ಪ್ರತಿಷ್ಠಿತ ಬ್ರಾಂಡ್‌ ‘ಎಗ್ಗೋಸ್‌’ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ನೈಟ್ರೋಫುರಾನ್‌ ಅಂಶ ಕಂಡುಬಂದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿರುವ ಕಾರಣ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ ಮೊಟ್ಟೆಗಳ ಸ್ಯಾಂಪಲ್‌ ಪರಿಶೀಲನೆಗೆ ನಿರ್ಧರಿಸಿದೆ.

- ಕೋಳಿಗೆ ಕೊಟ್ಟ ಆಹಾರ ಮೂಲಕ ಮೊಟ್ಟೆಯಲ್ಲಿ ವಿಷ?- ಟ್ರಸ್ಟಿಫೈಡ್‌ ಸಂಸ್ಥೆ ವರದಿ ಬೆನ್ನಲ್ಲೇ ತಪಾಸಣೆಗೆ ಕ್ರಮ

--

ಕೋಳಿಗೆ ನೀಡುವ ಕೆಲ ಆಹಾರದಿಂದ ಮೊಟ್ಟೆ ಕೂಡಾ ವಿಷಯಪೂರಿತ ಎಂದು ವರದಿ

ಇಂಥ ಮೊಟ್ಟೆ ಸೇವನೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ, ಕ್ಯಾನ್ಸರ್‌ ಡೇಂಜರ್‌: ತಜ್ಞರು

ವರದಿ ಸಂಚಲನ ಬೆನ್ನಲ್ಲೇ ದೇಶವ್ಯಾಪಿ ಪರಿಶೀಲನೆಗೆ ಎಫ್‌ಎಸ್‌ಎಸ್‌ಎಐ ಆದೇಶ

ಬ್ರಾಂಡೆಡ್‌, ಬ್ರಾಂಡ್‌ ಅಲ್ಲದ ಮೊಟ್ಟೆ ಕೂಡಾ ಪರಿಶೀಲಿಸಿ ವರದಿ ನೀಡಲು ಸೂಚನೆ

=

ತಕ್ಷಣ ಆತಂಕ ಬೇಕಿಲ್ಲಎಗಾಸ್‌ ಸಂಸ್ಥೆಯ ಮೊಟ್ಟೆಯಲ್ಲಿ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ವಿಚಾರವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬರುವವರೆಗೆ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ.ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

==

ನವದೆಹಲಿ: ಪ್ರತಿಷ್ಠಿತ ಬ್ರಾಂಡ್‌ ‘ಎಗ್ಗೋಸ್‌’ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ನೈಟ್ರೋಫುರಾನ್‌ ಅಂಶ ಕಂಡುಬಂದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿರುವ ಕಾರಣ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ ಮೊಟ್ಟೆಗಳ ಸ್ಯಾಂಪಲ್‌ ಪರಿಶೀಲನೆಗೆ ನಿರ್ಧರಿಸಿದೆ.

ಈ ಸಂಬಂಧ, ಬ್ರಾಂಡೆಡ್‌ ಮತ್ತು ಬ್ರಾಂಡೆಡ್‌ ಅಲ್ಲದ ಮೊಟ್ಟೆಗಳನ್ನು ಸಂಗ್ರಹಿಸಿ ದೇಶಾದ್ಯಂತ ಇರುವ 10 ಪ್ರಯೋಗಾಲಯಗಳಿಗೆ ಕಳಿಸಬೇಕು. ಅದರಲ್ಲಿ ನೈಟ್ರೋಫುರಾನ್‌ ಇದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಎಫ್‌ಎಸ್‌ಎಸ್ಎಐ ತನ್ನ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದೆ. ನೈಟ್ರೋಫುರಾನ್‌ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಇತ್ತೀಚೆಗಷ್ಟೇ, ‘ಎಗ್ಗೋಸ್‌’ ಕಂಪನಿಗಳ ಮೊಟ್ಟೆಗಳಲ್ಲಿ ನೈಟ್ರೋಫುರಾನ್‌ ಅಂಶವಿರುವುದು ಪತ್ತೆಯಾಗಿತ್ತು ಎಂದು ಟ್ರಸ್ಟಿಫೈಡ್‌ ಎಂಬ ಸಂಸ್ಥೆಯ ತಪಾಸಣಾ ವರದಿ ಹೇಳಿತ್ತು. ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿಯಾಗಿತ್ತು. ‘ನೈಟ್ರೋಫುರಾನ್‌ ಎಂಬ ಪ್ರತಿಜೀವಕವನ್ನು, ಕೋಳಿಗಳಿಗೆ ಸೋಂಕು ತಗುಲಬಾರದೆಂಬ ಕಾರಣಕ್ಕೆ ನೀಡಲಾಗುತ್ತದೆ. ಇದರ ಅಂಶಗಳು ಆ ಕೋಳಿ ಇಡುವ ಮೊಟ್ಟೆಯಲ್ಲೂ ಇದ್ದರೆ, ಆ ಮೂಲಕ ಅದು ಸೇವಿಸುವವರ ಹೊಟ್ಟೆ ಸೇರುತ್ತದೆ. ನೈಟ್ರೋಫುರಾನ್‌ ಮಾನವರ ಆರೋಗ್ಯಕ್ಕೆ, ಅದರಲ್ಲೂ ಮಕ್ಕಳಿಗೆ ಅತ್ಯಂತ ಅಪಾಯಕಾರಿ’ ಎಂದು ಹೇಳಲಾಗಿತ್ತು.

ಈ ಬಗ್ಗೆ ಮಾತನಾಡಿರುವ ಡಾ। ವಿವೇಕ್‌ ಜೈನ್‌, ‘ನೈಟ್ರೋಫುರಾನ್‌ ರಾಸಾಯನಿಕ ವಿಷಕಾರಿಯಾಗಿದ್ದು, ಕ್ಯಾನ್ಸರ್‌ಕಾರಕವೂ ಹೌದು. ಇದು ವಂಶವಾಹಿಗಳ (ಜೀನ್‌) ಮೇಲೂ ವಿಪರೀತ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಅಂಗಾಂಗ ಮತ್ತು ರೋಗನಿರೋಧಕ ಶಕ್ತಿ ಪರಿಪೂರ್ಣವಾಗಿ ಇರುವುದಿಲ್ಲವಾದ ಕಾರಣ, ನೈಟ್ರೋಫುರಾನ್‌ನ ದೀರ್ಘಾವಧಿ ಸೇವನೆ ಅತ್ಯಂತ ಅಪಾಯಕಾರಿಯಾಗಿದೆ. ಯಕೃತ್‌ ಹಾನಿ, ರೋಗನಿರೋಧಕ ಶಕ್ತಿ ಕುಂಠಿತ ಮತ್ತು ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ’ ಎಂದು ಎಚ್ಚರಿಸಿದ್ದಾರೆ.

==