ಏರಿಂಡಿಯಾ ಬುಕಿಂಗ್‌ನಲ್ಲಿ ಶೇ.20 ಕುಸಿತ, ಟಿಕೆಟ್ ದರವೂ ಶೇ.15 ಕಡಿತ

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 05:08 AM IST
ಏರ್ ಇಂಡಿಯಾ | Kannada Prabha

ಸಾರಾಂಶ

‘ಗುಜರಾತ್ ವಿಮಾನ ದುರಂತದ ಬಳಿಕ ಏರ್ ಇಂಡಿಯಾ ವಿಮಾನಗಳ ಬುಕಿಂಗ್‌ಗಳು ಸುಮಾರು ಶೇ.20ರಷ್ಟು ಕುಸಿದಿವೆ. ದೇಶೀಯ ಮಾರ್ಗಗಳ ಟಿಕೆಟ್ ದರದಲ್ಲಿ ಶೇ.15ರಷ್ಟು ಕಡಿತ ಮಾಡಲಾಗಿದೆ’ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘದ (ಐಎಟಿಒ) ಅಧ್ಯಕ್ಷ ರವಿ ಗೋಸೈನ್ ತಿಳಿಸಿದ್ದಾರೆ.

 ನವದೆಹಲಿ: ‘ಗುಜರಾತ್ ವಿಮಾನ ದುರಂತದ ಬಳಿಕ ಏರ್ ಇಂಡಿಯಾ ವಿಮಾನಗಳ ಬುಕಿಂಗ್‌ಗಳು ಸುಮಾರು ಶೇ.20ರಷ್ಟು ಕುಸಿದಿವೆ. ದೇಶೀಯ ಮಾರ್ಗಗಳ ಟಿಕೆಟ್ ದರದಲ್ಲಿ ಶೇ.15ರಷ್ಟು ಕಡಿತ ಮಾಡಲಾಗಿದೆ’ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘದ (ಐಎಟಿಒ) ಅಧ್ಯಕ್ಷ ರವಿ ಗೋಸೈನ್ ತಿಳಿಸಿದ್ದಾರೆ.

‘ದುರದೃಷ್ಟಕರ ವಿಮಾನ ದುರಂತದ ಬಳಿಕ ಟಿಕೆಟ್ ಬುಕಿಂಗ್‌ಗಳಲ್ಲಿ ಇಳಿಕೆ ಕಂಡುಬಂದಿದೆ. ವಿದೇಶಿ ಮಾರ್ಗಗಳಲ್ಲಿ ಶೇ.18-22 ಹಾಗೂ ದೇಶೀಯ ಮಾರ್ಗಗಳಲ್ಲಿ ಶೇ.10-12ರಷ್ಟು ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಕರ್ಷಣೆಗೆ ದೇಶೀಯ ಮಾರ್ಗಗಳ ಟಿಕೆಟ್ ದರದಲ್ಲಿ ಶೇ.8-12ರಷ್ಟು ಕಡಿತ ಮಾಡಲಾಗಿದೆ. ಕಡಿಮೆ ದರ ಹೊಂದಿರುವ ಇಂಡಿಗೋ, ಆಕಾಸ ಮೊದಲಾದ ವಿಮಾನಯಾನ ಸಂಸ್ಥೆಗಳಿಗೆ ಪೈಪೋಟಿ ನೀಡಲು ಹೀಗೆ ಮಾಡಲಾಗಿದೆ. ಆದರೆ ಇದು ಅಲ್ಪಾವಧಿಯ ಸಮಸ್ಯೆಯಾಗಿದ್ದು, ಜನರಿಗೆ ಪುನಃ ನಮ್ಮ ಮೇಲೆ ಆತ್ಮವಿಶ್ವಾಸ ಮೂಡಲಿದೆ’ ಎಂದು ತಿಳಿಸಿದ್ದಾರೆ.

ನಾಳೆಯ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಮತ್ತೆ ಮುಂದೂಡಿಕೆ

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಆಕ್ಸಿಯೋಂ-4 ಮಿಷನ್‌ನ ಉಡಾವಣೆಯನ್ನು ನಾಸಾ ಮತ್ತೆ ಮುಂದೂಡಿದೆ.‘ಜೂ.22ರಂದು ಯೋಜಿಸಿದ್ದ ಉಡಾವಣೆಯಿಂದ ಹಿಂದೆ ಸರಿಯಲು ನಾಸಾ ನಿರ್ಧರಿಸಿದೆ. 

ಕಕ್ಷೆಯ ಪ್ರಯೋಗಾಲಯದಲ್ಲಿ ನಡೆದ ದುರಸ್ತಿ ಕಾರ್ಯಗಳ ಪರಿಶೀಲನೆ ನಡೆಸಲು ನಾಸಾಕ್ಕೆ ಇನ್ನಷ್ಟು ಸಮಯ ಬೇಕಿದೆ. ಮುಂಬರುವ ದಿನಗಳಲ್ಲಿ ಹೊಸ ದಿನಾಂಕವನ್ನು ನಿಗದಿಪಡಿಸಲಾಗುವುದು’ ಎಂದು ಆಕ್ಸಿಯೋಂ ಸ್ಪೇಸ್ ತಿಳಿಸಿದೆ.ತಾಂತ್ರಿಕ ಕಾರಣಗಳಿಂದ ಆಕ್ಸಿಯೋಂ-4 ಮಿಷನ್‌ನ ಉಡಾವಣೆಯನ್ನು ಹಲವು ಬಾರಿ ಮುಂದೂಡಿದ ಬಳಿಕ ಜೂ.22ಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಆ ದಿನಾಂಕವೂ ಮುಂದೂಡಿಕೆಯಾಗಿದೆ.

3 ದಿನ ಬಳಿಕ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌ 1046 ಅಂಕ ಜಿಗಿತ

ಮುಂಬೈ: ಮಧ್ಯ ಪ್ರಾಚ್ಯ ದೇಶಗಳಲ್ಲಿ ಸಂಘರ್ಷದ ಪರಿಣಾಮ ಸತತ 3 ದಿನ ಕುಸಿತ ಕಂಡಿದ್ದ ಷೇರು ಪೇಟೆ ಶುಕ್ರವಾರ ಚೇತರಿಕೆ ಹಾದಿಯಲ್ಲಿ ಸಾಗಿದೆ. ಬಾಂಬೆ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ 1046 ಅಂಕ ಏರಿಕೆ ಕಂಡಿದ್ದರೆ, ನಿಫ್ಟಿ 319 ಅಂಕ ಜಿಗಿತ ಕಂಡಿದೆ. 

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ ಶೇ. 1.29ರಷ್ಟು ಅಂದರೆ 1,046.3 ಅಂಕ ಏರಿಕೆಯಾಗಿ 82,408ರಲ್ಲಿ ಮುಕ್ತಾಯಗೊಂಡಿತು. ಇನ್ನು ನಿಫ್ಟಿ 319.15 ಅಂಕ ಜಿಗಿತ ಕಂಡು 25,112.4ರಲ್ಲಿ ಕೊನೆಗೊಂಡಿತು.

ಇರಾನ್- ಇಸ್ರೇಲ್ ಸಂಘರ್ಷಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಬಹುದು ಎನ್ನುವ ವಿದ್ಯಮಾನ,, ಸಾಗರೋತ್ತರ ಮಾರುಕಟ್ಟೆಯಲ್ಲಿ ಬೆಂಬಲ, ವಿದೇಶಿ ಬಂಡವಾಳದ ಒಳಹರಿವು- ಇವು ಷೇರುಪೇಟೆಯಲ್ಲಿನ ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕ್ಲಾಸ್‌ರೂಂ ನಿರ್ಮಾಣ ಹಗರಣ: ಎಸಿಬಿಯಿಂದ ಸಿಸೋಡಿಯಾ ವಿಚಾರಣೆ

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ 2000 ಕೋಟಿ ರು. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಂದಿನ ಶಿಕ್ಷಣ ಸಚಿವ ಮನೀಶ್‌ ಸೋಡಿಯಾ ಅವರ ವಿಚಾರಣೆ ನಡೆಸಿದೆ. 

‘ಸಿಸೋಡಿಯಾ ಅವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾದರು. ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವರ ಪ್ರತಿಕ್ರಿಯೆಗಳನ್ನು ದಾಖಲಿಸಲಾಯಿತು. 

ವಿಚಾರಣೆ ಮುಗಿಸಿ ಮಧ್ಯಾಹ್ನ 2.30ಕ್ಕೆ ಎಸಿಬಿ ಕಚೇರಿಯಿಂದ ಹೊರಟರು’ ಎಂದು ಎಸಿಬಿಯ ಜಂಟಿ ಪೊಲೀಸ್ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ.ಈ ಹಿಂದಿನ ಎಎಪಿ ಸರ್ಕಾರದ ಆಡಳಿತದಲ್ಲಿ ಸಿಸೋಡಿಯಾ ಹಣಕಾಸು ಹಾಗೂ ಶಿಕ್ಷಣ ಖಾತೆ ಹೊಂದಿದ್ದರೆ, ಸತ್ಯೇಂದರ್ ಜೈನ್ ಲೋಕೋಪಯೋಗಿ ಖಾತೆ ಹೊಂದಿದ್ದರು. ಈ ಅವಧಿಯಲ್ಲಿ ದೆಹಲಿಯ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕರು ಎಸಿಬಿಗೆ ದೂರಿದ್ದರು. ಜೂ.6ರಂದು ಜೈನ್‌ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ