ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಲಗಿದ್ದ ವಾಯುಪಡೆ ಎಂಜಿನಿಯರ್‌ ಗುಂಡಿಕ್ಕಿ ಹತ್ಯೆ

KannadaprabhaNewsNetwork | Updated : Mar 30 2025, 04:42 AM IST

ಸಾರಾಂಶ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮನೆಯಲ್ಲಿ ಮಲಗಿದ್ದ ಭಾರತೀಯ ವಾಯುಪಡೆಯ ಸಿವಿಲ್ ಎಂಜಿನಿಯರ್‌ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಕಿಟಕಿಯಿಂದಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ.

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮನೆಯಲ್ಲಿ ಮಲಗಿದ್ದ ಭಾರತೀಯ ವಾಯುಪಡೆಯ ಸಿವಿಲ್ ಎಂಜಿನಿಯರ್‌ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಕಿಟಕಿಯಿಂದಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ. ವಾಯುಪಡೆಯ ಸಿವಿಲ್ ಎಂಜಿನಿಯರ್‌ ಎಸ್‌.ಎನ್‌.ಮಿಶ್ರಾ(51) ಹತ್ಯೆಗೀಡಾದವರು. 

ಪ್ರಯಾಗ್‌ರಾಜ್‌ನ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಿಶ್ರಾ ಮಲಗಿದ್ದಾಗ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಕಿಟಕಿಯಿಂದ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಅವರ ಎದೆಗೆ ಗುಂಡು ತಗುಲಿದೆ. ತಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಎಸ್‌.ಎನ್‌.ಮಿಶ್ರಾ ಮೃತಪಟ್ಟಿದ್ದಾರೆ. ಎಂಜಿನಯರ್ಸ್‌ ಕಾಲೋನಿಯ ಗಡಿ ದಾಟಿ ವ್ಯಕ್ತಿಯೊಬ್ಬ ಬರುತ್ತಿರುವ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಗುಂಡು ಹಾರಿಸಿದವನ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.

ಇಂದು ‘ಸಿಕಂದರ್’ ರಿಲೀಸ್: ಮೊದಲ ದಿನವೇ ₹50 ಕೋಟಿ ಗಳಿಕೆ ನಿರೀಕ್ಷೆ

ಮುಂಬೈ: ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಚಿತ್ರ, ರಂಜಾನ್‌ ನಿಮಿತ್ತ ಭಾನುವಾರ ಬಿಡುಗಡೆಯಾಗಲಿದ್ದು, ಮೊದಲ ದಿನವೇ 40ರಿಂದ 50 ಕೋಟಿ ರು. ಗಳಿಸುವ ಸಾಧ್ಯತೆಯಿದೆ ಎಂದು ವ್ಯಾಪಾರ ತಜ್ಞರು ಅಂದಾಜಿಸಿದ್ದಾರೆ.ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ. 2 ವರ್ಷಗಳ ಬಳಿಕ ಸಲ್ಲು ಅಭಿನಯದ ಚಿತ್ರ ಹೊರಬರಲಿದ್ದು, ಅವರ ಅಭಿಮಾನಿಗಳಲ್ಲಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದೆ. ಈ ಹಿಂದೆಯೂ ರಂಜಾನ್ ದಿನವೇ ಬಿಡುಗಡೆಯಾದ ಅವರ ‘ವಾಂಟೆಡ್’, ‘ಬಾಡಿಗಾರ್ಡ್’, ‘ಕಿಕ್’, ‘ದಬಾಂಗ್’ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ.

ಮದ್ಯದಿಂದ ₹5,000 ಕೋಟಿ, ಹಾಲಿನಿಂದ ₹210 ಕೋಟಿ ತೆರಿಗೆ!

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಮದ್ಯದ ಮೇಲಿನ ತೆರಿಗೆಯಿಂದ 5,000 ಕೋಟಿ ರು.ಗಳಿಗೂ ಹೆಚ್ಚು ಆದಾಯ ಸಂಗ್ರಹವಾದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಕೇವಲ 210 ಕೋಟಿ ರು. ಸಂಗ್ರಹಿಸಲಾಗಿದೆ ಎಂದು ದೆಹಲಿ ಸರ್ಕಾರ ವಿಧಾನಸಭೆಗೆ ತಿಳಿಸಿದೆ.ಬಿಜೆಪಿ ಶಾಸಕ ಅಭಯ್ ವರ್ಮಾ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರ್ಕಾರ, ‘2024-25ನೇ ಆರ್ಥಿಕ ವರ್ಷದಲ್ಲಿ ಮದ್ಯದ ಮೇಲಿನ ತೆರಿಗೆಯಿಂದ 5,068.92 ಕೋಟಿ ರು. ಸಂಗ್ರಹವಾಗಿದೆ. ಆದರೆ ಹಾಲು, ಹಾಲಿನ ಉತ್ಪನ್ನಗಳಿಂದ ಕೇವಲ 209.9 ಕೋಟಿ ರು. ಸಂಗ್ರಹವಾಗಿದೆ’ ಎಂದು ಮಾಹಿತಿ ನೀಡಿದೆ.

ಮೋದಿ ಅಡಿ ಬ್ಯಾಂಕುಗಳು ಕಲೆಕ್ಷನ್‌ ಏಜೆಂಟ್‌: ಖರ್ಗೆ ಕಿಡಿ

ನವದೆಹಲಿ: ಎಟಿಎಂ ವಿತ್‌ ಡ್ರಾ ಶುಲ್ಕ ಹೆಚ್ಚಳಕ್ಕೆ ಆರ್‌ಬಿಐ ಮುಂದಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದು, ‘ಮೋದಿ ಸರ್ಕಾರದಲ್ಲಿ ಬ್ಯಾಂಕುಗಳು ಜನರನ್ನು ಲೂಟಿ ಮಾಡಲು ಕಲೆಕ್ಷನ್ ಏಜೆಂಟ್‌ಗಳಾಗಿ ಬದಲಾಗಿವೆ’ ಎಂದು ಹರಿಹಾಯ್ದಿದ್ದಾರೆ.

‘ಎಕ್ಸ್‌’ನಲ್ಲಿ ಬರೆದಿರುವ ಖರ್ಗೆ, ‘ದುರದೃಷ್ಟವಶಾತ್‌ ನಮ್ಮ ಬ್ಯಾಂಕುಗಳನ್ನು ಮೋದಿ ಸರ್ಕಾರ ಕಲೆಕ್ಷನ್ ಏಜೆಂಟುಗಳನ್ನಾಗಿ ಮಾಡಿದೆ. 2018 ರಿಂದ 2024ರ ನಡುವೆ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಉಳಿತಾಯ ಖಾತೆಗಳು ಮತ್ತು ಜನ್‌ಧನ್ ಖಾತೆಗಳಿಂದ ಮೋದಿ ಸರ್ಕಾರ 43,500 ಕೋಟಿ ರು. ಸಂಪಾದಿಸಿದೆ. ಇತರ ಬ್ಯಾಂಕುಗಳು ಜನರನ್ನು ಲೂಟಿ ಮಾಡಲು 100-200 ರು. ನಿಷ್ಕ್ರಿಯತೆಯ ಶುಲ್ಕ, ಬ್ಯಾಂಕ್ ಸ್ಟೇಟ್‌ಮೆಂಟ್‌ ವಿತರಣೆಗೆ 50- 100 ರು., ಎಸ್‌ಎಂಎಸ್‌ ಎಚ್ಚರಿಕೆಗಳಿಗೆ ತ್ರೈಮಾಸಿಕಕ್ಕೆ 20-25 ರು. ಬ್ಯಾಂಕುಗಳ ಸಾಲ ಪ್ರಕ್ರಿಯೆಗೆ ಶೇ.1-3ರಷ್ಟು ಶುಲ್ಕ ವಿಧಿಸುತ್ತಿವೆ’ ಎಂದಿದ್ದಾರೆ.‘ಈ ಹಿಂದೆ ಸರ್ಕಾರವು ಶುಲ್ಕಗಳಿಂದ ಸಂಗ್ರಹಿಸಲಾದ ಮೊತ್ತದ ಅಂಕಿ ಅಂಶವನ್ನು ಸಂಸತ್ತಿನಲ್ಲಿ ಒದಗಿಸುತ್ತಿತ್ತು. ಆದರೆ ಈಗ ಆರ್‌ಬಿಐ ಅಂತಹ ಡೇಟಾವನ್ನು ನಿರ್ವಹಿಸುವುದಿಲ್ಲ ಎಂದು ಹೇಳುವ ಮೂಲಕ ಈ ಅಭ್ಯಾಸವನ್ನು ಸಹ ನಿಲ್ಲಿಸಲಾಗಿದೆ. ನೋವಿನ ಬೆಲೆ ಏರಿಕೆ + ಅನಿಯಂತ್ರಿತ ಲೂಟಿ = ಸುಲಿಗೆಗೆ ಬಿಜೆಪಿಯ ಮಂತ್ರ’ ಎಂದು ಪೋಸ್ಟ್‌ ಮಾಡಿದ್ದಾರೆ.

ಪರೀಕ್ಷೆಗೆ ಹೆದರಿ ತ.ನಾಡಿನಲ್ಲಿ ನೀಟ್‌ ಆಕಾಂಕ್ಷಿ  ಆತ್ಮಹತ್ಯೆ

ಚೆನ್ನೈ: ರಾಷ್ಟ್ರೀಯ ಅರ್ಹತಾ ಪ್ರವೇಶಾತಿ ಪರೀಕ್ಷೆಗೆ ( ನೀಟ್‌) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಿಲಂಬಕ್ಕಂನಲ್ಲಿ ನಡೆದಿದೆ. 

ದರ್ಶಿನಿ ಮೃತ ವಿದ್ಯಾರ್ಥಿನಿ. ಈಕೆ 2021ರಿಂದಲೂ ನೀಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಆದರೆ ಈವರೆಗೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಪ್ರಸ್ತಕ ಸಾಲಿನ ಪರೀಕ್ಷೆ ಮೇ 4 ರಂದು ನಿಗದಿಯಾಗಿತ್ತು. ಈ ಸಲವೂ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ಮಾ.1ರಂದು ತಮಿಳುನಾಡಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ವಿಲ್ಲುಪುರಂ ಜಿಲ್ಲೆಯ ತಿಂಡಿವನಂನಲ್ಲಿ ಇಂದು ಎನ್ನುವ ವಿದ್ಯಾರ್ಥಿನಿಯೊಬ್ಬಳು ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದನು.

Share this article