ನವದೆಹಲಿ: ಯುರೋಪಿನ ಪ್ರತಿಷ್ಠಿತ ವಿಮಾನ ಮತ್ತು ಹೆಲಿಕಾಪ್ಟರ್ ತಯಾರಿಕಾ ಕಂಪನಿಯಾದ ಏರ್‌ಬಸ್‌ನ ಎಚ್125 ಹೆಲಿಕಾಪ್ಟರ್‌ಗಳ ‘ಬಾಡಿ’ ಇನ್ನು ಮುಂದೆ ಬೆಂಗಳೂರಿನಲ್ಲೇ ನಿರ್ಮಾಣವಾಗಲಿದೆ. ಮಹೀಂದ್ರಾ ಏರೋಸ್ಟ್ರಕ್ಚರ್ ಕಂಪನಿ ಈ ಕಾಪ್ಟರ್‌ಗಳ ಬಾಡಿ ಸಿದ್ಧಪಡಿಸಲಿದೆ. ಈ ಮೂಲಕ ‘ಮೇಕ್ ಇನ್ ಇಂಡಿಯಾ’ಗೆ ಮಹತ್ವದ ಉತ್ತೇಜನ ಸಿಕ್ಕಂತಾಗಿದೆ.
ಐದು ತಿಂಗಳ ಹಿಂದಷ್ಟೇ ಏರ್‌ಬಸ್ ಕಂಪನಿಯು ಮಹೀಂದ್ರಾ ಏರೋಸ್ಟಕ್ಚರ್ ಪ್ರೈ ಲಿ.(ಎಂಎಎಸ್‌ಪಿಎಲ್) ಸಂಸ್ಥೆಗೆ ಎಚ್130 ಹೆಲಿಕಾಪ್ಟರ್‌ಗಳ ಬಾಡಿ ನಿರ್ಮಾಣದ ಕಾಂಟ್ರ್ಯಾಕ್ಟ್ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೆಲಿಕಾಪ್ಟರ್ ನಿರ್ಮಾಣದ ಗುತ್ತಿಗೆ ಸಿಕ್ಕಿದೆ. ಎಂಎಎಸ್‌ಪಿಎಲ್‌ನ ಬೆಂಗಳೂರು ಘಟಕದಲ್ಲಿ ಈ ಬಾಡಿಗಳ ಉತ್ಪಾದನಾ ಕಾರ್ಯ ನಡೆಯಲಿದ್ದು, 2027ರಲ್ಲಿ ಪೂರೈಕೆ ಆರಂಭವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಎಚ್125 ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಏಕ ಎಂಜಿನ್‌ನ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದ್ದು, ಪ್ರಯಾಣಿಕರ ಸಾಗಣೆ, ಪ್ರವಾಸೋದ್ಯಮ, ರಕ್ಷಣಾ ಕಾರ್ಯ ಸೇರಿ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತದೆ. ಏರ್‌ಬಸ್ ಸಂಸ್ಥೆಯು ವಿವಿಧ ಶಸ್ತ್ರಾಸ್ತ್ರಗಳ ಮೂಲಕ ಭಾರತದ ನಾಗರಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಉಪಸ್ಥಿತಿ ಹೊಂದಿದೆ. ಮಹೀಂದ್ರಾ ಏರೋಸ್ಟ್ರಕ್ಚರ್ ಬಾಡಿಗಳ ನಿರ್ಮಾಣ ಕಾರ್ಯ ಮಾಡಿದರೆ, ಎಚ್125 ಕಾಪ್ಟರ್ ಮತ್ತು ಮಿಲಿಟರಿ ಉದ್ದೇಶದ ಸಿ295 ವಿಮಾನದ ಅಂತಿಮ ಜೋಡಣೆ ಕಾರ್ಯಕ್ಕಾಗಿ ಟಾಟಾ ಅಡ್ವಾನ್ಸ್‌ಡ್ ಸಿಸ್ಟಂ ಜತೆಗೆ ಏರ್‌ಬಸ್ ಒಪ್ಪಂದ ಮಾಡಿಕೊಂಡಿದೆ.