ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್‌ ಕುಮಾರ್‌ ಅವರು ವೈದ್ಯೆಯೊಬ್ಬರ ಹಿಜಾಬ್‌ ಎಳೆದಿರುವ ಘಟನೆ ನಡೆದಿದೆ. ವಿಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ನಿತೀಶ್‌ರ ಮಾನಸಿಕ ಸ್ಥಿರತೆಯನ್ನು ಪ್ರಶ್ನಿಸಿವೆ. ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪಟನಾ: ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್‌ ಕುಮಾರ್‌ ಅವರು ವೈದ್ಯೆಯೊಬ್ಬರ ಹಿಜಾಬ್‌ ಎಳೆದಿರುವ ಘಟನೆ ನಡೆದಿದೆ. ವಿಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ನಿತೀಶ್‌ರ ಮಾನಸಿಕ ಸ್ಥಿರತೆಯನ್ನು ಪ್ರಶ್ನಿಸಿವೆ. ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹೊಸದಾಗಿ ನೇಮಕವಾದ ಆಯುಷ್‌ ವೈದ್ಯರಿಗೆ ಸಿಎಂ ನಿವಾಸದಲ್ಲಿ ನೇಮಕಾತಿ ಪತ್ರ ವಿತರಿಸಲಾಗುತ್ತಿದು. ಈ ವೇಳೆ ಮುಸಲ್ಮಾನ ಮಹಿಳೆಯ ಬಳಿ ಪತ್ರದೊಂದಿಗೆ ಬಂದ ನಿತೀಶ್‌, ‘ಏನಿದು’ ಎಂದು ಉದ್ಗರಿಸುತ್ತಾ, ಆಕೆ ಧರಿಸಿದ್ದ ಹಿಜಾಬ್‌ಅನ್ನು ಎಳೆದಿದ್ದಾರೆ. ಕೂಡಲೇ ಅಧಿಕಾರಿಗಳು ವೈದ್ಯೆಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಅತ್ತ ಅಲ್ಲೇ ಇದ್ದ ಡಿಸಿಎಂ ಸಾಮ್ರಾಟ್‌ ಚೌಧರಿ ನಿತೀಶ್‌ರ ಕೈ ಹಿಡಿದು ಅವರನ್ನು ತಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು.

==

ಅಮೆರಿಕದ ನಟ ರೈನರ್ ದಂಪತಿ ಸಾವು: ಕುಟುಂಬ ಸದಸ್ಯರಿಂದಲೇ ಕೊಲೆ?

ಲಾಸ್‌ ಏಂಜಲಿಸ್‌: ಅಮೆರಿಕದ ಖ್ಯಾತ ನಟ ಹಾಗೂ ನಿರ್ದೇಶದ ರಾಬ್‌ ರೈನರ್‌(78) ಹಾಗೂ ಅವರ ಪತ್ನಿ ಮಿಚೆಲ್(68) ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು, ಈ ಸಂಬಂಧ ಅವರ ಕುಟುಂಬಸ್ಥರೊಬ್ಬರ ವಿಚಾರಣೆ ನಡೆಸಲಾಗುತ್ತಿದೆ.ಭಾನುವಾರ ಮಧ್ಯಾಹ್ನ ವೈದ್ಯಕೀಯ ಸಹಾಯದ ಮನವಿ ಬರುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ರೈನರ್‌ ಅವರ ನಿವಾಸಕ್ಕೆ ದೌಡಾಯಿಸಿದಾಗ ಹತ್ಯೆಯ ವಿಷಯ ಬಯಲಾಗಿದೆ. ಹಂತಕರ ಪತ್ತೆಗೆ ಯತ್ನ ನಡೆದಿದೆ.ರೈನರ್‌ ನಿರ್ದೇಶನದ ‘ದಿಸ್‌ ಇಸ ಸ್ಪೈನಲ್‌ ಟ್ಯಾಪ್‌’, ‘ಅ ಫ್ಯು ಗುಡ್‌ ಮೆನ್‌’, ‘ವೆನ್‌ ಹ್ಯಾರಿ ಮೆಟ್‌ ಸ್ಯಾಲಿ’, ‘ದಿ ಪ್ರಿನ್ಸೆಸ್‌ ಬ್ರೈಡ್‌’ ಖ್ಯಾತ ಚಿತ್ರಗಳು. ಅವರು ‘ಆಲ್‌ ಇನ್‌ ದ ಫ್ಯಾಮಿಲಿ’ ಎಂಬ ಟೀ.ವಿ. ಶೋನಲ್ಲೂ ನಟಿಸಿದ್ದರು.

==

ಭಾರತಕ್ಕೆ ಯುದ್ಧನೌಕೆ, ಯುದ್ಧವಿಮಾನ: ಪುಟಿನ್‌ ಸಹಿ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಭಾರತದ ಜತೆಗಿನ ಪ್ರಮುಖ ಮಿಲಿಟರಿ ಒಪ್ಪಂದದ ಫೆಡರಲ್ ಕಾನೂನಿಗೆ ಸಹಿ ಹಾಕಿದ್ದಾರೆ.ಒಪ್ಪಂದದ ಪ್ರಕಾರ ಯುದ್ಧನೌಕೆಗಳು, ಮಿಲಿಟರಿ ವಿಮಾನ ಹಾಗೂ ಇತರ ಸೇನಾ ಸಲಕರಣೆಗಳನ್ನು ಭಾರತಕ್ಕೆ ಕಳಿಸಲಾಗುತ್ತದೆ. ಇತ್ತೀಚೆಗೆ ಭಾರತಕ್ಕೆ ಬಂದಾಗ ಮೋದಿ ಜತೆ ಪುಟಿನ್‌ ಈ ಒಪ್ಪಂದ ಮಾಡಿಕೊಂಡಿದ್ದರು.

==

ರುಪಾಯಿ ಮೌಲ್ಯ ₹90.74ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠ

ಮುಂಬೈ: ಅಮೆರಿಕದ ಡಾಲರ್‌ ಎದುರು ರುಪಾಯಿ ಮೌಲ್ಯವು ಭಾರಿ ಕುಸಿತ ಕಾಣುತ್ತಿದ್ದು, ಸೋಮವಾರವೂ ಸಹ ಪತನದಾಟ ಮುಂದುವರೆದಿದೆ. ಮೌಲ್ಯ ದಿನದ ಕೊನೆಗೆ ಮೌಲ್ಯ ₹90.74ಕ್ಕೆ ಕುಸಿತ ಕಂಡಿದೆದಿನದ ವಹಿವಾಟು ಆರಂಭವಾದಾಗ ಡಾಲರ್‌ ಎದುರು 90.53ರಲ್ಲಿ ಆರಂಭವಾದ ರುಪಾಯಿ ಮೌಲ್ಯವು ದಿನದ ಮಧ್ಯದಲ್ಲಿ 90.80ಗೆ ಸಾರ್ವಕಾಲಿಕ ಕುಸಿತಕ್ಕೆ ಸಾಕ್ಷಿಯಾಯಿತು. ಬಳಿಕ ಕೊಂಚ ಚೇತರಿಕೆ ಕಂಡು 90.74 ರು.ಗೆ ತಲುಪಿತು. ಸೋಮವಾರ ಒಂದೇ ದಿನ ಸರಿಸುಮಾರು 25 ಪೈಸೆಗಳಷ್ಟು ರುಪಾಯಿ ಮೌಲ್ಯ ಕುಸಿಯಿತು. ಶುಕ್ರವಾರ 17 ಪೈಸೆ ಕುಸಿದು 90.49ಕ್ಕೆ ತಲುಪಿತ್ತು.

ಭಾರತ ಮತ್ತು ಅಮೆರಿಕ ನಡುವಿನ ಅಸ್ಪಷ್ಟ ವ್ಯಾಪಾರ ಒಪ್ಪಂದ ನಿರೀಕ್ಷೆ, ಅತಿಯಾದ ವಿದೇಶಿ ಹಣ ಹೊರಹರಿವು ರುಪಾಯಿ ಮೌಲ್ಯ ಕುಸಿತಕ್ಕೆ ಮುಖ್ಯ ಕಾರಣಗಳಾಗಿವೆ.

==

ದಿಲ್ಲೀಲಿ ಚಿನ್ನದ ಬೆಲೆ ₹1,37,600: ಸಾರ್ವಕಾಲಿಕ ಗರಿಷ್ಠ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, 10 ಗ್ರಾಂಗೆ 1,37,600 ರು. ಆಗುವ ಮೂಲಕ ಸಾರ್ವಕಾಲಿಕ ಗರಿಷ್ಠಮಟ್ಟ ತಲುಪಿದೆ. ಒಂದೇ ದಿನದಲ್ಲಿ 4000 ರು. ಏರಿಕೆಯಿಂದ ಹೀಗಾಗಿದೆ. ಶೇ.99.9ರ ಶುದ್ಧತೆಯ 10 ಗ್ರಾಂ ಹೊನ್ನಿನ ಬೆಲೆ 1,33,600 ರು. ಆಗಿದೆ.ಈ ವಾರ ಅಮೆರಿಕದ ಆರ್ಥಿಕ ವರದಿ ಬಿಡುಗಡೆಯಾಗಲಿರುವ ಕಾರಣ ಹೂಡಿಕೆದಾರರು ಚಿನ್ನ ಖರೀದಿಯನ್ನು ಹೆಚ್ಚು ಮಾಡಿರುವ ಪರಿಣಾಮ ಈ ಬೆಲೆ ಏರಿಕೆ ಎಂದು ವಿಶ್ಲೇಷಿಸಲಾಗಿದೆ. ಈ ಮೊದಲು, ಅ.17ರಂದು ದಾಖಲಾದ 1,34,800 ರು. ಅತ್ಯಧಿಕವಾಗಿತ್ತು. ಅತ್ತ ಬೆಳ್ಳಿ ಬೆಲೆ ಕೆ.ಜಿ.ಗೆ 1,99,500 ರು. ಆಗಿದೆ.ಬೆಂಗಳೂರಲ್ಲಿ 22 ಕ್ಯಾರಟ್‌ ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,27,200 ರು., 24 ಕ್ಯಾರಟ್‌ ಚಿನ್ನದ 10 ಗ್ರಾಂ ಬೆಲೆ 1,38,770 ರು. ಇದ್ದರೆ ಬೆಳ್ಳಿ ಬೆಲೆ 2.02 ಲಕ್ಷ ರು.ಗೆ ನೆಗೆದಿದೆ.