- ಮೊಘಲ್ ದೊರೆಗಳಿಂದ ನಿರ್ದಯ ಆಡಳಿತ
- 8ನೇ ತರಗತಿ ನೂತನ ಪಠ್ಯಪುಸ್ತಕ ಬಿಡುಗಡೆ-ಶಿವಾಜಿ ‘ಚತುರ ತಂತ್ರಗಾರ’ ಎಂದು ವರ್ಣನೆ
ನವದೆಹಲಿ: ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿರುವ 8ನೇ ತರಗತಿ ಹೊಸ ಪಠ್ಯಪುಸ್ತಕದಲ್ಲಿ (ಕೇಂದ್ರೀಯ ಪಠ್ಯ) ದೆಹಲಿ ಸುಲ್ತಾನರು, ಮೊಘಲರು, ಮರಾಠರು, ವಿಜಯನಗರ ಸಾಮ್ರಾಜ್ಯ ಹಾಗೂ ವಸಾಹತುಶಾಹಿ ಆಡಳಿತದ ಕುರಿತು ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.
ಮೊಗಲ್ ದೊರೆ ಅಕ್ಬರನ ಆಡಳಿತ ಕ್ರೂರತೆ ಹಾಗೂ ಸಹಿಷ್ಣುತೆಯ ಮಿಶ್ರಣವಾಗಿತ್ತು. ಬಾಬರ್ ನಿರ್ದಯ ಆಡಳಿತಗಾರನಾಗಿದ್ದ. ಔರಂಗಜೇಬ್ ಮಿಲಿಟರಿ ಆಡಳಿತಗಾರನಾಗಿದ್ದು, ಮುಸ್ಲಿಮೇತರರ ಮೇಲೆ ಮರುತೆರಿಗೆ ಜಾರಿಗೆ ತಂದಿದ್ದ ಎಂದು ತಿಳಿಸಲಾಗಿದೆ. ‘ಇತಿಹಾಸದ ಕೆಲವು ಕರಾಳ ಅವಧಿಗಳ ಟಿಪ್ಪಣಿ’ ಎಂಬ ಅಧ್ಯಾಯದಲ್ಲಿ, ಕೆಲವು ಕ್ರೂರ ಆಡಳಿತಗಾರರು ನಡೆಸಿದ ಹತ್ಯಾಕಾಂಡ, ಅಧಿಕಾರ ದುರ್ಬಳಕೆಯನ್ನು ವಿವರಿಸಲಾಗಿದೆ. 13ರಿಂದ 17ನೇ ಶತಮಾನದವರೆಗಿನ ಭಾರತೀಯ ಇತಿಹಾಸವನ್ನು ಒಳಗೊಂಡ ‘ಭಾರತದ ರಾಜಕೀಯ ನಕ್ಷೆಯ ಪುನಾರಚನೆ’ ಎಂಬ ಅಧ್ಯಾಯದಲ್ಲಿ ದೆಹಲಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಮೊಘಲರು ಮತ್ತು ಸಿಖ್ಖರ ಉದಯ ಹಾಗೂ ಪತನದ ಕುರಿತು ತಿಳಿಸಿಕೊಡಲಾಗಿದೆ. ‘ಅಕ್ಬರನ ಆಡಳಿತ ಕ್ರೂರತೆ ಹಾಗೂ ಸಹಿಷ್ಣುತೆಯ ಮಿಶ್ರಣವಾಗಿತ್ತು. ಆತನ ಆಡಳಿತದ ಉನ್ನತ ಹುದ್ದೆಗಳಲ್ಲಿ ಮುಸ್ಲಿಮೇತರರನ್ನು ಅಲ್ಪಸಂಖ್ಯಾತರನ್ನಾಗಿ ಇರಿಸಲಾಗಿತ್ತು. ಚಿತ್ತೋರ್‌ಗಢ ಮುತ್ತಿಗೆಯ ಬಳಿಕ ಅಕ್ಬರ್ ಸುಮಾರು 30,000 ನಾಗರಿಕರ ಹತ್ಯಾಕಾಂಡಕ್ಕೆ ಆದೇಶಿಸಿದ. ಬಾಬರ್ ಅಸಂಖ್ಯ ನಾಗರಿಕರನ್ನು ಹತ್ಯೆಗೈದ ಕ್ರೂರ ಮತ್ತು ನಿರ್ದಯಿ ಆಡಳಿತಗಾರನಾಗಿದ್ದ. ಔರಂಗಜೇಬ ದೇವಾಲಯಗಳು ಮತ್ತು ಗುರುದ್ವಾರಗಳನ್ನು ನಾಶಪಡಿಸಿದ್ದ’ ಎಂದು ಪಠ್ಯದಲ್ಲಿ ವಿವರಿಸಲಾಗಿದೆ.ಶಿವಾಜಿ ಗುಣಗಾನ:ಶಿವಾಜಿ ಮಹಾರಾಜರು ‘ಚತುರ ತಂತ್ರಗಾರ’ರಾಗಿದ್ದರು. ಪರಧರ್ಮ ಸಹಿಷ್ಣುವಾಗಿದ್ದು, ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದಿದ್ದರು ಎಂದು ವರ್ಣಿಸಲಾಗಿದೆ. ಅಕ್ಬರನ ವಿರುದ್ಧ ಹೋರಾಡಿದ ರಾಣಿ ದುರ್ಗಾವತಿ, ಮೇವಾರದ ರಾಜ ಮಹಾರಾಣಾ ಪ್ರತಾಪ್, ಔರಂಗಜೇಬನಿಗೆ ಪ್ರತಿರೋಧವನ್ನೊಡ್ಡಿದ ಅಹೋಮರ ಕುರಿತಾಗಿಯೂ ಮಾಹಿತಿ ನೀಡಲಾಗಿದೆ.
==ಕೇಂದ್ರೀಯ ಪಠ್ಯದಲ್ಲಿ ಆಚಾರ್ಯ ಕಣಾದ, 2ನೇ ಭಾಸ್ಕರನ ಬಗ್ಗೆ ಪಠ್ಯ
-ಆಧುನಿಕ ವಿಜ್ಞಾನ, ಇಸ್ರೋ, ಕೋವಿಡ್ ಲಸಿಕೆ ಕುರಿತೂ ಮಾಹಿತಿನವದೆಹಲಿ: ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ಜ್ಞಾನದ ಜೊತೆಗೆ ಸಮಕಾಲೀನ ವಿಜ್ಞಾನವನ್ನೂ ಕಲಿಸುವ ಉದ್ದೇಶದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 8ನೇ ತರಗತಿ ಪಠ್ಯಪುಸ್ತಕದಲ್ಲಿ ಹೊಸ ಪಾಠಗಳನ್ನು ಅಳವಡಿಸಿದೆ. ಪರಮಾಣು ಕಲ್ಪನೆಯ ಪ್ರವರ್ತಕ ಆಚಾರ್ಯ ಕಣಾದ, ಪ್ರಾಚೀನ ವೈದ್ಯಪದ್ಧತಿ, ಪ್ರಾಚೀನ ಕಾಲದ ಬಾಹ್ಯಾಕಾಶ ಸಂಶೋಧನೆ ಮೊದಲಾದ ವಿಷಯಗಳ ಜೊತೆಗೆ ಆಧುನಿಕ ಕಾಲದ ಇಸ್ರೋ, ಕೋವಿಡ್-19, ಅಣುವಿಜ್ಞಾನಗಳ ಕುರಿತ ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.ಆಧುನಿಕ ಲಸಿಕೆಗಳು ಬರುವುದಕ್ಕೂ ಪೂರ್ವದಲ್ಲಿ, ಭಾರತವು ಸಿಡುಬಿನಿಂದ ರಕ್ಷಿಸಲು ವೇರಿಯೊಲೇಷನ್ ಎಂಬ ಸಾಂಪ್ರದಾಯಿಕ ವಿಧಾನವನ್ನು ಹೊಂದಿತ್ತು ಎಂಬ ಮಾಹಿತಿ ಹಾಗೂ ಕೋವಿಡ್ ಸಮಯದಲ್ಲಿ ಭಾರತದ ಲಸಿಕೆಗಳು ಜಗತ್ತಿಗೆ ವರದಾನವಾದ ಪರಿಯನ್ನು ‘ಆರೋಗ್ಯ: ಅಂತಿಮ ನಿಧಿ’ ಅಧ್ಯಾಯದಲ್ಲಿ ತಿಳಿಸಲಾಗಿದೆ.
‘ಕಣಗಳ ನಿಜವಾದ ಗುಣಧರ್ಮ’ ಅಧ್ಯಾಯದಲ್ಲಿ, ಪರಮಾಣು ಕಲ್ಪನೆಯ ಬಗ್ಗೆ ಮೊದಲಿಗೆ ತಿಳಿಸಿದ ಪ್ರಾಚೀನ ಭಾರತೀಯ ತತ್ವಜ್ಞಾನಿ ಆಚಾರ್ಯ ಕಣಾದರ ಕುರಿತು ಉಲ್ಲೇಖಿಸಲಾಗಿದೆ. ಮತ್ತೊಂದು ಅಧ್ಯಾಯದಲ್ಲಿ, ಪ್ರಾಚೀನಕಾಲದಲ್ಲಿ ಔಷಧೀಯ ಉದ್ದೇಶಗಳಿಗಾಗಿ ಮಿಶ್ರಲೋಹಗಳನ್ನು ಬಳಸುತ್ತಿದ್ದುದನ್ನು ವಿವರಿಸಲಾಗಿದೆ. ಚಂದ್ರಯಾನ 1, 2, 3, ಆದಿತ್ಯ ಎಲ್1, ಮಂಗಳಯಾನದಂತಹ ಇಸ್ರೋದ ವಿವಿಧ ಕಾರ್ಯಾಚರಣೆಗಳನ್ನು ಸಹ ವಿವರಿಸಲಾಗಿದೆ.800 ವರ್ಷಗಳ ಹಿಂದೆ 2ನೇ ಭಾಸ್ಕರನ ಅವಧಿಯಲ್ಲಿ ಭಾರತೀಯ ಖಗೋಳಶಾಸ್ತ್ರಜ್ಞರು ನೀರಿನ ಬಟ್ಟಲುಗಳು ಮತ್ತು ಕೊಳವೆಗಳನ್ನು ಬಳಸಿ ಆಕಾಶಕಾಯಗಳು ಮತ್ತು ಗ್ರಹಗಳ ಚಲನೆಯನ್ನು ಅರಿಯುತ್ತಿದ್ದ ಕುರಿತು ತಿಳಿಸಿಕೊಡಲಾಗಿದೆ. ಪರಮವೀರ ಚಕ್ರ ಪುರಸ್ಕೃತ ಮೇ. ಸೋಮನಾಥ ಶರ್ಮಾ, ಐತಿಹಾಸಿಕ ಬುಡ್ಗಮ್ ಕದನಗಳ ಕುರಿತೂ ಪಾಠಗಳಿವೆ.