ರಾಮಮಂದಿರ ದೇಣಿಗೆ ಹೆಸರಿನಲ್ಲೂ ವಂಚನೆ!: ಕ್ಯೂಆರ್‌ ಕೋಡ್‌ ಬಳಕೆ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ವಾಟ್ಸಾಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ರಾಮ ಮಂದಿರಕ್ಕೆ ದೇಣಿಗೆ ನೀಡಿ ಎಂಬ ನಕಲಿ ಕ್ಯೂಆರ್‌ ಕೋಡ್‌ ಹರಿದಾಡುತ್ತಿದೆ. ಹೀಗಾಗಿ ಅವುಗಳ ವಿರುದ್ಧ ವಿಶ್ಚಹಿಂದು ಪರಿಷತ್‌ ದೂರು ದಾಖಲಿಸಿದ್ದು, ಅವುಗಳನ್ನು ನಂಬದಿರಿ ಎಂದು ಎಚ್ಚರಿಕೆ ನೀಡಿದೆ.

ನವದೆಹಲಿ: ಶ್ರೀರಾಮ ಮಂದಿರದ ಹೆಸರಿನಲ್ಲಿ ‘ದೇವಸ್ಥಾನಕ್ಕೆ ದೇಣಿಗೆ ನೀಡಿ’ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಕಲಿ ಕ್ಯೂಆರ್‌ ಕೋಡ್‌ಗಳನ್ನು ಹಂಚಿಕೊಳ್ಳುವ ಮೂಲಕ ಭಕ್ತರನ್ನು ವಂಚಿಸುತ್ತಿರುವ ಆಘಾತಕಾರಿ ದಂಧೆ ಬೆಳಕಿಗೆ ಬಂದಿದೆ. ಹೀಗಾಗಿ ಇಂಥ ಜಾಲಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಜನತೆಗೆ ಮನವಿ ಮಾಡಿದೆ.

ಭಾನುವಾರ ಹೇಳಿಕೆ ನೀಡಿರುವ ವಿಎಚ್‌ಪಿ, ‘ದೇವಸ್ಥಾನದ ವತಿಯಿಂದ ಯಾವುದೇ ದೇಣಿಗೆ ಸಂಗ್ರಹಿಸಲಾಗುತ್ತಿಲ್ಲ. ಹಣಕ್ಕಾಗಿ ದೇವಸ್ಥಾನದ ದೇಣಿಗೆ ಹೆಸರಲ್ಲಿ ಸೈಬರ್‌ ಕ್ರಿಮಿನಲ್‌ಗಳು ಭಕ್ತರನ್ನು ವಂಚಿಸಲು ನಕಲಿ ಕ್ಯೂಆರ್‌ ಕೋಡ್‌ಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವ ಮತ್ತು ಕರೆ ಮಾಡಿ ದೇಣಿಗೆ ಕೇಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಒಂದು ವೇಳೆ ಇದನ್ನು ನಂಬಿ ಸ್ಕ್ಯಾನ್‌ ಮಾಡಿ ಯುಪಿಐ ಮೂಲಕ ದೇವಸ್ಥಾನಕ್ಕೆಂದು ಹಣ ಪಾವತಿಸಿದರೆ ಅದು ವಂಚಕರ ಪಾಲಾಗುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗೃಹ ಸಚಿವ ಅಮಿತ್‌ ಶಾ ಹಾಗೂ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ’ ಎಂದು ಭಕ್ತರಿಗೆ ಎಚ್ಚರಿಕೆ ನೀಡಿದೆ.

ಇದೇ ವೇಳೆ, ವಂಚಕನೊಬ್ಬ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ದೇಣಿಗೆ ಕೇಳಿದ ಆಡಿವೋವನ್ನು ವಿಎಚ್‌ಪಿ ಬಿಡುಗಡೆ ಮಾಡಿದೆ. ಇದರಲ್ಲಿ ಕರೆ ಮಾಡಿದ ವಂಚಕ, ‘ನಾನು ವಿಎಚ್‌ಪಿ ಕಾರ್ಯಕರ್ತ’ ಎಂದು ಹೇಳಿಕೊಂಡು ರಾಮ ಮಂದಿರಕ್ಕೆ ದೇಣಿಗೆ ಕೇಳುತ್ತಾನೆ. ಆಗ ವ್ಯಕ್ತಿ ತಾವು ಮಂದಿರಕ್ಕೆ 11,000 ರು. ದೇಣಿಗೆ ನೀಡಲು ಸಿದ್ಧರಿದ್ದು, ತಮ್ಮ ಗ್ರಾಮಸ್ಥರೂ ಕೂಡ ದೇಣಿಗೆ ನೀಡಲು ಉತ್ಸುಕರಾಗಿದ್ದಾಗಿ ತಿಳಿಸುತ್ತಾನೆ. ಕೂಡಲೇ ವಂಚಕ ‘ನಿಮ್ಮ ವಾಟ್ಸಾಪ್‌ ಸಂಖ್ಯೆ ಕಳುಹಿಸಿ. ನಾನು ಕ್ಯೂಆರ್ ಕೋಡ್‌ ಕಳುಹಿಸುತ್ತೇನೆ. ಈಗ ಮತ್ತೆ ಹಿಂದೂ- ಮುಸ್ಲಿಮರ ಮಧ್ಯೆ ಗಲಾಟೆ ಶುರುವಾಗಿದೆ. ಮುಸ್ಲಿಮರು ಮಂದಿರ ನಿರ್ಮಾಣಕ್ಕೆ ಬಿಡುತ್ತಿಲ್ಲ. ಅದಕ್ಕೆ ನಾವು ದೇಣಿಗೆ ಸಂಗ್ರಹ ಮಾಡುತ್ತಿದ್ದೇವೆ’ ಎಂದು ಹೇಳುತ್ತಾನೆ.

ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಲ್‌, ‘ದೇವಾಲಯದ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುವ ಕೊಳಕು ಪ್ರಯತ್ನಗಳ ಬಗ್ಗೆ ಇತ್ತೀಚೆಗೆ ತಿಳಿಸಲಾಗಿದೆ. ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ ನಿಧಿ ಸಂಗ್ರಹಿಸಲು ಯಾರಿಗೂ ಅಧಿಕಾರ ನೀಡಿಲ್ಲ. ಗೃಹ ಸಚಿವಾಲಯ, ಉತ್ತರ ಪ್ರದೇಶ ಡಿಜಿಪಿ ಮತ್ತು ದೆಹಲಿಯ ಪೊಲೀಸ್ ಆಯುಕ್ತರಿಗೆ ಬಗ್ಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜನರು ಇಂತಹ ವಂಚನೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ’ ಎಂದಿದ್ದಾರೆ.

Share this article