ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೂಚನೆ

KannadaprabhaNewsNetwork |  
Published : Aug 05, 2024, 12:38 AM ISTUpdated : Aug 05, 2024, 05:16 AM IST
ವೇಣುಗೋಪಾಲ್‌ | Kannada Prabha

ಸಾರಾಂಶ

‘ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸಿರುವ ಬಿಜೆಪಿಯನ್ನು ಎಲ್ಲಾ ಸಚಿವರೂ ಒಟ್ಟಾಗಿ ಎದುರಿಸಬೇಕು. ಎಲ್ಲರೂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕು  ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 ಬೆಂಗಳೂರು :  ‘ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸಿರುವ ಬಿಜೆಪಿಯನ್ನು ಎಲ್ಲಾ ಸಚಿವರೂ ಒಟ್ಟಾಗಿ ಎದುರಿಸಬೇಕು. ಎಲ್ಲರೂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕು. ಬಿಜೆಪಿ ಇನ್ನೊಂದು ಬಾರಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೆದರುವಂತೆ ಪಾಠ ಕಲಿಸಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ಮುಡಾ’ ವಿಚಾರವಾಗಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿರುವ ಹಾಗೂ ಬಿಜೆಪಿ-ಜೆಡಿಎಸ್‌ನವರು ‘ಮೈಸೂರು ಚಲೋ’ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆ.ಸಿ.ವೇಣುಗೋಪಾಲ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ ಅವರು ಭಾನುವಾರ ರಾಜ್ಯ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದ ವೇಣುಗೋಪಾಲ್ ಅವರು, ‘ಪ್ರಕರಣದ ಬಗ್ಗೆ ಹೈಕಮಾಂಡ್‌ ಎಲ್ಲಾ ವಿವರಗಳನ್ನೂ ಕಲೆ ಹಾಕಿ ಚರ್ಚಿಸಿದೆ. ಇದು ಬಹುಮತದಿಂದ ರಚಿಸಿರುವ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿರುವ ದುಷ್ಟ ಪ್ರಯತ್ನ. ಇದಕ್ಕೆ ಸಚಿವರೆಲ್ಲರೂ ಒಟ್ಟಾಗಿ ತಕ್ಕ ಪಾಠ ಕಲಿಸಬೇಕು. ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಬಲವಾಗಿ ಸಮರ್ಥಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಕಾನೂನು ಹೋರಾಟದಲ್ಲಿ ಬಿಜೆಪಿಗೆ ಸೋಲಾಗಲಿದೆ:ನಾವು (ಹೈಕಮಾಂಡ್) ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲರೊಂದಿಗೆ ಚರ್ಚಿಸಿದ್ದೇವೆ. ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಪ್ಪು ಇಲ್ಲ ಎಂಬುದು ದಾಖಲೆಗಳಿಂದ ಸಾಬೀತಾಗಿದೆ. 

ಸಿದ್ದರಾಮಯ್ಯ ಅವರು ಶುದ್ಧ ಹಸ್ತರಾಗಿದ್ದು, ವಿನಾಕಾರಣ ಸರ್ಕಾರವನ್ನು ಸಿಕ್ಕಿ ಹಾಕಿಸಲು ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಕಾನೂನು ಹೋರಾಟದಲ್ಲಿ ಬಿಜೆಪಿಗೆ ಸೋಲಾಗಲಿದೆ. ಹೀಗಾಗಿ ಧೈರ್ಯವಾಗಿ ಹೋರಾಟ ಮಾಡಿ ಎಂದು ಸಚಿವರಿಗೆ ಮಾರ್ಗದರ್ಶನ ಮಾಡಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರವು 136 ಸ್ಥಾನಗಳ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಸರ್ಕಾರವನ್ನು ಕೆಡವಲು ಇಂತಹ ವಿಷಯಗಳನ್ನು ಗಂಭೀರ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ. ಬೇರೆ ರಾಜ್ಯಗಳ ಮಾದರಿಯಲ್ಲೇ ಇಲ್ಲೂ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದು, ಇದಕ್ಕೆ ನೀವು ಅವಕಾಶ ನೀಡಬಾರದು ಎಂದು ಕಿವಿ ಮಾತು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

PREV

Recommended Stories

2026ರ ಫೆ.7 ರಿಂದ ಟಿ20 ವಿಶ್ವಕಪ್‌ ಆರಂಭ ?
ನೇಪಾಳದಲ್ಲಿ ಪೊಲೀಸರಿಂದಲೇ ಹಿಂಸೆ, ರೇ*: ಆರೋಪ