್ದಾರೆ.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ನಡೆದ ಜಲ ಶಕ್ತಿ ಬಗೆಗಿನ ಚರ್ಚೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸದ್ಯ ಎಲ್ಲಿಯ ನೀರು ಅಧಿಕ ಕಲುಷಿತವಾಗಿದೆ?. ಅದು ಕುಂಭದಲ್ಲಿ. ಕಾಲ್ತುಳಿತದಲ್ಲಿ ಬಲಿಯಾದವರ ದೇಹವನ್ನು ನದಿಗೇ ಹಾಕಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲಾಗುತ್ತಿಲ್ಲ’ ಎಂದರು.

ಅಂತೆಯೇ, ‘ಮಹಾಕುಂಭದಲ್ಲಿ ವಿಶೇಷ ವ್ಯಕ್ತಿಗಳಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದ್ದು, ಸಾಮಾನ್ಯರು ಹಾಗೂ ಬಡವರಿಗೆ ಅಗತ್ಯವಾದ ಯಾವ ವ್ಯವಸ್ಥೆಯನ್ನೂ ಮಾಡಲಾಗಿಲ್ಲ’ ಎಂದೂ ಆರೋಪಿಸಿರುವ ಬಚ್ಚನ್‌, ಕೋಟಿಗಳ ಸಂಖ್ಯೆಯಲ್ಲಿ ಜನ ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಸೇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Share this article