ವಕ್ಫ್ ಮಂಡಳಿಗಳ ‘ಅನಿರ್ಬಂಧಿತ’ ಅಧಿಕಾರವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಹೆಜ್ಜೆ

KannadaprabhaNewsNetwork |  
Published : Aug 05, 2024, 12:38 AM ISTUpdated : Aug 05, 2024, 05:19 AM IST
ವಕ್ಫ್‌ ಮಂಡಳಿ | Kannada Prabha

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಯಾವುದೇ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ‘ಅನಿರ್ಬಂಧಿತ’ ಅಧಿಕಾರವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಯಾವುದೇ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ‘ಅನಿರ್ಬಂಧಿತ’ ಅಧಿಕಾರವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇಂಥದ್ದೊಂದು ತಿದ್ದುಪಡಿಯನ್ನು ಇದೇ ವಾರ ಸಂಪುಟ ಸಭೆಯಲ್ಲಿ ಮಂಡಿಸಿ ಅದನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಅಂಗೀಕಾರ ಪಡೆಯುವ ದಿಸೆಯಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ವರದಿಗಳು ತಿಳಿಸಿವೆ.

ಒಂದು ವೇಳೆ ಈ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ, ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದರೆ ವಕ್ಫ್‌ ಮಂಡಳಿಗೆ ಸರ್ಕಾರದ ದೃಢೀಕರಣ (ವೆರಿಫಿಕೇಶನ್‌) ಕಡ್ಡಾಯವಾಗಲಿದೆ. ವಕ್ಫ್‌ ಮಂಡಳಿ ಈಗ ದೇಶದಲ್ಲಿ ಲಕ್ಷಾಂತರ ಕೋಟಿ ರು. ಆಸ್ತಿಯ ಒಡೆತನ ಹೊಂದಿದ್ದು, ರಕ್ಷಣಾ ಇಲಾಖೆ ಹಾಗೂ ರೈಲ್ವೆ ನಂತರ ಅಧಿಕ ಭೂಮಿ ಹೊಂದಿರುವ ದೇಶದ 3ನೇ ಸಂಸ್ಥೆ ಆಗಿದೆ.

ವಕ್ಫ್ ಕಾಯಿದೆಯಲ್ಲಿ 40ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಶುಕ್ರವಾರ ಸಂಜೆ ಸಚಿವ ಸಂಪುಟವು ಚರ್ಚಿಸಿದೆ. ಅನಿಯಂತ್ರಿತ ಎಂದು ಪರಿಗಣಿಸಲಾಗಿರುವ ನ್ಯಾಯವ್ಯಾಪ್ತಿಯನ್ನು ಪರಿಶೀಲಿಸುವುದೂ ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ

ಪ್ರಸ್ತಾವಿತ ತಿದ್ದುಪಡಿಗಳ ಅಡಿಯಲ್ಲಿ, ಹಿಂದೆ ಅನಿರ್ಬಂಧಿತವಾಗಿದ್ದ ವಕ್ಫ್ ಬೋರ್ಡ್‌ಗಳ ಕ್ಲೇಮ್‌ಗಳು (ಹಕ್ಕು ಸಾಧನೆ) ಸರ್ಕಾರದ ಕಡ್ಡಾಯ ಪರಿಶೀಲನೆಗೆ ಒಳಪಡಲಿವೆ.ಸಂಪುಟ ನಿರ್ಧಾರಗಳ ಕುರಿತು ಶುಕ್ರವಾರ ಸಂಜೆ ನಡೆದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಈ ಕ್ರಮವನ್ನು ಉಲ್ಲೇಖಿಸದಿದ್ದರೂ, ಶೀಘ್ರ ಸಂಸತ್ತಿನಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ.

ಏನು ಬದಲಾವಣೆ?:1954ರಲ್ಲಿ ಮೊದಲು ವಕ್ಫ್ ಕಾಯ್ದೆ ಜಾರಿಗೆ ಬಂತು. 2013ರಲ್ಲಿ ಯುಪಿಎ ಸರ್ಕಾರದ ವೇಳೆ ಮೂಲ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಮೂಲಕ ವಕ್ಫ್ ಮಂಡಳಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು. ಪ್ರಸ್ತುತ ವಕ್ಫ್‌ ಮಂಡಳಿಗಳು ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಟ್ಯಾಗ್ ಮಾಡುವ ಅಧಿಕಾರ ಹೊಂದಿವೆ. ದೇಶಾದ್ಯಂತ 8.7 ಲಕ್ಷಕ್ಕೂ ಹೆಚ್ಚು ಆಸ್ತಿಗಳು, ಒಟ್ಟು 9.4 ಲಕ್ಷ ಎಕರೆ ಜಮೀನು ವಕ್ಫ್ ಮಂಡಳಿಗಳ ವ್ಯಾಪ್ತಿಗೆ ಒಳಪಟ್ಟಿವೆ.

ಇದು ವಕ್ಫ್‌ ಅಧಿಕಾರಿಗಳು, ಆಸ್ತಿ ಮಾಲೀಕರು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೇರಿದಂತೆ ಹಲವರ ನಡುವಿನ ವಿವಾದದ ಮೂಲವಾಗಿದೆ.ಈಗ ಈ ಅನಿಯಂತ್ರಿತ ಅಧಿಕಾರವನ್ನು ಕಿತ್ತುಕೊಂಡು, ಯಾವುದೇ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಸರ್ಕಾರದ ದೃಢೀಕರಣ ಕಡ್ಡಾಯ ಮಾಡುವ ಬಗ್ಗೆ ಸಂಪುಟ ಚರ್ಚಸಿದೆ. ಇದರಿಂದ ಆಸ್ತಿಯನ್ನು ವಕ್ಫ್‌ ಮಂಡಳಿಗೆ ಏಕಪಕ್ಷೀಯವಾಗಿ ಜಪ್ತಿ ಮಾಡಲು ಆಗದು. ಆಗ ಸರ್ಕಾರದ ಅನುಮತಿಯನ್ನು ಮಂಡಳಿ ಕೇಳಲೇಬೇಕು.

ಮೊದಲ ಬಾರಿ ಮಂಡಳಿಗೆ ಮಹಿಳೆ:

ಇದೇ ವೇಳೆ ವಕ್ಫ್‌ ಮಂಡಳಿಯಲ್ಲಿ ಇದೇ ಮೊದಲ ಬಾರಿ ಮಹಿಳಾ ಪ್ರಾತಿನಿಧ್ಯ ನೀಡಿ ಅದರ ಸ್ವರೂಪ ಬದಲಿಸುವ ಅಂಶವೂ ತಿದ್ದುಪಡಿ ಮಸೂದೆಯಲ್ಲಿದೆ ಎಂದು ಮೂಲಗಳು ಹೇಳಿವೆ. ಈವರೆಗೂ ವಕ್ಫ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಲಿಲ್ಲ.

ಕೇಂದ್ರ ವಕ್ಫ್ ಸ್ವಾಯತ್ತೆ ಕಸಿಯುತ್ತಿದೆ ಮೋದಿ ಸರ್ಕಾರ ವಕ್ಫ್‌ ಮಂಡಳಿಯ ಸ್ವಾಯತ್ತೆ ಕಸಿಯಬಯಸಿದೆ. ಮಂಡಳಿಯ ಸ್ಥಾಪನೆ ಮತ್ತು ಸಂಯೋಜನೆ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಆಡಳಿತಾತ್ಮಕ ಅವ್ಯವಸ್ಥೆ ಉಂಟಾಗುತ್ತದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಈ ಕುರಿತ ಮಾಧ್ಯಮದ ವರದಿಗಳು ನಿಜವಾದಲ್ಲಿ, ಸರ್ಕಾರ ಮುಸಲ್ಮಾನರ ಆಸ್ತಿಯನ್ನು ಕಸಿಯಬಯಸಿದೆ.-ಅಸಾದುದ್ದೀನ್ ಓವೈಸಿ, ಎಐಎಂಐಎಂ ಅಧ್ಯಕ್ಷ

PREV

Recommended Stories

ಧರ್ಮಸ್ಥಳಕ್ಕೆ ಕಾಂಗ್ರೆಸ್ ಬೆಂಬಲ: ಯಾತ್ರೆ, ಭೇಟಿ
ಕಪ್‌ ತುಳಿತದ 3 ತಿಂಗಳಬಳಿಕ ವಿರಾಟ್‌ ಬೇಸರ!