ಕುರ್ಚಿ ಬಿಕ್ಕಟ್ಟು ಬಗ್ಗೆ ಸೋನಿಯಾ ಬಳಿ ಖರ್ಗೆ ವಿವರಣೆ

KannadaprabhaNewsNetwork |  
Published : Dec 01, 2025, 01:45 AM ISTUpdated : Dec 01, 2025, 05:36 AM IST
mallikarjun kharge

ಸಾರಾಂಶ

 ಅಧಿಕಾರ ಹಂಚಿಕೆ ಬೆಳವಣಿಗೆಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ವಿವರಣೆ ನೀಡಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಪ್ರತಿಪಾದಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ತಮ್ಮ ಮಧ್ಯಪ್ರವೇಶದ ಅವಶ್ಯಕತೆ ಇದೆ ಎಂದು ವಿವರಿಸಿದ್ದಾರೆ 

  ಬೆಂಗಳೂರು :  ರಾಜ್ಯದಲ್ಲಿನ ಅಧಿಕಾರ ಹಂಚಿಕೆ ಬೆಳವಣಿಗೆಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ಭಾನುವಾರ ವಿವರಣೆ ನೀಡಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಪ್ರತಿಪಾದಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ತಮ್ಮ ಮಧ್ಯಪ್ರವೇಶದ ಅವಶ್ಯಕತೆ ಇದೆ ಎಂದು ವಿವರಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಸೋನಿಯಾಗಾಂಧಿ ಅವರು ಸಮ್ಮತಿಸಿ ಶೀಘ್ರ ಪರಿಹರಿಸೋಣ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ವಿಧಾನಮಂಡಲ ಅಧಿವೇಶನ ಹಾಗೂ ಸೋಮವಾರದಿಂದ ಆರಂಭ‍ವಾಗಲಿರುವ ಸಂಸತ್ ಅಧಿವೇಶನ ಸೇರಿ ಎರಡೂ ಅಧಿವೇಶನಗಳ ಕಲಾಪ ಮುಗಿದ ಬಳಿಕವಷ್ಟೇ ರಾಜ್ಯದ ಅಧಿಕಾರ ಹಂಚಿಕೆ ತಿಕ್ಕಾಟದ ಕುರಿತು ಅಂತಿಮ ನಿರ್ಣಯ ಹೊರ ಬೀಳಲಿದೆ ಎಂದು ತಿಳಿದು ಬಂದಿದೆ.

ಖರ್ಗೆ ಅವರು ಸೋನಿಯಾಗಾಂಧಿ ಅವರೊಂದಿಗೆ ಚರ್ಚಿಸಿದರು.

ಭಾನುವಾರ ದೆಹಲಿಯಲ್ಲಿ ಸಂಸತ್‌ ಚಳಿಗಾಲದ ಅಧಿವೇಶನ ಎದುರಿಸುವ ಕುರಿತು ನಡೆದ ಸಭೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ನಿಮಿಷಗಳ ಕಾಲ ಸೋನಿಯಾಗಾಂಧಿ ಅವರೊಂದಿಗೆ ಚರ್ಚಿಸಿದರು.

ಈ ವೇಳೆ ರಾಜ್ಯದಲ್ಲಿ ಉಂಟಾಗಿದ್ದ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆ. ಹೈಕಮಾಂಡ್ ಸೂಚಿಸಿದಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಒಟ್ಟಿಗೆ ಬ್ರೇಕ್‌ಫಾಸ್ಟ್‌ ಸಭೆ ನಡೆಸಿದ್ದು ಬಳಿಕ ಸುದ್ದಿಗೋಷ್ಠಿ ನಡೆಸಿ ಇಬ್ಬರ ನಡುವೆ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ನಾವಿಬ್ಬರೂ ಬದ್ಧ ಎಂಬ ಸಂದೇಶ ನೀಡಿ ತಾತ್ಕಾಲಿಕವಾಗಿ ವಿವಾದ ತಣ್ಣಗಾಗಿಸಿರುವ ಬಗ್ಗೆ ಸೋನಿಯಾಗಾಂಧಿ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ, ಡಿಸಿಎಂ ದೆಹಲಿಗೆ ತೆರಳುವ ಸಾಧ್ಯತೆ: 

ಇದರ ನಡುವೆಯೇ ಮುಂದಿನ ವಾರ ಸಂಸತ್ ಅಧಿವೇಶನದಲ್ಲಿ ರಾಜ್ಯದ ಪರ ವಿಚಾರಗಳನ್ನು ಪ್ರಸ್ತಾಪಿಸುವ ಕುರಿತು ಸಂಸದರ ಸರ್ವಪಕ್ಷ ಸಭೆ ನಡೆಸುವ ಸಾಧ್ಯತೆಯಿದೆ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಇಬ್ಬರೂ ವರಿಷ್ಠರನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆ ವಿಷಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಜತೆಗೆ, ಡಿ.14 ರಂದು ರಾಷ್ಟ್ರೀಯ ಕಾಂಗ್ರೆಸ್‌ನಿಂದ ವೋಟ್‌ ಚೋರಿ ಕುರಿತು ರಾಮ್‌ಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಗೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತೆರಳುವ ಸಾಧ್ಯತೆಯಿದೆ. ಈ ವೇಳೆಯೂ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ಆದರೆ, ಉಭಯ ಅಧಿವೇಶನಗಳು ಮುಗಿದ ಬಳಿಕವಷ್ಟೇ ಅಧಿಕಾರ ಹಸ್ತಾಂತರದ ಕುರಿತು ಗಂಭೀರವಾದ ಸಭೆ ನಡೆಯಲಿದೆ. ಬಳಿಕವಷ್ಟೇ ನಿರ್ಧಾರ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮರ್ಯಾದಾ ಹತ್ಯೆ : ಯುವ ಜೋಡಿ ಕೊಂದು ದೇವಸ್ಥಾನದ ಬಳಿ ಹೂತ ಸಹೋದರರು
ಉತ್ತರ ಕನ್ನಡ ಜಿಲ್ಲೆಯ ಉಗ್ರಗೆ ಬಂಗಾಳದಲ್ಲಿ 10 ವರ್ಷ ಜೈಲು