- ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಎಂಎಲ್‌ಎ, ಎಮ್ಮೆಲ್ಸಿಗಳು ಆಸ್ಟ್ರೇಲಿಯಾಗೆ

- ಅಧ್ಯಯನವೋ, ವೈಯಕ್ತಿಕ ಪ್ರವಾಸವೋ?: ಜಿಜ್ಞಾಸೆ । ಕುತೂಹಲ ಸೃಷ್ಟಿಸಿದ ಯಾನ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ 20ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರ ತಂಡ ಮಂಗಳವಾರ ವಿದೇಶಕ್ಕೆ ಹಾರಲು ಸಜ್ಜಾಗಿದೆ.


ವಿದೇಶ ಪ್ರವಾಸದ ಕುರಿತು ಪರ-ವಿರೋಧದ ಚರ್ಚೆಗಳ ಶುರುವಾಗಿರುವ ನಡುವೆಯೂ ರಾತ್ರಿ 8 ಗಂಟೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಶಾಸಕರು ಸಜ್ಜಾಗಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಗುಂಪಿನಲ್ಲಿ ಗುರುತಿಸಿಕೊಂಡವರೇ ಹೆಚ್ಚಿದ್ದಾರೆ ಎನ್ನಲಾಗಿದೆ. ಶಾಸಕರು ಮಾ.1ರಂದು ಬೆಂಗಳೂರಿಗೆ ವಾಪಸಾಗಲಿದ್ದು, ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ತಂಡದಲ್ಲಿ ಪರಿಷತ್‌ ಸದಸ್ಯರೂ ಇದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಕೃಷಿ ಕುರಿತಾಗಿ ಅಧ್ಯಯನ ಮಾಡುವ ಸಲುವಾಗಿ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಆದರೆ ಶಾಸಕ ಹಂಪನಗೌಡ ಬಾದರ್ಲಿ ವೈಯಕ್ತಿಕ ಖರ್ಚಿನಲ್ಲಿ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಆದರೆ, ಇಲಾಖೆಯ ಅಧ್ಯಯನ ಪ್ರವಾಸ ಎಂಬ ವಿಚಾರ ಏಕೆ ಬಂತೋ ಗೊತ್ತಿಲ್ಲ ಎಂದಿದ್ದಾರೆ.

ಕೆಲವರು ಹಿಂದಕ್ಕೆ:

ವೀಸಾ ಸಮಸ್ಯೆ ಹಾಗೂ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಕಾರಣಕ್ಕೆ ಕೆಲವರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಈ ವಿದೇಶ ಪ್ರವಾಸವು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

---

ಸ್ವಂತ ದುಡ್ಡಿನಲ್ಲಿ

ಪ್ರವಾಸ ತಪ್ಪಿಲ್ಲ

ತಮ್ಮ ಸ್ವಂತ ದುಡ್ಡಿನಲ್ಲಿಯೂ ಶಾಸಕರು ವಿದೇಶ ಪ್ರವಾಸ ಮಾಡಬಾರದಂತಿದೆಯಾ? ನಾನಂತೂ ಈಗ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ. ಆದರೆ, ಹೋದರೆ ತಪ್ಪೇನು? ಅಲ್ಲೇನೂ ಸುಮ್ಮನೇ ಹೋಗಲ್ಲ. ಅಲ್ಲಿನ ಅಭಿವೃದ್ಧಿ ಬಗ್ಗೆ, ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ಹೋಗುತ್ತೇವೆ.

ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ==

ಇದು ವೈಯಕ್ತಿಕ

ಪ್ರವಾಸ, ತಡೆದಿಲ್ಲಶಾಸಕರ ವಿದೇಶ ಪ್ರವಾಸಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಇದು ನಮ್ಮ ವೈಯಕ್ತಿಕ ಪ್ರವಾಸ. ನಮಗೆ ಮುಖ್ಯಮಂತ್ರಿ ಅವರಾಗಲಿ, ಉಪಮುಖ್ಯಮಂತ್ರಿ ಅವರಾಗಲಿ ಪ್ರವಾಸಕ್ಕೆ ಹೋಗಿ ಅಂತಲೂ ಹೇಳಿಲ್ಲ, ಹೋಗಬೇಡಿ ಎಂದೂ ತಡೆದಿಲ್ಲ. ಸಮಾನ ಮನಸ್ಕರು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ ಹೋಗ್ತಿದ್ದೇವೆ.

- ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ