ಪಾಕಿಸ್ತಾನ- ಅಫಘಾನಿಸ್ತಾನ ಮಧ್ಯೆಉಗ್ರ ಯುದ್ಧ: ಯುದ್ಧಕ್ಕೆ 200 ಸಾವು

KannadaprabhaNewsNetwork |  
Published : Feb 28, 2026, 01:45 AM ISTUpdated : Feb 28, 2026, 05:54 AM IST
war

ಸಾರಾಂಶ

ಗಡಿ ಸಮಸ್ಯೆ ಹಾಗೂ ಗಡಿಯಲ್ಲಿನ ತಾಲಿಬಾನ್‌ ಭಯೋತ್ಪಾದನೆ ಸಮಸ್ಯೆ ಮುಂದಿಟ್ಟುಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇದೀಗ ಮತ್ತೊಮ್ಮೆ ನೇರಾನೇರ ಸಂಘರ್ಷಕ್ಕಿಳಿದಿದ್ದು, ಶುಕ್ರವಾರ ಭಾರೀ ದಾಳಿ-ಪ್ರತಿ ದಾಳಿ ನಡೆಸಿವೆ. ಇದರಿಂದಾಗಿ ಒಟ್ಟು ಎರಡೂ ಕಡೆ ಸೇರಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಕಾಬೂಲ್‌/ಇಸ್ಲಾಮಾಬಾದ್: ಗಡಿ ಸಮಸ್ಯೆ ಹಾಗೂ ಗಡಿಯಲ್ಲಿನ ತಾಲಿಬಾನ್‌ ಭಯೋತ್ಪಾದನೆ ಸಮಸ್ಯೆ ಮುಂದಿಟ್ಟುಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇದೀಗ ಮತ್ತೊಮ್ಮೆ ನೇರಾನೇರ ಸಂಘರ್ಷಕ್ಕಿಳಿದಿದ್ದು, ಶುಕ್ರವಾರ ಭಾರೀ ದಾಳಿ-ಪ್ರತಿ ದಾಳಿ ನಡೆಸಿವೆ. ಇದರಿಂದಾಗಿ ಒಟ್ಟು ಎರಡೂ ಕಡೆ ಸೇರಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಕಳೆದ ಭಾನುವಾರವಷ್ಟೇ ಪಾಕಿಸ್ತಾನ ನಡೆಸಿದ ವಾಯು ದಾಳಿಯಿಂದಾಗಿ ಎರಡೂ ದೇಶಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇದಕ್ಕೆ ಪ್ರತಿಯಾಗಿ ಗಡಿಯುದ್ದಕ್ಕೂ ಆಪ್ಘನ್‌ ತಾಲಿಬಾನ್‌ ಯೋಧರು ಗುರುವಾರ ರಾತ್ರಿ ತೀವ್ರ ದಾಳಿ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಪಾಕ್‌ ಕೂಡ ಆಫ್ಘನ್‌ನ ಕಂದಹಾರ್‌, ಕಾಬೂಲ್‌ ಮತ್ತಿತರ ಕಡೆ ಮಿಲಿಟರಿ ನೆಲೆಗಳ ಮೇಲೆ ತೀವ್ರ ವಾಯುದಾಳಿ ನಡೆಸಿದೆ.

ಈ ದಾಳಿ-ಪ್ರತಿದಾಳಿಯಲ್ಲಿ ಭಾರೀ ಸಾವು-ನೋವು ಸಂಭವಿಸಿದ್ದು, ಆಫ್ಘನ್‌ ಮೇಲಿನ ವಾಯು ದಾಳಿಯಲ್ಲಿ 133 ಉಗ್ರರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರ ಜತೆಗೆ ಆಫ್ಘನ್‌ನ 27 ಗಡಿ ಪೋಸ್ಟ್‌ಗಳನ್ನು ನಾಶಮಾಡಲಾಗಿದ್ದು, 9 ಪೋಸ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಇದೇ ವೇಳೆ ಗಡಿಯುದ್ದಕ್ಕೂ ನಡೆಸಿದ ದಾಳಿಯಲ್ಲಿ ಪಾಕ್‌ನ 55ಕ್ಕೂ ಹೆಚ್ಚು ಮಂದಿ ಯೋಧರು ಮೃತಪಟ್ಟಿದ್ದು, ತನ್ನ 11 ಯೋಧರು ಮೃತಪಟ್ಟಿದ್ದಾರೆ. ಪಾಕ್‌ನ 19 ಗಡಿ ಪೋಸ್ಟ್‌ಗಳನ್ನು ವಶಕ್ಕೆಪಡೆಯಲಾಗಿದೆ ಎಂದು ಆಫ್ಘನ್‌ ಸೇನೆ ಘೋಷಿಸಿದೆ.

ಮೊದಲ ಬಾರಿ ಆಫ್ಘನ್‌ ಪಡೆ ಮೇಲೆ ದಾಳಿ:

ಗುರುವಾರ ರಾತ್ರಿ ಸುಮಾರು 4 ಗಂಟೆ ಕಾಲ ಪಾಕಿಸ್ತಾನದ ಕೆಲವು ಗಡಿ ಪ್ರಾಂತ್ಯಗಳ ಸಮೀಪದ ಪಾಕ್‌ ಸೇನಾ ನೆಲೆಗಳ ಮೇಲೆ ತಾಲಿಬಾನ್‌ ದಾಳಿ ನಡೆಸಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಪಾಕ್ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್‌ ಆಸಿಫ್‌, ‘ನಮ್ಮ ಸಹನೆಯ ಕಟ್ಟೆ ಒಡೆದಿದೆ, ಇನ್ನೇನಿದ್ದರೂ ಮುಕ್ತ ಯುದ್ಧ’ ಎಂದು ಶುಕ್ರವಾರ ಬೆಳಗ್ಗೆ ಘೋಷಿಸಿದ್ದರು.

ಇದರ ಬೆನ್ನಲ್ಲೇ ಪಾಕಿಸ್ತಾನ ಕಂದಹಾರ್‌, ಕಾಬೂಲ್‌ ಮತ್ತು ಪಕ್ತಿಯಾ ನಗರಗಳ ಸೇನಾ ನೆಲೆಗಳ ಮೇಲೆ ವಾಯುದಾಳಿ ನಡೆದಿದೆ. ಪಾಕಿಸ್ತಾನವು ಆಫ್ಘನ್‌ ಮಿಲಿಟರಿ ನೆಲೆಗಳ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದೆ. ದಾಳಿಯಲ್ಲಿ ಆಫ್ಘನ್‌ನ 10 ಸೇನಾ, ಬಟಾಲಿಯನ್‌ ಹಾಗೂ ಸೆಕ್ಟರ್‌ ಹೆಡ್‌ಕ್ವಾರ್ಟರ್‌ಗಳು, 2 ಮದ್ದುಗುಂಡುಗಳ ಡಿಪೋಗಳು, ಒಂದು ಲಾಜಿಸ್ಟಿಕ್‌ ನೆಲೆ, 80ಕ್ಕೂ ಹೆಚ್ಚು ಟ್ಯಾಂಕ್‌ಗಳು, ಆರ್ಟಿಲರಿ ಗನ್‌ಗಳು, ಸೇನಾ ವಾಹನಗಳನ್ನು ನಾಶಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಏಕೆ ಈ ಸಂಘರ್ಷ?

- ಪಾಕ್‌- ಆಫ್ಘನ್‌ ನಡುವೆ 2611 ಕಿ.ಮೀ. ಉದ್ದದ ಗಡಿ ಇದೆ. ಅದನ್ನು ಡ್ಯುರಾಂಡ್‌ ಲೈನ್‌ ಎನ್ನಲಾಗುತ್ತದೆ

- ಈ ಗಡಿಗೆ ಅಫಘಾನಿಸ್ತಾನದ ಮಾನ್ಯತೆ ಇಲ್ಲ. ಇದು ಎರಡೂ ದೇಶಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ

- ಆಫ್ಘನ್‌ ಉಗ್ರರು ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಆಫ್ಘನ್‌ ಕಾರಣ ಎಂದು ಪಾಕ್‌ ಆಕ್ರೋಶ

- ಆಫ್ಘನ್ ಉಗ್ರರ ನೆಲೆ ಗುರಿಯಾಗಿಸಿ ಪಾಕಿಸ್ತಾನದಿಂದ ವಾಯುದಾಳಿ. ಆಫ್ಘನ್‌ನಿಂದಲೂ ಪ್ರತಿದಾಳಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ
ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌