ಅಯೋಧ್ಯೆ 2.0: ಜ.22ಕ್ಕೆ ರಾಮದೀಪ ಬೆಳಗಿಸಿ ದೀಪಾವಳಿ ಆಚರಿಸಿ: ಮೋದಿ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಶನಿವಾರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್‌ ಶೋ ನಡೆಸಿದರು. ಜೊತೆಗೆ ನವೀಕೃತ ರೈಲು ನಿಲ್ದಾಣ, ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ, ವಂದೇ ಭಾರತ್‌, ಅಮೃತ್‌ ಭಾರತ್‌ ರೈಲುಗಳಿಗೆ ಚಾಲನೆ ನೀಡಿದರು.

ಪಿಟಿಐ ಅಯೋಧ್ಯೆ

‘ಅಯೋಧ್ಯೆ ಭಾರತದ ಅಭಿವೃದ್ಧಿ ಹಾಗೂ ಪರಂಪರೆಯ ಸಂಕೇತ. ವಿಕಸಿತ ಭಾರತಕ್ಕೆ ರಾಮನೇ ಪ್ರೇರಣೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ‘ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮನ ಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ಅಂದು ಎಲ್ಲರೂ ನಿಮ್ಮ ಮನೆಗಳಲ್ಲಿ ಶ್ರೀರಾಮ ಜ್ಯೋತಿ ಬೆಳಗಿಸಬೇಕು’ ಎಂದು ಮನವಿ ಮಾಡಿದ್ದಾರೆ. ‘ಈವರೆಗೆ ಡೇರೆಯಲ್ಲಿ ವಾಸಿಸುತ್ತಿದ್ದ ಶ್ರೀರಾಮನಿಗೆ ಇಂದು ದೇಶದ 4 ಕೋಟಿ ಬಡವರು ಪಡೆದಂಥ ಪಕ್ಕಾ ಕಾಂಕ್ರೀಟ್‌ ಮನೆ ಸಿಕ್ಕಿದೆ. ಅರ್ಥಾತ್‌, ರಾಮಲಲ್ಲಾಗೆ ರಾಮಮಂದಿರ ರೂಪದಲ್ಲಿ ಹೊಸ ಶಾಶ್ವತ ನೆಲೆ ಲಭಿಸಿದೆ’ ಎಂದು ಹರ್ಷಿಸಿದ್ದಾರೆ.

ಅಲ್ಲದೆ, ‘ಜ.22 ಅವಿಸ್ಮರಣೀಯ ದಿನವಾಗಲಿದೆ. ಅಂದು ರಾಮನ ಪ್ರತಿಷ್ಠಾಪನೆ ನೆರವೇರಲಿದ್ದು, ಆ ದಿವಸ ದೇಶದ ಎಲ್ಲಾ 140 ಕೋಟಿ ನಾಗರಿಕರು ತಮ್ಮ ಮನೆಗಳಲ್ಲಿ ದೀಪಾವಳಿ ಆಚರಿಸಬೇಕು. ಅಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ‘ಶ್ರೀ ರಾಮ ಜ್ಯೋತಿ’ ಬೆಳಗಿಸಬೇಕು’ ಎಂದು ಮೋದಿ ಮನವಿ ಮಾಡಿದ್ದಾರೆ.ಇದೇ ವೇಳೆ, ‘ಜ.14ರ ಸಂಕ್ರಮಣದಿಂದ ಜ.22ರವರೆಗೆ ದೇಶದ ಎಲ್ಲ ಯಾತ್ರಾ ಸ್ಥಳ ಮತ್ತು ದೇವಾಲಯಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಬೇಕು’ ಎಂದೂ ಕರೆ ನೀಡಿದ್ದಾರೆ.ನೂತನ ಅಯೋಧ್ಯೆ ವಿಮಾನ ನಿಲ್ದಾಣ, ನವೀಕೃತ ಅಯೋಧ್ಯೆ ರೈಲು ನಿಲ್ದಾಣಗಳ ಉದ್ಘಾಟನೆ ನೆರವೇರಿಸಿ ಹಾಗೂ 15 ಸಾವಿರ ಕೋಟಿ ರು. ಮೌಲ್ಯದ ಅಯೋಧ್ಯೆ/ಉತ್ತರ ಪ್ರದೇಶದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳುವಿಕೆಯು ಜಗತ್ತು ಕಾಯುತ್ತಿರುವ ಕ್ಷಣವಾಗಿದೆ ಮತ್ತು ಅಯೋಧ್ಯೆಯ ಬೀದಿಗಳಲ್ಲಿ ಉತ್ಸಾಹವು ಸ್ಪಷ್ಟವಾಗಿದೆ’ ಎಂದರು.

ಜ.22ಕ್ಕೆ ಅಯೋಧ್ಯೆಗೆ ಬರಬೇಡಿ:

ಈ ನಡುವೆ, ರಾಮಮಂದಿರ ಉದ್ಘಾಟನೆಯ ದಿನವಾದ ಜ.22ರಂದು ಅಯೋಧ್ಯೆಗೆ ಭೇಟಿ ನೀಡದಂತೆ ನರೇಂದ್ರ ಮೋದಿ ಸಾರ್ವಜನಿಕರಿಗೆ ಮನವಿ ಮಾಡಿದರು.

‘ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ಜ.22ರಂದು ಉದ್ಘಾಟನೆಗೆ ಯಾರೂ ಬರಬೇಡಿ. ಏಕೆಂದರೆ ಅಂದು ದೇಗುಲದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಎಲ್ಲರಿಗೂ ಅಂದು ದರ್ಶನ ಭಾಗ್ಯ ಲಭಿಸುವುದಿಲ್ಲ. ಭಕ್ತರಾದ ನಾವು ಭಗವಾನ್ ರಾಮನಿಗೆ ಯಾವುದೇ ತೊಂದರೆ ಉಂಟು ಮಾಡಬಾರದು. ಆದರೆ ನೀವೆಲ್ಲರೂ ಜ.23ರಿಂದ ಅಯೋಧ್ಯೆಗೆ ಶಾಶ್ವತವಾಗಿ ಬರಬಹುದು. ಏಕೆಂದರೆ ರಾಮಮಂದಿರವು ಇನ್ನು ಶಾಶ್ವತವಾಗಿ ಇದೇ ಸ್ಥಳದಲ್ಲಿ ಇರುತ್ತದೆ’ ಎಂದರು.

‘ಇಷ್ಟು ವರ್ಷ ಕಾಲ ರಾಮನು ಗುಡಾರದಲ್ಲಿ (ಟೆಂಟ್‌ನಲ್ಲಿ) ಸಮಯ ಕಳೆದ. ಆದರೆ ರಾಮಲಲ್ಲಾ ಅಯೋಧ್ಯೆಯಲ್ಲಿ ಇನ್ನು ರಾಮ ಮಂದಿರದ ರೂಪದಲ್ಲಿ ಹೊಸ ಶಾಶ್ವತ ನೆಲೆಯನ್ನು ಕಂಡುಕೊಳ್ಳಲಿದ್ದಾನೆ. ರಾಮಲಲ್ಲಾ ಮತ್ತು ದೇಶದ ನಾಲ್ಕು ಕೋಟಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ’ ಎಂದು ಕರತಾಡನದ ಮೋದಿ ಮಧ್ಯೆ ಹೇಳಿದರು.ದೀಪ ಬೆಳಗಿಸಿ, ಸ್ವಚ್ಛತಾ ಆಂದೋಲನ ನಡೆಸಿ:

ಇದೇ ವೇಳೆ, ‘ಜ.22 ವಿಶೇಷ ದಿನವಾಗಿದೆ. ಹೀಗಾಗಿ ಅಂದು 140 ಕೋಟಿ ಜನರು ಮನೆಯಲ್ಲಿ ದೀಪ ಬೆಳಗಿಸಬೇಕು. ಜತೆಗೆ ಜ.14ರ ಮಕರ ಸಂಕ್ರಾಂತಿಯಿಂದ ಜ.22ರ ರಾಮ ಪ್ರತಿಷ್ಠಾಪನಾ ದಿನದವರೆಗೆ ದೇಶದ ಯಾತ್ರಾ ಸ್ಥಳಗಳು ಹಾಗೂ ದೇಗುಲಗಳಲ್ಲಿ ಸ್ವಚ್ಛತಾ ಆಂದೋಲನವನ್ನು ಜನತೆ ಕೈಗೊಳ್ಳಬೇಕು. ಅಲ್ಲದೆ ಅಯೋಧ್ಯೆಯ ನಿವಾಸಿಗಳು ಹಾಗೂ ಇಲ್ಲಿಗೆ ಬರುವ ಭಕ್ತರು ಅಯೋಧ್ಯೆಯನ್ನು ಶುಚಿಯಾಗಿಡಲು ಆದ್ಯ ಗಮನ ನೀಡಬೇಕು’ ಎಂದು ಮೋದಿ ಕರೆ ನೀಡಿದರು.

ಡಿ.30 ಐತಿಹಾಸಿಕ ದಿನ:

ಡಿ.30ರಂದು ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಮಹತ್ವದ ಬಗ್ಗೆ ಮಾತನಾಡಿದ ಮೋದಿ, ‘ದೇಶದ ಇತಿಹಾಸದಲ್ಲಿ ಡಿಸೆಂಬರ್ 30 ಅತ್ಯಂತ ಐತಿಹಾಸಿಕ ದಿನಾಂಕವಾಗಿದೆ, 1943 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಇದೇ ದಿನ ಅಂಡಮಾನ್‌ನಲ್ಲಿ ಧ್ವಜಾರೋಹಣ ಮಾಡಿ ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದ್ದರು’ ಎಂದು ಸ್ಮರಿಸಿದರು.‘ದೇಶದ ಹಲವಾರು ಸ್ಥಳಗಳಿಂದ ಅಯೋಧ್ಯೆಗೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣ ಉದ್ಘಾಟನೆಯನ್ನು ಉಲ್ಲೇಖಿಸಿ ಹೇಳಿದರು.

‘ಯಾವುದೇ ದೇಶವು ಅಭಿವೃದ್ಧಿಯ ಹೊಸ ಹಂತಗಳನ್ನು ತಲುಪಲು ಬಯಸಿದರೆ, ಅದು ತನ್ನ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಇಂದಿನ ಭಾರತವು ಹಳೆಯ ಮತ್ತು ಹೊಸದರ ಸಮ್ಮಿಶ್ರಣ. ನಾವು ಡಿಜಿಟಲ್ ಯುಗದಲ್ಲಿ ಮುಂದುವರಿಯುತ್ತಿದ್ದೇವೆ ಮತ್ತು ನಮ್ಮ ಪರಂಪರೆಯನ್ನು ಸಹ ಉಳಿಸುತ್ತಿದ್ದೇವೆ. ಅಭಿವೃದ್ಧಿಯು ಪರಂಪರೆಯ ಸಂರಕ್ಷಣೆಯೊಂದಿಗೆ ಬರಬೇಕು ಮತ್ತು ಭಾರತವನ್ನು ಶ್ರೀಮಂತ ದೇಶವನ್ನಾಗಿಸಲು ಇದು ಸಹಾಯ ಮಾಡಬೇಕು’ ಎಂದು ಜನತೆಗೆ ಮನವಿ ಮಾಡಿದರು.ರಾಮನ ನಗರಿಯಲ್ಲಿ ಪ್ರಧಾನಿ ಮೋದಿ ಭರ್ಜರಿ 15 ಕಿ.ಮೀ. ರೋಡ್‌ಶೋಅಯೋಧ್ಯೆ: ಇಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 15 ಕಿ.ಮೀ.ಗಳ ಭರ್ಜರಿ ರೋಡ್ ಶೋ ನಡೆಸಿದರು.ಶನಿವಾರ ಬೆಳಿಗ್ಗೆ 10.45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ಮಾರ್ಗದುದ್ದಕ್ಕೂ ನೆರೆದಿದ್ದ ಅಪಾರ ಸಂಖ್ಯೆಯ ಜನರು, ಮೋದಿ ಅವರ ಮೇಲೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಬಿಜೆಪಿ ಧ್ವಜಗಳನ್ನು ಬೀಸಿ ಮೋದಿಗೆ ಜೈಕಾರ ಹಾಕಿದರು.ಪ್ರಧಾನಿ ಮೋದಿ ಅವರು ಸಾಗುವ ಹಾದಿಯುದ್ದಕ್ಕೂ ಸುಮಾರು 40 ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳಲ್ಲಿ 1400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ದಾರಿಯುದ್ಧಕ್ಕೂ ನೆರೆದಿದ್ದ ಅಭಿಮಾನಿಗಳು ಜೈಶ್ರೀರಾಮ್, ಜೈ ಮೋದಿ ಎಂಬ ಘೋಷಣೆಗಳನ್ನು ಕೂಗಿದರು.ಅಯೋಧ್ಯೇಲಿ ಅಭಿವೃದ್ಧಿ ಪರ್ವ

ಪಿಟಿಐ ಅಯೋಧ್ಯೆಜ.22ರ ರಾಮಮಂದಿರ ಉದ್ಘಾಟನೆ ಹಾಗೂ ರಾಮದೇವರ ಮೂರ್ತಿ ಪ್ರತಿಷ್ಠಾಪನೆಗೆ ಪೂರ್ವಭಾವಿಗಾಗಿ ಶನಿವಾರ ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವವೇ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಮತ್ತು ಮರು ಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಅಲ್ಲಿಂದಲೇ ಅವರು ದೇಶದ ವಿವಿಧ ಸ್ಥಳ ಸಂಪರ್ಕಿಸುವ 2 ಅಮೃತ್ ಭಾರತ್ ಮತ್ತು 6 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಅಲ್ಲದೆ, ಅಯೋಧ್ಯೆ ಹಾಗೂ ಉತ್ತರ ಪ್ರದೇಶದ ಸುಮಾರು 15,700 ಕೋಟಿ ರು. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಮೋದಿ ಬೆಳಗ್ಗೆ 10.45ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ರೋಡ್ಶೋ ನಡೆಸಿದರು. ಈ ವೇಳೆ ಮಾರ್ಗದುದ್ದಕ್ಕೂ ನೆರೆದಿದ್ದ ಅಪಾರ ಸಂಖ್ಯೆಯ ಜನರು, ಮೋದಿ ಅವರ ಮೇಲೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಬಿಜೆಪಿ ಧ್ವಜಗಳನ್ನು ಬೀಸಿ ಮೋದಿಗೆ ಜೈಕಾರ ಹಾಕಿದರು. ಪ್ರಧಾನಿಯವರು ಮಾರ್ಗದುದ್ದಕ್ಕೂ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳನ್ನು ವೀಕ್ಷಿಸಿದರು.ರೋಡ್ ಶೋ ಮೂಲಕ ರೈಲು ನಿಲ್ದಾಣಕ್ಕೆ ಆಗಿಸಿದ ಮೋದಿ, ಮರು ಅಭಿವೃದ್ಧಿಗೊಂಡ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಅಲ್ಲಿಂದಲೇ ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್ -ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.ಇದೇ ವೇಳೆ, ಅವರು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಅವು: ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್, ಅಮೃತಸರ-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್, ಕೊಯಮತ್ತೂರು-ಬೆಂಗಳೂರು ದಂಡು ವಂದೇ ಭಾರತ್ ಎಕ್ಸ್ಪ್ರೆಸ್, ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್, ಜಾಲ್ನಾ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಅಯೋಧ್ಯೆ -ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್ಪ್ರೆಸ್.ಈ ವೇಳೆ ಅಯೋಧ್ಯೆ ನಿಲ್ದಾಣದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ವೀಕ್ಷಿಸಿದರು. ಮೋದಿ ಜತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದ್ದರು.ನಂತರ ಏರ್ಪೋರ್ಟ್ಗೆ ವಾಪಸಾಗುವ ಮಾರ್ಗ ಮಧ್ಯೆ ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಚೌಕ್ಗೆ ಭೇಟಿ ನೀಡಿದರು. ಚೌಕ್ನಲ್ಲಿ ಲತಾ ಅವರ ಸ್ಮರಣಾರ್ಥ ಬೃಹತ್ ಗಾತ್ರದ ವೀಣೆಯನ್ನು ಅಳವಡಿಸಲಾಗಿದೆ. ಮೋದಿ ಭೇಟಿಯ ವೇಳೆ ಲತಾ ಮಂಗೇಶ್ಕರ್ ಹಾಡಿದ ಭಕ್ತಿಗೀತೆಯನ್ನು ನುಡಿಸಲಾಯಿತು.ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜ। (ನಿವೃತ್ತ) ವಿ.ಕೆ.ಸಿಂಗ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ನಾಯಕರು ಮೋದಿ ಜತೆಗಿದ್ದರು.ಬಳಿಕ ಮೋದಿ ಅವರು ಸಮೀಪದಲ್ಲೇ ಆಯೋಜನೆಗೊಂಡಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಭಾಗಿಯಾಗಿ ಭಾಷಣ ಮಾಡಿ, ದಿಲ್ಲಿಗೆ ನಿರ್ಗಮಿಸಿದರು.ಉಜ್ಬಲಾ ಫಲಾನುಭವಿ ಮೀರಾ ಮನೆಗೆ ಮೋದಿ ದಿಢೀರ್‌ ಭೇಟಿಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಯಾವುದಾದರೂ ಸ್ಥಳಕ್ಕೆ ಹೋದಾಗ ಕೆಲವು ಅಚ್ಚರಿಗಳನ್ನು ಮೂಡಿಸುವುದುಂಟು. ಅಂತೆಯೇ ಅಯೋಧ್ಯೆಗೆ ಶನಿವಾರ ಭೇಟಿ ನೀಡಿದಾಗ ಮೀರಾ ಮಾಂಝಿ ಎಂಬ ಬಡ ಮಹಿಳೆಯ ಮನೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಲ್ಲದೆ, ಮೀರಾಗೆ ಕುಟುಂಬ ಸಮೇತರಾಗಿ ಜ.22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದರು.ಹಾಗಿದ್ದರೆ ಮೀರಾ ಮಾಂಝಿ ಯಾರು? ಆಕೆಯ ಮನೆಗೇ ಮೋದಿ ಏಕೆ ಹೋದರು ಎಂಬ ಕುತೂಹಲ ಮೂಡದೇ ಇರದು. ಮೀರಾ ಅವರು ಉಜ್ವಲಾ ಯೋಜನೆಯ ‘ಫಲಾನುಭವಿ ನಂ.10 ಕೋಟಿ’ ಆಗಿದ್ದಾರೆ. ಅರ್ಥಾತ್ ಉಜ್ವಲಾ ಎಲ್ಪಿಜಿ ಯೋಜನೆ 10 ಕೋಟಿ ಫಲಾನುಭವಿಗಳಿಗೆ ತಲುಪಿದ್ದು, 10ನೇ ಕೋಟಿಯ ಫಲಾನುಭವಿ ಮೀರಾ ಆಗಿದ್ದಾರೆ. ಹೀಗಾಗಿ ಮೋದಿ ಅವರು ಮೀರಾರನ್ನು ಭೇಟಿಯಾದರು.ಮೋದಿಗೆ ಚಹಾ ಕೊಟ್ಟ ಮೀರಾ:ಮೋದಿ ಭೇಟಿಯ ಅನುಭವ ಹಂಚಿಕೊಂಡ ಮೀರಾ, ‘ಮೋದಿ ತಮ್ಮ ಮನೆಗೆ ಬರುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ಕೇವಲ 1 ತಾಸಿನ ಹಿಂದಷ್ಟೇ ನಮ್ಮ ರಾಜಕೀಯ ನಾಯಕರೊಬ್ಬರು ಬರುತ್ತಾರೆ ಎಂದು ಗೊತ್ತಾಯಿತು. ಅದು ನರೇಂದ್ರ ಮೋದಿ ಎಂದು ಗೊತ್ತಾದಾಗ ಅಚ್ಚರಿ ಆಯಿತು. ಮೋದಿ ಅವರು ಉಜ್ವಲ ಯೋಜನೆಯಲ್ಲಿ ನಮಗೆ ಸಿಗುತ್ತಿರುವ ಪ್ರಯೋಜನಗಳ ಬಗ್ಗೆ ಕೇಳಿದರು. ಅಲ್ಲದೆ, ‘ಇಂದು ಏನು ಅಡುಗೆ ಮಾಡಿರುವೆ?’ ಎಂದರು ನಾನು ಅನ್ನ, ದಾಲ್ ಮತ್ತು ತರಕಾರಿ ಪಲ್ಯ ಮತ್ತು ಚಹಾ ಮಾಡಿದ್ದೇನೆ ಎಂದು ಹೇಳಿದೆ. ಅದಕ್ಕೆ ಮೋದಿ ಅವರು, ‘ಬಹಳ ಥಂಡಿ ಇದೆ. ಒಂದು ಕಪ್ ಚಹಾ ಕೊಡು’ ಎಂದರು. ‘ನೀನು ಮಾಡಿದ ಚಹಾದ ಸಿಹಿ ಸಲ್ಪ ಜಾಸ್ತಿ ಇದೆ’ ಎಂದರು. ನಾನು ಮಾಡೋ ಚಹಾನೇ ಹೀಗೆ ಎಂದೆ’ ಎಂದು ವಿವರಿಸಿದರು.ಮೋದಿ ಮೇಲೆ ಬಾಬ್ರಿ ಮಸೀದಿ ದಾವೆದಾರ ಅನ್ಸಾರಿ ಪುಷ್ಪವೃಷ್ಟಿ!

ಅಯೋಧ್ಯೆ: ರಾಮಜನ್ಮಭೂಮಿ ಭೂವಿವಾದ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಆಗಮಿಸಿ ರೋಡ್ ಶೋ ನಡೆಸುವಾಗ, ಪುಷ್ಪವೃಷ್ಟಿ ಮಾಡಿ ಗಮನ ಸೆಳೆದಿದ್ದಾರೆ. ಜೊತೆಗೆ ಮೋದಿ ಅವರಿಂದಾಗಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.ಪವಿತ್ರ ನಗರಕ್ಕೆ ಬಂದಿಳಿದ ಮೋದಿಯವರಿಗೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಹರ್ಷೋದ್ಗಾರ, ಬೀಸುವ ಮತ್ತುಪುಷ್ಪವೃಷ್ಟಿ ಮಾಡುವ ಮೂಲಕ ಭವ್ಯ ಸ್ವಾಗತ ನೀಡಿದರು. ಈ ವೇಳೆ ಇಕ್ಬಾಲ್ ಅನ್ಸಾರಿ ಕೂಡ ಮೋದಿ ರೋಡ್ ಶೋ ಸಾಗುವ ಮಾರ್ಗಮಧ್ಯೆ ಕೈಯಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ಹಿಡಿದು ನಿಂತು ಮೋದಿ ಅವರ ಮೇಲೆ ವೃಷ್ಟಿಗರೆದರು.‘ಮೋದಿ ನಮ್ಮ ಊರ ಅತಿಥಿ. ನಮ್ಮ ಪ್ರಧಾನಿ. ಹೀಗಾಗಿ ನಮ್ಮ ಮನೆ ಮುಂದೆ ಅವರು ಬಂದಾಗ ಹೂಮಳೆ ಸುರಿಸಿದೆ. ಇದಕ್ಕೆ ನನ್ನ ಕುಟುಂಬಸ್ಥರೂ ಸಾಥ್ ನೀಡಿದರು’ ಎಂದು ನುಡಿದರು.ಈ ಹಿಂದೆ ಅನ್ಸಾರಿ ಅವರು, ರಾಮಮಂದಿರ ಶಂಕುಸ್ಥಾಪನೆಗೆಂದು ಮೋದಿ ಅಯೋಧ್ಯೆಗೆ ಬಂದಾಗ ಮಾತನಾಡಿ, ‘ಮೋದಿಯವರು ಅಯೋಧ್ಯೆಗೆ ಭೇಟಿ ನೀಡುತ್ತಿರುವುದು ಅದೃಷ್ಟ. ಮೋದಿ ಅವರ ಅಮೃತ ಹಸ್ತದಿಂದಲೇ ರಾಮನ ‘ಪ್ರಾಣ ಪ್ರತಿಷ್ಠಾ’ ನೆರವೇರಬೇಕು’ ಎಂದು ಆಗ್ರಹಿಸಿದ್ದರು.ಜ.2ರಿಂದ ಬಿಜೆಪಿ ‘ಶುಕ್ರಿಯಾ ಮೇರಿ ಭಾಯಿಜಾನ್‌’ ಅಭಿಯಾನ

ಪಿಟಿಐ ಲಖನೌ2024ರ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಜ.2ರಿಂದ ಉತ್ತರ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ‘ಶುಕ್ರಿಯಾ ಮೋದಿ ಭಾಯಿಜಾನ್’ ಅಭಿಯಾನವನ್ನು ಪ್ರಾರಂಭಿಸಲಿದೆ.‘ನಾ ದೂರಿ ಹೈ, ನಾ ಖೈ ಹೈ, ಮೋದಿ ಹಮಾರಾ ಭಾಯಿ ಹೈ’ (ಯಾವುದೇ ಬೇರ್ಪಡುವಿಕೆ ಇಲ್ಲ, ಯಾವುದೇ ಕಂದಕವಿಲ್ಲ, ಮೋದಿ ನಮ್ಮ ಸಹೋದರ) ಎಂಬ ಅಡಿಬರಹದೊಂದಿಗೆ, ಅಭಿಯಾನವು ಕನಿಷ್ಠ 1,000 ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯುವ ಗುರಿಯನ್ನು ಹೊಂದಿದೆ.ಉತ್ತರ ಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕುನ್ವರ್ ಬಸಿತ್ ಅಲಿ ಶನಿವಾರ ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಜ.2ರಿಂದ ಅಭಿಯಾನ ಆರಂಭವಾಗಲಿದ್ದು, ಜ. 20ರವರೆಗೆ ನಡೆಯಲಿದೆ. ಅಭಿಯಾನದ ಅಡಿ ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಮಹಿಳೆಯರ ಉದ್ಧಾರಕ್ಕೆ ಮಾಡಿದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಮತ್ತು ಬಿಜೆಪಿಗೆ ಮತ ಹಾಕಲು ಪ್ರೋತ್ಸಾಹಿಸಲಾಗುವುದು ಎಂದರು.ಮೋದಿ ಅವರು ಮುಸ್ಲಿಂ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಆದ್ಯತೆ ನೀಡುವ ಮೂಲಕ ಸಹೋದರ-ಸಹೋದರಿ ಸಂಬಂಧವನ್ನು ಸ್ಥಾಪಿಸಿದ್ದಾರೆ. ಹೀಗಾಗಿ ಅಭಿಯಾನಕ್ಕೆ ‘ಶುಕ್ರಿಯಾ ಮೋದಿ ಭಾಯಿಜಾನ್’ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.ಅಭಿಯಾನದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗವುದು. ಕಾರ್ಯಕ್ರಮಗಳಲ್ಲಿ ಮುಸ್ಲಿಂ ಮಹಿಳೆಯರು ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ಅಲಿ ಹೇಳಿದರು.ಅಡ್ವಾಣಿ, ಜೋಶಿ ಅಯೋಧ್ಯೆಗೆ ಕರೆತರಲು ವಿಶೇಷ ವಿಮಾನ?

ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ವರಿಷ್ಠರಾದ ಎಲ್ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರು ಆಗಮಿಸಲು ಬಯಸಿದರೆ ಅವರನ್ನು ಕರೆತಲು ವಿಶ್ವಹಿಂದೂ ಪರಿಷತ್ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಹಿರಿಯ ನಾಯಕರಿಗೆ ದೇಗುಲ ನಿರ್ಮಾಣ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿತ್ತಾದರೂ, ಅಂದು ಭಾರೀ ಜನಜಂಗುಳಿ ಇರುವ ಕಾರಣ ಅಂದು ಬರದೇ ಇರುವುದು ಸೂಕ್ತ ಎಂದು ಸಲಹೆ ನೀಡಿತ್ತು. ಇದಕ್ಕೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಒಂದು ವೇಳೆ ಉಭಯ ನಾಯಕರು ದೇಗುಲಕ್ಕೆ ಆಗಮಿಸಲು ಬಯಸಿದರೆ ಅವರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಅಯೋಧ್ಯೆ ವಿಮಾನದಲ್ಲಿ ಹನುಮಾನ್‌ ಚಾಲೀಸಾ ಪಠಿಸಿ ಭಕ್ತರ ಸಂಭ್ರಮ!ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಶನಿವಾರ ಉದ್ಘಾಟನೆಗೊಂಡ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿಮಾನದಲ್ಲಿ ಭಕ್ತರು ಹನುಮಾನ್ ಚಾಲೀಸಾ ಪಠಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಲ್ಲದೇ ವಿಮಾನ ಇಳಿಯುವ ಸಮಯದಲ್ಲಿ ‘ಜೈ ಶ್ರೀರಾಮ್’ ಘೋಷಣೆಯನ್ನು ಕೂಗಿದ್ದಾರೆ. ಈ ನಡುವೆ ಮೊದಲ ವಿಮಾನದ ಪ್ರಯಾಣಿಕರಿಗೆ ಸಂಸ್ಥೆಯ ವತಿಯಿಂದ ಕೇಕ್ ವಿತರಿಸಲಾಯಿತು.ಶ್ರೀರಾಮ ಹಿಂದುಗಳಿಗೆ ಮಾತ್ರವಲ್ಲದೆ, ವಿಶ್ವಕ್ಕೆ ಭಗವಂತ: ಫಾರೂಖ್

ಪೂಂಛ್: ಶ್ರೀರಾಮಚಂದ್ರ ಕೇವಲ ಹಿಂದುಗಳಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಭಗವಂತ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು,‘ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಮಂದಿರ ಸ್ಥಾಪನೆಗೆ ಶ್ರಮಿಸಿದವರಿಗೆಲ್ಲ ಅಭಿನಂದನೆಗಳು. ಶ್ರೀರಾಮ ವಿಶ್ವದ ಪ್ರತಿ ವ್ಯಕ್ತಿಗೂ ಸೇರಿದವನು. ಆತ ಜಾತಿ ಧರ್ಮದಿಂದಾಚೆಗೆ ಮಾನವೀಯತೆ ಅಂಶವನ್ನು ವಿಶ್ವಕ್ಕೆ ನೀಡಿದ ವ್ಯಕ್ತಿ. ದೀನ ದುರ್ಬಲರನ್ನು ಮೇಲೆತ್ತುವ ಕೆಲಸವನ್ನು ಶ್ರೀರಾಮ ಮಾಡಿದ್ದ. ಭ್ರಾತೃತ್ವದ ಪರಿಕಲ್ಪನೆಯ ಮೂಲಕ ಶಾಂತಿ ಪಸರಿಸಿದವನು ರಾಮ. ಆದರೆ ಈಗ ದೇಶದಲ್ಲಿ ಭ್ರಾತೃತ್ವ ಅಳಿಯುತ್ತಿದೆ ಎಂದು ಫಾರೂಖ್ ಹೇಳಿದರು.

Share this article