ನವದೆಹಲಿ: ಕೇಂದ್ರದಲ್ಲಿ ತನ್ನ 10 ವರ್ಷಗಳ ಅಧಿಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಡುತ್ತಿದೆ. ಆದರೆ ಇದಕ್ಕೆ ಬಲಿಯಾಗದೇ 2024ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಮ್ಮ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಒಂದಾಗಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆಗಾಗಿ ತಯಾರಿ ಆರಂಭಿಸುವ ಕುರಿತು ಪಕ್ಷದ ನಾಯಕರಿಗೆ ಅನೇಕ ಸೂಚನೆಗಳನ್ನು ನೀಡಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯನ್ನು ಶ್ಲಾಘಿಸಿದ ಖರ್ಗೆ, ಅವರ ಇನ್ನೊಂದು ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯು ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಮುನ್ನೆಲೆಗೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು ‘ಬಿಜೆಪಿಯು ತನ್ನ ವೈಫಲ್ಯ ಮುಚ್ಚಲು ಭಾವನಾತ್ಮಕ ವಿಷಯಗಳನ್ನು ತರುತ್ತದೆ. ನಾವು ಒಗ್ಗಟ್ಟಾಗಿ ಜನರ ಮುಂದೆ ಬಿಜೆಪಿಯ ಸುಳ್ಳು, ವಂಚನೆ ಮತ್ತು ತಪ್ಪುಗಳಿಗೆ ಪ್ರತ್ಯುತ್ತರ ನೀಡಬೇಕು ಎಂದರು. ಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕಗಳ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸೇರಿ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಖರ್ಗೆ, ‘25 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರ ಸೇವೆಯನ್ನು ನಾನು ಗೌರವಿಸುತ್ತೇನೆ. ಕಾಂಗ್ರೆಸ್ ನೇತೃತ್ವದ ಯುಪಿಎ 2004 ರಲ್ಲಿ ಎನ್‌ಡಿಎಯನ್ನು ಸೋಲಿಸಿ 10 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯಲು ಪ್ರತಿ ರಾಜ್ಯದಲ್ಲೂ ಪಕ್ಷವು ಉತ್ತಮವಾಗಿ ಕೆಲಸ ಮಾಡಿತ್ತು.
ಆಗ, ಪ್ರತಿ ಹಳ್ಳಿ ಮತ್ತು ನಗರದಲ್ಲಿ ನಮ್ಮ ಕಾರ್ಯಕರ್ತರು ಎದ್ದುನಿಂತರು. ಇಂದು ಅದೇ ಸಮರ್ಪಣಾ ಭಾವದಿಂದ ಪಕ್ಷವನ್ನು ಮುನ್ನಡೆಸಲು ಶ್ರಮಿಸಬೇಕಿದೆ’ ಎಂದರು. ಅಲ್ಲದೇ ‘ಬಿಜೆಪಿಯ ಎಲ್ಲ ದಾಳಿಗಳು ಕಾಂಗ್ರೆಸ್ ಮತ್ತು ‘ಇಂಡಿಯಾ ಮೈತ್ರಿಕೂಟ’ದ ಮೇಲೆ. ‘ಇಂಡಿಯಾ’ ಬಣವು ಪ್ರಬಲವಾದ ಅಡಿಪಾಯ ಇರುವ ಉತ್ತಮ ಸಿದ್ಧಾಂತವುಳ್ಳ ಅನೇಕ ಪಕ್ಷಗಳನ್ನು ಹೊಂದಿದೆ. ಆದರೆ ಎನ್‌ಡಮೆ ಮೈತ್ರಿಕೂಟ ಕೇವಲ ಹೆಸರಿಗೆ ಮಾತ್ರ ಉಳಿದಿದೆ ಎಂದರು. ಅಲ್ಲದೇ ಆಧುನಿಕ ಭಾರತದ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸಲು ಮೋದಿ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಅವರಿಗೆ ನಾವು ತಕ್ಕ ಉತ್ತರ ನೀಡಬೇಕಿದೆ. ಸಂಸದೀಯ ಪ್ರಜಾಪ್ರಭುತ್ವ ಮತ್ತು ಆಧುನಿಕ ಭಾರತದ ಅಡಿಪಾಯದಲ್ಲಿ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಶಾಶ್ವತವಾಗಿ ಸ್ಮರಿಸಬೇಕು. ಏಕೆಂದರೆ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಕರೆ ನೀಡಿದ್ದಾರೆ.