ಇಂದು ಆಂಧ್ರ ಕಡಲ ತೀರದಲ್ಲಿ 11ನೇ ಯೋಗ ದಿನ : ಪ್ರಧಾನಿ ಮೋದಿ ಭಾಗಿ

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 05:15 AM IST
ಯೋಗ  | Kannada Prabha

ಸಾರಾಂಶ

ವಿಶ್ವವು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಿದ್ದು, ಭಾರತದ ಮುಖ್ಯ ಸಮಾರಂಭ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌.ಕೆ. ಕಡಲತೀರಲ್ಲಿ ಆಯೋಜನೆಯಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. 

 ಅಮರಾವತಿ :  ವಿಶ್ವವು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಿದ್ದು, ಭಾರತದ ಮುಖ್ಯ ಸಮಾರಂಭ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌.ಕೆ. ಕಡಲತೀರಲ್ಲಿ ಆಯೋಜನೆಯಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಬೃಹತ್‌ ಕಾರ್ಯಕ್ರಮದಲ್ಲಿ ವಿಶ್ವ ದಾಖಲೆಯ 3ರಿಂದ 5 ಲಕ್ಷ ಜನ ಭಾಗಿಯಾಗುವ ನಿರೀಕ್ಷೆಯಿದೆ.

ವಿಶಾಖಪಟ್ಟಣಂನಿಂದ ಭೋಗಾಪುರಂ ವರೆಗೆ, ಒಂದಲ್ಲ, ಎರಡಲ್ಲ 26 ಕಿ.ಮೀ.ನಷ್ಟಿರುವ ಕಡಲತೀರದುದ್ದಕ್ಕೂ ಶನಿವಾರ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಯೋಗಾಭ್ಯಾಸ ನಡೆಯಲಿದೆ.

‘ಕಾರ್ಯಕ್ರಮದಲ್ಲಿ 25,000 ಬುಡಕಟ್ಟು ವಿದ್ಯಾರ್ಥಿಗಳು 108 ಸೂರ್ಯನಮಸ್ಕಾರ ಮಾಡಲಿದ್ದಾರೆ. ಅತಿ ಹೆಚ್ಚು ಜನ ಸೇರಿದ ಮತ್ತು ಏಕಕಾಲಕ್ಕೆ ಅನೇಕ ಮಂದಿ ಸೂರ್ಯನಮಸ್ಕಾರ ಮಾಡಿದ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸುವ ಗುರಿಯಿದೆ. ಈಗಾಗಲೇ ನಿರೀಕ್ಷೆಗೂ ಮೀರಿ 2.39 ಕೋಟಿ ಮಂದಿ ನೋಂದಾಯಿಸಿಕೊಂಡಿದ್ದಾರೆ’ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಭದ್ರತೆಗಾಗಿ ಕಡಲತೀರದುದ್ದಕ್ಕೂ 1200 ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 10000 ಪೊಲೀಸರನ್ನು ನಿಯೋಜಿಸಲಾಗುವುದು. ಹೈಟೆಕ್ ಪೊಲೀಸ್ ನಿಯಂತ್ರಣ ಕೊಠಡಿಯನ್ನೂ ಸ್ಥಾಪಿಸಲಾಗಿದೆ.ಅಂತೆಯೇ, ಇದೇ ದಿನ ರಾಜ್ಯಾದ್ಯಂತ 1 ಲಕ್ಷ ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಗ ಚಟುವಟಿಕೆಗಳನ್ನು ಏರ್ಪಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇನ್ನು ದೇಶದ ವಿವಿಧೆಡೆ ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು/ಮಂತ್ರಿಗಳು ಯೋಗ ದಿನಾಚರಣೆ ನೇತೃತ್ವ ವಹಿಸಲಿದ್ದಾರೆ.

1 ತಿಂಗಳು ಯೋಗಾಂಧ್ರ ಅಭಿಯಾನ:

ಯೋಗದ ಬಗ್ಗೆ ಜಾಗೃತಿ ಮೂಡಿಸಲು 1 ತಿಂಗಳು ಯೋಗಾಂಧ್ರ ಅಭಿಯಾನವನ್ನು ಆಯೋಜಿಸಲಾಗಿತ್ತು. ಇದರಡಿಯಲ್ಲಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ 15,000 ಸ್ಪರ್ಧೆಗಳನ್ನು ನಡೆಸಲಾಗಿದೆ. ಇದರಲ್ಲಿ 5451 ತರಬೇತಿದಾರರು ಕೈಜೋಡಿಸಿದ್ದು, 1 ಕೋಟಿಗೂ ಅಧಿಕ ಮಂದಿ ಭಾಗವಹಿಸಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಭಾರತದಿಂದ 191 ದೇಶಗಳಲ್ಲಿ ಯೋಗ ದಿನಾಚರಣೆ ಆಯೋಜನೆ

ನವದೆಹಲಿ: ಯೋಗವನ್ನು ಜಗತ್ತಿಗೆ ಪರಿಚಿಯಿಸಿದ ಭಾರತವು, 11ನೇ ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ 191 ದೇಶಗಳ 1300 ನಗರಗಳಲ್ಲಿ 2000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.ವಿದೇಶಾಂಗ ಸಚಿವಾಲಯದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ(ಐಸಿಸಿಆರ್‌) ಈ ಬಗ್ಗೆ ಮಾಹಿತಿ ನೀಡಿದೆ.

 ಪಾಕಿಸ್ತಾನದಲ್ಲಿರುವ ಭಾರತದ ದೂತಾವಾಸವೂ ಇಸ್ಲಾಮಾಬಾದ್‌ನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಿದೆ ಎಂಬುದು ವಿಶೇಷ.ಅಂತೆಯೇ, ‘ಯೋಗಬಂಧ’ ಎಂಬ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, ಇದರಲ್ಲಿ ಬ್ರೆಜಿಲ್, ಅರ್ಜೆಂಟೀನಾ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಮಲೇಷ್ಯಾ, ಶ್ರೀಲಂಕಾ, ಇಂಡೋನೇಷ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಸೇರಿದಂತೆ 15 ದೇಶಗಳ ಯೋಗ ಗುರುಗಳು ಮತ್ತು ಪಟುಗಳು ಭಾರತದಾದ್ಯಂತ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. ಭಾರತ ಮತ್ತು ವಿಶ್ವವನ್ನು ಒಗ್ಗೂಡಿಸುವುದು ಇದರ ಉದ್ದೇಶ ಎಂದು ಐಸಿಸಿಆರ್‌ ಹೇಳಿದೆ.

PREV
Read more Articles on

Recommended Stories

ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ ₹ 50,000 ರು ! ಇರದಿದ್ದರೆ ದಂಡ
4.5 ಕಿ.ಮೀ ಉದ್ದದ ರುದ್ರಾಸ್ತ್ರ ರೈಲಿನ ಸಂಚಾರ : ಹೊಸ ದಾಖಲೆ