ಅಹಮದಾಬಾದ್ : ಜೂ.12ರಂದು ಅಹಮದಾಬಾದ್‌ನಲ್ಲಿ ಪತನಗೊಂಡ ಏರಿಂಡಿಯಾ ವಿಮಾನದ ದುರಂತದ ಕುರಿತ ತನಿಖಾ ವರದಿ ಬಹಿರಂಗಗೊಂಡಿದೆ. ಇದರಲ್ಲಿ ತನಿಖೆ ವೇಳೆ ಕಂಡುಬಂದ ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಮೇಲ್ನೋಟಕ್ಕೆ ವರದಿ ಬೋಯಿಂಗ್ ವಿಮಾನ ಕಂಪನಿ ಮತ್ತು ಎಂಜಿನ್ ತಯಾರಿಸಿದ್ದ ಜಿಇಗೆ ಕ್ಲೀನ್‌ಚಿಟ್ ನೀಡಿದ್ದರೆ, ಪೈಲಟ್‌ಗಳ ದೋಷ ಕಾರಣ ಇರಬಹುದೆಂಬ ನಿಟ್ಟಿನಲ್ಲಿ ಬೊಟ್ಟು ಮಾಡಿದೆ.
ವರದಿ ಹೇಳಿದ್ದೇನು?
- ಅಪಘಾತವಾದ ವಿಮಾನದಲ್ಲಿ 12 ಸಿಬ್ಬಂದಿ ಮತ್ತು 230 ಪ್ರಯಾಣಿಕರಿದ್ದರು. ಈ ಪೈಕಿ 15 ಜನ ಬಿಸಿನೆಸ್ ಕ್ಲಾಸಲ್ಲಿ, ಇಬ್ಬರು ಮಕ್ಕಳು ಸೇರಿ 215 ಜನರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
ವಿಮಾನದಲ್ಲಿ 42200 ಕಿಲೋಗ್ರಾಮ್‌ನಷ್ಟು ಇಂಧನ ಇತ್ತು. ಹಾರುವ ವೇಳೆ ವಿಮಾನದ ತೂಕದ 2.13 ಲಕ್ಷ ಕೆಜಿಯಷ್ಟಿತ್ತು. ಇದು ನಿಗದಿತ ಮಿತಿಯೊಳಗೇ ಇತ್ತು. ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಇರಲಿಲ್ಲ
.- ವಿಮಾನ ಭಾರತೀಯ ಕಾಲಮಾನ ಮಧ್ಯಾಹ್ನ 1.08ಕ್ಕೆ ಹಾರಾಟ ಆರಂಭಿಸಿತ್ತು. ವಿಮಾನ ಸಂಚಾರ ಆರಂಭಿಸಿದ 3 ಸೆಕೆಂಡ್‌ಗಳಲ್ಲೇ, ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತ ಮಾಡುವ ಎರಡೂ ಕಟಾಫ್ ಸ್ವಿಚ್‌ಗಳು ಒಂದು ಸೆಕೆಂಡ್ ಅಂತರದಲ್ಲಿ ಆನ್ ಆಗಿತ್ತು. ಆಗ ವಿಮಾನ ತನ್ನ ಗರಿಷ್ಠ ಏರ್‌ಸ್ಪೀಡ್ 180 ನಾಟ್ಸ್‌ಗೆ ತಲುಪಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳ ಕಟಾಫ್ ಸ್ವಿಚ್‌ಗಳನ್ನು ರನ್‌ಗೆ ಬದಲಾಯಿಸಲಾಗಿತ್ತು.
- ಕಟಾಫ್ ಸ್ವಿಚ್ ಕುರಿತು ಪೈಲಟ್‌ಗಳಲ್ಲಿನ ಗೊಂದಲ ಬಗ್ಗೆ ಕಾಕ್‌ಪೀಟ್ ವಾಯ್ಸ್ ರೆಕಾರ್ಡ್‌ರ್‌ನಲ್ಲಿ ಮಾಹಿತಿ ಸಂಗ್ರಹವಾಗಿದೆ. ಅದರಲ್ಲಿ ಒಬ್ಬ ಪೈಲಟ್, ಇನ್ನೊಬ್ಬನಿಗೆ ಕಟಾಫ್ ಏಕೆ ಮಾಡಿದೆ ಎಂದು ಕೇಳುತ್ತಾನೆ. ಅದಕ್ಕೆ ಮತ್ತೊಬ್ಬ ನಾನು ಮಾಡಿಲ್ಲ ಎನ್ನುತ್ತಾನೆ.
- ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತವಾದ ಬಳಿಕ ಸ್ವಯಂಚಾಲಿತವಾಗಿ ಎಂಜಿನ್ ಪುನಾರಂಭದ ಯತ್ನ ನಡೆದಿದೆ. ಆದರೆ ಈ ಪೈಕಿ ಮೊದಲ ಎಂಜಿನ್ ಕೆಲಕಾಲ ಪ್ರತಿಕ್ರಿಯಿಸಿದ್ದರೆ, ಎರಡನೇ ಎಂಜಿನ್‌ಗೆ ಇಂಧನ ಪೂರೈಸುವ ಹಲವು ಯತ್ನಗಳು ವಿಫಲಗೊಂಡಿವೆ. ಇದು ವಿಮಾನಕ್ಕೆ ಹಾರಾಟ ಮುಂದುವರೆಸಲು ಅಗತ್ಯವಾದ ಶಕ್ತಿ ನೀಡಲು ವಿಫಲವಾಗಿದೆ.
- ವಿಮಾನದಲ್ಲಿ ಪವರ್ ವೈಫಲ್ಯ ಕಂಡುಬಂದ ಕೂಡಲೇ ತುರ್ತು ಪರಿಸ್ಥಿತಿ ನಿರ್ವಹಣೆಗೆ ಎಂದೇ ಇರುವ ರ್‍ಯಾಟ್ (ದ ರ್‍ಯಾಮ್ ಏರ್ ಟರ್ಬೈನ್) ಆನ್ ಮಾಡಲಾಗಿದೆ. ಇದನ್ನು ಕೂಡಾ ವಿಮಾನ ಸಂಚಾರದ 4-5 ಸೆಕೆಂಡ್‌ಗಳಲ್ಲೇ ಆನ್ ಮಾಡಲಾಗಿದೆ. ಇದು ವಿಮಾನದ ಅತ್ಯಂತ ಪ್ರಮಖ ವ್ಯವಸ್ಥೆಗಳಿಗೆ ಅಗತ್ಯವಾದ ಪವರ್ ಪೂರೈಕೆಯಲ್ಲಿ ವೈಫಲ್ಯ ಆಗಿರುವುದನ್ನು ತೋರಿಸಿದೆ.
- ವಿಮಾನ ಹಾರಾಟ ಆರಂಭಿಸಿದ ಒಂದು ನಿಮಿಷದಲ್ಲೇ ಒಬ್ಬ ಪೈಲಟ್, ಏರ್ ಟ್ರಾಫಿಕ್ ರ್ ಕಂಟ್ರೋಲ್‌ಗೆ ತುರ್ತು ಸಂದೇಶ ರವಾನಿಸಲು ಇರುವ ಮೇಡೇ ಮೇಡೇ ಮೇಡೇ ಸಂದೇಶ ರವಾನಿಸಿದ್ದಾರೆ. ಆದರೆ ಇದಕ್ಕೆ ಏರ್‌ಟ್ರಾಫಿಕ್ ಕಂಟ್ರೋಲರ್‌ಗಳು ಪ್ರತಿಕ್ರಿಯಿಸಲು ಮುಂದಾದ ವೇಳೆ ವಿಮಾನದ ಜೊತೆ ಸಂಪರ್ಕ ಸಾಧ್ಯವಾಗಿಲ್ಲ.- ಈ ಸಂದೇಶ ಬಂದ ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನವು ಬಿಜೆ ಮೆಡಿಕಲ್ ಕಾಲೇಜಿನ ಕಟ್ಟಡದ ಮೇಲೆ ಅಪ್ಪಳಿಸಿದೆ.
- ಥ್ರಸ್ಟ್ ಲಿವರ್‌ಗಳು ವಿಮಾನ ಹಾರಾಟ ಆರಂಭದ ವೇಳೆ ಟೇಕಾಫ್ ಸ್ಥಿತಿಯಲ್ಲಿ ಇದ್ದವಾದರೂ, ಅಪಘಾತದ ಬಳಿಕ ತಟಸ್ಥ ಸ್ಥಿತಿಯಲ್ಲಿ ಕಂಡುಬಂದಿದೆ. ಫ್ಲ್ಯಾಪ್ಸ್ ಮತ್ತು ಲ್ಯಾಡಿಂಗ್ ಗಿಯರ್‌ಗಳು ಕೂಡಾ ಟೇಕಾಫ್ ಸ್ಥಿತಿಯಲ್ಲೇ ಕಂಡುಬಂದಿದೆ.
- ಸಣ್ಣ ಪುಟ್ಟ ವಿಷಯಗಳನ್ನು ಹೊರುತಪಡಿಸಿದರೆ ವಿಮಾನವು ಸಂಚಾರಕ್ಕೆ ಎಲ್ಲಾ ಅರ್ಹತೆ ಹೊಂದಿದ್ದ ಸ್ಥಿತಿಯಲ್ಲಿತ್ತು. ವಿಮಾನದ ಎಂಜಿನ್‌ಗೆ ಇಂಧನ ಪೂರೈಸುವ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಈ ಹಿಂದೆ ಕಟಾಫ್ ಸ್ವಿಚ್‌ನ ಕುರಿತು ಯಾವುದೇ ದೋಷ ಕಂಡುಬಂದಿರಲಿಲ್ಲ.- ಇಂಧನ ಸ್ವಿಚ್‌ಗಳ ಲಾಕಿಂಗ್ ಸಿಸ್ಟಮ್ ಕುರಿತು ಬೋಯಿಂಗ್ ಅಗತ್ಯವಿದ್ದರೆ ಮಾಡಿಕೊಳ್ಳಿ ಎಂದು ನೀಡಿದ್ದ ಸಲಹೆಗಳನ್ನು ಏರಿಂಡಿಯಾ ಪಾಲಿಸಿರಲಿಲ್ಲ. ವಿಮಾನದ ಥ್ರೋಟಲ್ ಕಂಟ್ರೋಲ್ ಮಾಡ್ಯೂಲ್‌ಗಳನ್ನು 2019, 2023ರಲ್ಲಿ ಬದಲಾವಣೆ ಮಾಡಲಾಗಿತ್ತು.
- ಅಪಘಾತದ ಬಳಿಕ ವಿಮಾನದ ಎರಡೂ ಎಂಜಿನ್ ವಶಪಡಿಸಿಕೊಳ್ಳಲಾಗಿದೆ. ವಿಮಾನದಲ್ಲಿ ಇಂಧನವನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಯಾವುದೇ ದೋಷ ಪತ್ತೆಯಾಗಿಲ್ಲ.
- ಈ ಹಂತದಲ್ಲಿ ಬಿ787-8 ಮತ್ತು ಜಿಇ ಜಿಎನ್‌ಎಕ್ಸ್-1ಇ ಎಂಜಿನ್ ನಿರ್ವಹಣಾಕಾರ ಬಗ್ಗೆ ಯಾವುದೇ ಕ್ರಮಕ್ಕೆ ಶಿಫಾರಸು ಮಾಡುವುದಿಲ್ಲ.
ಫ್ಯೂಯಲ್ ಎಂಜಿನ್ ಸ್ವಿಚ್ ಅಂದರೇನು?
ಇದು ವಿಮಾನದ ಎರಡು ಎಂಜಿನ್‌ಗಳಿಗೆ ಇಂಧನ ಪೂರೈಕೆ ಆರಂಭಿಸುವ ಅಥವಾ ತಡೆಯಲು ಇರುವ ವ್ಯವಸ್ಥೆ. ಈ ಸ್ವಿಚ್ ಅನ್ನು ಪೈಲಟ್‌ಗಳು ವಿಮಾನವು ನೆಲದ ಮೇಲೆ ಇರುವಾಗ ಇಂಧನ ಪೂರೈಕೆ ಆರಂಭಿಸಲು ಅಥವಾ ಸ್ಥಗಿತಗೊಳಿಸಲು ಮತ್ತು ವಿಮಾನ ಆಗಸದಲ್ಲಿ ಸಂಚರಿಸುವ ವೇಳೆ ಒಂದು ಎಂಜಿನ್ ವಿಫಲವಾದರೆ ಅಲ್ಲಿಗೆ ಇಂಧನ ಪೂರೈಕೆ ಸ್ಥಗಿತಗೊಳಿಸಲು ಬಳಸುತ್ತಾರೆ.
ಸ್ವಿಚ್‌ಗೆ ಎರಡು ಸ್ಥಾನ: ಕಟಾಫ್, ರನ್
ಕಾರ್‌ಗಳಲ್ಲಿ ಇರುವ ಗಿಯರ್ ರೀತಿಯಲ್ಲೇ ವಿಮಾನಗಳಲ್ಲಿ ಸಣ್ಣದಾದ ಎರಡು ಸ್ವಿಚ್ ಅಳವಡಿಸಲಾಗಿರುತ್ತದೆ. ಇದರ ಮೂಲಕ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಯಂತ್ರಣ ಮಾಡಲಾಗುತ್ತದೆ. ಇದು ಪೈಲಟ್‌ಗಳು ಕುಳಿತ ಜಾಗದ ಮುಂಭಾಗದಲ್ಲಿ ಬರುತ್ತದೆ. ಇದಕ್ಕೆ ಎರಡು ಪೊಷಿಷನ್ (ಜಾಗ) ಇರುತ್ತದೆ. ಒಂದು ಕಟಾಫ್ ಮತ್ತು ರನ್. ಕಟಾಫ್ ಎಂಬುದು ಎಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಕ್ಕೆ ಬಳಸುವುದು. ರನ್ ಎಂಬುದು ಎಂಜಿನ್‌ಗೆ ಇಂಧನ ಪೂರೈಸಲು ಇರುವುದು. ರನ್ ಎಂದರೆ ಸ್ವಿಚ್ ಅನ್ನು ಮೇಲಿನ ಪೊಸಿಷನ್‌ನಲ್ಲಿ ಇಡಬೇಕು. ಒಂದು ವೇಳೆ ಇಂಧನ ಪೂರೈಕ ಸ್ಥಗಿತ ಮಾಡಬೇಕಾದರೆ ಸ್ವಿಚ್ ಅನ್ನು ಕೆಳಕ್ಕೆ ಎಳೆಯಬೇಕು.
ಏರಿಂಡಿಯಾ ವಿಮಾನದಲ್ಲಿ ಏನಾಗಿತ್ತು
ಎಎಐಬಿ ಪ್ರಾಥಮಿಕ ವರದಿ ಅನ್ವಯ ಅಪಘಾತಕ್ಕೆ ತುತ್ತಾದ ವಿಮಾನದ ಸಂಚಾರದ ವೇಳೆ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಕಟಾಫ್ ಪೊಸಿಷನ್‌ನಲ್ಲಿ ಇದ್ದವು. ಈ ವೇಳೆ ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ ಏಕೆ ಆಫ್ ಮಾಡಿದೆ ಎಂದು ಕೇಳಿದ್ದರು. ಅದಕ್ಕೆ ಸಹ ಪೈಲಟ್ ನಾನು ಆಫ್ ಮಾಡಿಲ್ಲ ಎಂದಿದ್ದರು. ಇದಾದ ಮರುಕ್ಷಣವೇ ಎರಡೂ ಎಂಜಿನ್‌ಗೆ ಇಂಧನ ಪೂರೈಸುವ ರನ್ ಸ್ವಿಚ್ ಆನ್ ಮಾಡಲಾಗಿತ್ತು.
ತಜ್ಞರು ಹೇಳೋದೇನು?
ಅಮೆರಿಕದ ವೈಮಾನಿಕ ತಜ್ಞ ಜಾನ್ ನಾನ್ಸ್ ಪ್ರಕಾರ, ಯಾವುದೇ ಪೈಲಟ್ ಕೂಡಾ ವಿಮಾನ ಸಂಚಾರದ ವೇಳೆ ಕಟ್ ಆಫ್ ಸ್ವಿಚ್‌ಗಳನ್ನು ಆಫ್ ಮಾಡುವುದಿಲ್ಲ. ಅದರಲ್ಲೂ ಆಗಿನ್ನು ವಿಮಾನ ಸಂಚಾರ ಆರಂಭಿಸಿದ ಮೇಲಕ್ಕೆ ಏರುವ ಹೊತ್ತಿನಲ್ಲೇ ಸ್ವಿಚ್ ಆಫ್ ಮಾಡುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದು.
ಏನಾಗಿರಬಹುದು?
ಪೈಲಟ್‌ಗಳು ಆಕಸ್ಮಿಕವಾಗಿ ಸ್ವಿಚ್ ಆಫ್ ಬಟನ್ ಒತ್ತಿರಬಹುದು ಇಲ್ಲವೇ ತಾಂತ್ರಿಕ ದೋಷದಿಂದ ಹಾಗೆ ಆಗಿರಬಹುದು ಎಂಬುದು ಕೆಲವೊಂದಿಷ್ಟು ತಜ್ಞರ ವಾದ. ಈ ಕುರಿತು ತನಿಖೆಯ ಅಂತಿಮ ವರದಿ ಬಂದ ಬಳಿಕವಷ್ಠೇ ಮಾಹಿತಿ ಲಭ್ಯವಾಗಬಹುದು.
ಪಾಶ್ಚಿಮಾತ್ಯ ಮಾಧ್ಯಮಗಳಿಂದ
ದುರಂತಕ್ಕೆ ಪೈಲಟ್‌ಗಳ ದೂಷಣೆ
ನವದೆಹಲಿ: ಎಎಐಬಿ ತನಿಖಾ ವರದಿಯಲ್ಲಿ ಏರ್ ಇಂಡಿಯಾ ದುರಂತಕ್ಕೆ ನಿಖರ ಕಾರಣವನ್ನು ಉಲ್ಲೇಖಿಸಿಲ್ಲವಾದರೂ, ಪಾಶ್ಚಿಮಾತ್ಯ ಮಾಧ್ಯಮಗಳು ಅದರ ಕೆಲ ಆಯ್ದ ಅಂಶಗಳನ್ನಷ್ಟೇ ಉಲ್ಲೇಖಿಸಿ, ‘ಅಪಘಾತಕ್ಕೆ ಪೈಲಟ್‌ಗಳೇ ಕಾರಣ’ ಎಂಬ ಅರ್ಥದಲ್ಲಿ ವರದಿ ಮಾಡುತ್ತಿವೆ.
ಬಿಬಿಸಿ, ರಾಯಿಟರ್ಸ್, ಗಾರ್ಡಿಯನ್, ಡೈಲಿ ಮೇಲ್ ಸೇರಿದಂತೆ ಹಲವು ಮಾಧ್ಯಮಗಳು ಇಂಧನ ಸ್ವಿಚ್ ಆಫ್ ಸ್ಥಿತಿಯಲ್ಲಿ ಇದ್ದುದನ್ನಷ್ಟೇ ಮುಖ್ಯವಾಗಿಟ್ಟುಕೊಂಡು ಸುದ್ದಿ ಪ್ರಕಟಿಸಿವೆ. ಹೀಗೆ ಮಾಡುವ ಮೂಲಕ, ಬೋಯಿಂಗ್‌ನ ವಿಮಾನಗಳಲ್ಲಿ ಪದೇಪದೇ ದೋಷ ಕಾಣಿಸಿಕೊಳ್ಳುತ್ತಿರುವ ಕಾರಣ ಅದಕ್ಕಂಟಿದ ಕಳಂಕದ ಕಡೆಯಿಂದ ಗಮನವನ್ನು ಬೇರೆಡೆ ತಿರುಗಿಸಲು ಪಾಶ್ಚಿಮಾತ್ಯ ದೇಶಗಳು ಯತ್ನಿಸುತ್ತಿವೆ ಎಂದ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.
ಪೈಲಟ್‌ಗೆ ಖಿನ್ನತೆ ಸಮಸ್ಯೆ ಬಗ್ಗೆ ಊಹಾಪೋಹ
ಅವಗಢಕ್ಕೂ ಮುನ್ನ ರಜೆಯಲ್ಲಿದ್ದ ಓರ್ವ ಪೈಲಟ್
ನವದೆಹಲಿ: ಏರ್ ಇಂಡಿಯಾ ಅಪಘಾತವನ್ನು ಪೈಲಟ್‌ಗಳು ಉದ್ದೇಶಪೂರ್ವಕವಾಗಿ ಮಾಡಿರುವ ಸಾಧ್ಯತೆಯಿದೆ ಎಂದಿರುವ ವಿಮಾನಯಾನ ತಜ್ಞ ಕ್ಯಾ। ಮೋಹನ್ ರಂಗನಾಥನ್, ‘ವಿಮಾನದಲ್ಲಿದ್ದ ಒಬ್ಬ ಪೈಲಟ್ ಆರೋಗ್ಯ ಸರಿಯಿರಲಿಲ್ಲ. ಅವಗಢಕ್ಕೂ ಕೆಲ ದಿನಗಳ ಮುನ್ನ ಅವರು ಅನಾರೋಗ್ಯದ ರಜೆಯ ಮೇಲಿದ್ದರು’ ಎಂದು ಹೇಳಿದ್ದಾರೆ.‘ವಿಮಾನದ ಕ್ಯಾಪ್ಟನ್ ಆರೋಗ್ಯ ಹದಗೆಟ್ಟು, ಅವರು ಕೆಲ ಕಾಲ ರಜೆ ಪಡೆದಿದ್ದ ವಿಷಯವನ್ನು ಏರ್ ಇಂಡಿಯಾದ ಹಲವು ಪೈಲಟ್‌ಗಳು ಹೇಳುವುದನ್ನು ಕೇಳಿದ್ದೇನೆ.
ಹೀಗಿರುವಾಗ, ಈ ವಿಷಯ ಉನ್ನತ ಅಧಿಕಾರಿಗಳಿಗೆ ಹೇಗೆ ತಿಳಿದಿರಲಿಲ್ಲ ಎಂಬುದೇ ಅಚ್ಚರಿ’ ಎಂದಿರುವ ರಂಗನಾಥನ್, ಅಪಘಾತಕ್ಕೂ ಕೆಲ ತಿಂಗಳುಗಳಿಂದ ವಿಮಾನದಲ್ಲಿದ್ದ ಸಿಬ್ಬಂದಿಯ ಮಾನಸಿಕ ಸ್ಥಿತಿ ಮತ್ತು ನಡವಳಿಕೆ ಹೇಗಿತ್ತು ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಎಎಐಬಿ ವರದಿಯಲ್ಲಿ, ಪೈಲಟ್‌ಗಳಿಬ್ಬರು ದೈಹಿಕವಾಗಿ ಸದೃಢರಿದ್ದರು ಮತ್ತು ವಿಮಾನ ಚಲನೆಗೂ ಮುನ್ನ ಮದ್ಯಸೇವನೆಯ ಪರೀಕ್ಷೆಗೂ ಒಳಪಟ್ಟಿದ್ದರು ಎನ್ನಲಾಗಿದೆ.
ತನಿಖೆ ಊಹೆ ಆಧಾರದಲ್ಲಿ ಬೇಡ, ಪಾರದರ್ಶಕವಾಗಿ ಇರಲಿ: ಪೈಲಟ್ ವೇದಿಕೆ
ನವದೆಹಲಿ: ಶುಕ್ರವಾರ ಬಿಡುಗಡೆಯಾದ ಅಹಮದಾಬಾದ್ ಏರ್ ಇಂಡಿಯಾ ದುರಂತದ ಕಾರಣದ ಕುರಿತ ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ)ದ ತನಿಖಾ ವರದಿಯ ವಿರುದ್ಧ ದೇಶದ ಪೈಲಟ್‌ಗಳ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ‘ಊಹೆಯ ಆಧಾರದಲ್ಲಿ ತನಿಖೆಯನ್ನು ನಡೆಸಲಾಗಿದೆ’ ಎಂದು ಆರೋಪಿಸಿದೆ.
‘ಅಪಘಾತಕ್ಕೆ ಪೈಟಲ್‌ಗಳ ತಪ್ಪೇ ಕಾರಣ ಎಂಬುದನ್ನೇ ತಲೆಯಲ್ಲಿಟ್ಟುಕೊಂಡು, ಅದೇ ದೃಷ್ಟಿಯಿಂದ ತನಿಖೆ ನಡೆಸಿರುವಂತಿದೆ. ತನಿಖೆಯು ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅಧಿಕಾರಿಗಳಿಂದ ಅಧಿಕೃತ ಸಹಿ ಬೀಳದ ವರದಿಯನ್ನು ಮಾಧ್ಯಮಗಳಿಗೆ ನೀಡಿದ್ದು ಕಳವಳಕ್ಕೆ ಕಾರಣವಾಗಿದೆ. ನಮ್ಮನ್ನು ತನಿಖೆಯ ವೀಕ್ಷಕರನ್ನಾಗಿಯಾದರೂ ನೇಮಿಸಿಕೊಳ್ಳಿ’ ಎಂದು ಸಂಘ ತನ್ನ ಬೇಡಿಕೆಯನ್ನು ಮುಂದಿಟ್ಟಿದೆ.
ಪೈಲಟ್‌ಗಳಿಂದಲೇ ಉದ್ದೇಶಪೂರ್ವಕ ಅಪಘಾತ: ಕ್ಯಾ।ಮೋಹನ್ ವಿಶ್ಲೇಷಣೆ
ನವದೆಹಲಿ: ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಅದರ ಎಂಜಿನ್ ಸ್ವಿಚ್‌ಗಳು ಆಪ್ ಆಗಿದ್ದು ಕಾರಣ ಎಂದು ವರದಿಯಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಯುಯಾನ ತಜ್ಞ ಕ್ಯಾ। ಮೋಹನ್ ರಂಗನಾಥನ್, ‘ಪೈಲಟ್‌ಗಳು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿಸಿರಬಹುದು’ ಎಂದು ವಿಶ್ಲೇಷಿಸಿದ್ದಾರೆ.ಎನ್‌ಡಿಟೀವಿ ಜತೆ ಮಾತುಕತೆ ವೇಳೆ, ‘ವಿಮಾನ ಅಪಘಾತ ಆಗಲಿದೆ ಎಂದು ತಿಳಿದೂ ಪೈಲಟ್‌ಗಳು ಫ್ಯೂಯಲ್ ಸ್ವಿಚ್ ಆಫ್ ಮಾಡಿದ್ದರೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ್, ‘ಪೈಲಟ್‌ಗಳು ಉದ್ದೇಶಪೂರ್ವಕವಾಗಿ ತೆಗೆದುಕೊಂಡ ಕ್ರಮಗಳಿಂದ ಅಪಘಾತ ಆಗಿರಬಹುದು. ಇದು ಆತ್ಮಹತ್ಯೆಯೂ ಆಗಿರಲೂಬಹುದು. ಕಾರಣ, ಸ್ವಯಂಚಾಲಿತವಾಗಿ ಅಥವಾ ವಿದ್ಯುತ್ ವೈಫಲ್ಯದಿಂದ ಸ್ವಿಚ್‌ಗಳನ್ನು ಆಫ್ ಆಗಲು ಸಾಧ್ಯವಿಲ್ಲ. ಅದನ್ನು ಕೈಯ್ಯಾರೆ ಹೊರಗೆಳದು ಮೇಲೆ ಅಥವಾ ಕೆಳಗೆ ಮಾಡಿದರಷ್ಟೇ ಆನ್/ಆಫ್ ಮಾಡಲು ಸಾಧ್ಯ. ಹಾಗಾಗಿ ಅದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿತ್ತು’ ಎಂದಿದ್ದಾರೆ.
ಮಂಗಳೂರಿನ ಕ್ಲೈವ್ ಕುಂದರ್, ಸುಮೀತ್ ನಡುವೆ ಕಾಕ್‌ಪಿಟ್ಟಲ್ಲಿ ನಡೆದ ಅಂತಿಮ ಸಂಭಾಷಣೆ ಏನು
ನವದೆಹಲಿ: ಒಂದು ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿ ಭೀಕರ ಅಪಘಾತಕ್ಕೆ ತುತ್ತಾದ ಏರ್ ಇಂಡಿಯಾ ವಿಮಾನದಲ್ಲಿ ಸಹ-ಪೈಲಟ್ ಆಗಿದ್ದ ಮಂಗಳೂರಿನ ಕ್ಲೈವ್ ಕುಂದರ್ ಮತ್ತು ಕಮಾಂಡರ್ ಸುಮೀತ್ ಸಬರ್ವಾಲ್ ನಡುವೆ ಕೊನೆ ಕ್ಷಣದಲ್ಲಿ ನಡೆದ ಸಂಭಾಷಣೆಯು ಪ್ರಾಥಮಿಕ ತನಿಖಾ ವರದಿಯಲ್ಲಿ ಬಯಲಾಗಿದೆ.
ವಿಮಾನ ಟೇಕಾಫ್ ಆದ ನಿಮಿಷದಲ್ಲೇ ಕಾಕ್‌ಪಿಟ್‌ನಲ್ಲಿ ರೆಕಾರ್ಡ್ ಆದ ಧ್ವನಿಯಲ್ಲಿ ಒಬ್ಬ ಪೈಟಲ್ ಇನ್ನೊಬ್ಬರನ್ನುದ್ದೇಶಿಸಿ, ‘ಏಕೆ ಆಫ್ ಮಾಡಿದಿರಿ’ ಎಂದು ಕೇಳಿದ್ದು, ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು, ‘ನಾನೇನೂ ಮಾಡಿಲ್ಲ’ ಎಂದಿದ್ದಾರೆ. ಆದರೆ ಪ್ರಶ್ನೆ ಕೇಳಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ನಡೆದ ದಿನ ಕುಂದರ್ ವಿಮಾನ ಚಲಾಯಿಸುತ್ತಿದ್ದರೆ, ಸುಮೀತ್ ಕಮಾಂಡರ್ ಆಗಿದ್ದರು.