ಕೊಲ್ಹಾಪುರಕ್ಕೆ ಪ್ರಾಡಾ ಟೀಂ ಭೇಟಿ: ಚಪ್ಪಲಿ ನಕಲು ಬಳಿಕ ಡ್ಯಾಮೇಜ್ ಕಂಟ್ರೋಲ್ ಯತ್ನ

KannadaprabhaNewsNetwork |  
Published : Jul 17, 2025, 12:30 AM IST
ಪ್ರಾಡಾ | Kannada Prabha

ಸಾರಾಂಶ

300 ರು.ನಷ್ಟು ಬೆಲೆ ಬಾಳುವ ಪ್ರಸಿದ್ಧ ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು ನಕಲು ಮಾಡಿ, ಅದನ್ನು 1.20 ಲಕ್ಷ ರು.ಗಳಿಗೆ ಮಾರಾಟ ಮಾಡಲು ಮುಂದಾಗಿ ಆಕ್ರೋಶಕ್ಕೆ ತುತ್ತಾಗಿದ್ದ ಇಟಲಿಯ ಫ್ಯಾಷನ್ ಕಂಪನಿ ‘ಪ್ರಾಡಾ’, ಇದೀಗ ತನ್ನ ತಜ್ಞರ ತಂಡವನ್ನು ಕೊಲ್ಹಾಪುರಕ್ಕೆ ಕಳಿಸಿ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದೆ.

ಕೊಲ್ಹಾಪುರ: 300 ರು.ನಷ್ಟು ಬೆಲೆ ಬಾಳುವ ಪ್ರಸಿದ್ಧ ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು ನಕಲು ಮಾಡಿ, ಅದನ್ನು 1.20 ಲಕ್ಷ ರು.ಗಳಿಗೆ ಮಾರಾಟ ಮಾಡಲು ಮುಂದಾಗಿ ಆಕ್ರೋಶಕ್ಕೆ ತುತ್ತಾಗಿದ್ದ ಇಟಲಿಯ ಫ್ಯಾಷನ್ ಕಂಪನಿ ‘ಪ್ರಾಡಾ’, ಇದೀಗ ತನ್ನ ತಜ್ಞರ ತಂಡವನ್ನು ಕೊಲ್ಹಾಪುರಕ್ಕೆ ಕಳಿಸಿ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದೆ. ಪ್ರಾಡಾ ತಾಂತ್ರಿಕ ವಿಭಾಗದ ನಾಲ್ವರು ತಜ್ಞರು ಹಾಗೂ ಇಬ್ಬರು ಬಾಹ್ಯ ಸಲಹೆಗಾರರು ಮಂಗಳವಾರ ಕೊಲ್ಹಾಪುರಕ್ಕೆ ಬಂದು ಸ್ಥಳೀಯ ಚಪ್ಪಲಿ ತಯಾರಿಕಾ ವಿಭಾಗಗಳಿಗೆ ಭೇಟಿ ನೀಡಿದ್ದಾರೆ. ಇಲ್ಲಿನ ಕುಶಲಕರ್ಮಿಗಳ ಜೊತೆ ಮಾತುಕತೆ ನಡೆಸಿ ಚಪ್ಪಲಿ ತಯಾರಿಕೆ ಕುರಿತು ಮಾಹಿತಿ ಪಡೆದಿದ್ದಾರೆ. ಇದು ಕೊಲ್ಹಾಪುರಿ ಚಪ್ಪಲಿ ತಯಾರಕರ ಜತೆ ಪ್ರಾಡಾ ಒಪ್ಪಂದಕ್ಕೆ ಮುಂದಾಗಿದೆಯೇ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.ಇತ್ತೀಚೆಗೆ ಪ್ರಾಡಾ ಕೊಲ್ಹಾಪುರಿ ಚಪ್ಪಲಿಯನ್ನು ನಕಲು ಮಾಡಿ, ತನ್ನದೇ ವಿನ್ಯಾಸವೆಂಬಂತೆ ಬಿಂಬಿಸಿ ಲಕ್ಷಾಂತರ ಬೆಲೆಗೆ ಮಾರಾಟ ಮಾಡಲು ಮುಂದಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ, ಕೊಲ್ಹಾಪುರದಿಂದ ತಾನು ‘ಸ್ಫೂರ್ತಿ’ ಪಡೆದಿರುವುದಾಗಿ ಒಪ್ಪಿಕೊಂಡಿತ್ತು.

==

ಸರ್ಕಾರ ಸೇರಿ: ಉದ್ಧವ್‌ಗೆ ಫಡ್ನವೀಸ್‌ ನೇರಾನೇರ ಆಹ್ವಾನ

ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ತಮ್ಮ ರಾಜಕೀಯ ವೈರಿ ಶಿವಸೇನೆಯ (ಯುಬಿಟಿ) ನಾಯಕ ಉದ್ಧವ್ ಠಾಕ್ರೆಯನ್ನು ಬಹಿರಂಗವಾಗಿಯೇ ತಮ್ಮ ಪಕ್ಷಕ್ಕೆ ಆಹ್ವಾನಿಸಿದ ಪ್ರಸಂಗ ವಿಧಾನಪರಿಷತ್ತಿನಲ್ಲಿ ನಡೆಯಿತು,ಸದನದಲ್ಲಿ ಶಿವಸೇನೆಯ ಠಾಕ್ರೆ ಬಣದ ಅಂಬದಾಸ್‌ ದಾನ್ವೆ ಅವರು ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಫಡ್ನವೀಸ್‌, ‘ನಮಗೆ 2029ರವರೆಗೆ ವಿರೋಧ ಪಕ್ಷಕ್ಕೆ ಹೋಗಲು ಯಾವುದೇ ಅವಕಾಶವಿಲ್ಲ. ಆದರೆ ನಿಮಗೆ ಬರಬೇಕು ಅನಿಸಿದರೆ ಪರಿಗಣಿಸಿ. ಅದು ನಿಮಗೆ ಬಿಟ್ಟಿದ್ದು. ಪರಿಗಣಿಸಬಹುದು’ ಎಂದರು.

ಉದ್ಧವ್‌-ರಾಜ್‌ ಠಾಕ್ರೆ ಜೋಡಿ ವೈಮನಸ್ಯ ಮರೆತು ಒಂದಾಗುತ್ತಿರುವ ನಡುವೆಯೇ ಫಡ್ನವೀಸ್‌ ನೀಡಿದ ಈ ಆಹ್ವಾನ ಕುತೂಹಲಕ್ಕೆ ಕಾರಣವಾಗಿದೆ.

==

ಅಸ್ಸಾಂ ಸಿಎಂ ಬಿಸ್ವಾರನ್ನು ಜೈಲಿಗೆ ಕಳಿಸ್ತೇವೆ: ರಾಹುಲ್‌, ಖರ್ಗೆ

ಕಾಂಗ್ರೆಸ್‌ನಿಂದ ಓಡಿಹೋದವರು ಅಸ್ಸಾಂ ಸಿಎಂ: ಖರ್ಗೆ

ಗುವಾಹಟಿ: ‘ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಡಗಿರುವ ಹಾಲಿ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಅವರನ್ನು ಜೈಲಿಗೆ ಕಳುಹಿಸುತ್ತೇವೆ’ ಎಂದು ಲೋಕಸಭೆ ವಿಪಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಮಂತ್‌ ಬಿಸ್ವಾ ಶರ್ಮಾ ವಿರುದ್ಧ ಕಿಡಿಕಾರಿದರು,

ಅಸ್ಸಾಂನ ಚಾಯಗಾಂವ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ಅಸ್ಸಾಂ ಮುಖ್ಯಮಂತ್ರಿ ತಮ್ಮನ್ನು ರಾಜ ಎಂದು ತಿಳಿದುಕೊಂಡಿದ್ದಾರೆ. ಆದರೆ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಜನರು ಅವರನ್ನು ಜೈಲಿಗೆ ಹಾಕಲು ಬಯಸುತ್ತಾರೆ. ಮುಖ್ಯಮಂತ್ರಿಗೆ ಭಯವಿದೆ. ನಿರ್ಭೀತ ಕಾಂಗ್ರೆಸ್‌ ಕಾರ್ಯಕರ್ತರು ಅವರನ್ನು ಜೈಲಿಗೆ ಹಾಕುತ್ತಾರೆಂದು ಅವರಿಗೆ ತಿಳಿದಿದೆ. ಶರ್ಮಾ ಮತ್ತು ಅವರು ಕುಟುಂಬದವರು ಭ್ರಷ್ಟಾಚಾರಕ್ಕೆ ಹೊಣೆಗಾರರು’ ಎಂದರು.

ಇದೇ ವೇಳೆ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ‘ಕಾಂಗ್ರೆಸ್‌ನಿಂದ ಓಡಿ ಹೋದವರು ಈಗ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ. ಜನರಿಗೆ ಕೆಡುಕು ಮಾಡಿರುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈಗಲೇ ಅವರು ಜೈಲುಗಳನ್ನು ದುರಸ್ತಿ ಮಾಡಿಸಬೇಕು. ಏಕೆಂದರೆ ಅವರು ಅಲ್ಲಿಯೇ ಇರುತ್ತಾರೆ’ ಎಂದು ಹರಿಹಾಯ್ದರು. ಅಂದಹಾಗೆ ಅಸ್ಸಾಂನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

==

ಸ್ವಂತ ಬಲದಿಂದ ಎಐಎಡಿಎಂಕೆ ಸರ್ಕಾರ ರಚನೆ: ಪಳನಿಸ್ವಾಮಿ

ಚೆನ್ನೈ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಕೂಟ ಜಯ ಗಳಿಸಲಿದೆಯಾದರೂ, ಎಐಎಡಿಎಂಕೆ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ’ ಎಂದು ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ. ಹೀಗಾಗಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಅವರು ಕೈಕೊಡುತ್ತಾರಾ ಎಂಬ ಊಹಾಪೋಹ ಮತ್ತೆ ಸೃಷ್ಟಿಯಾಗಿದೆ.ಬುಧವಾರ ಅವರು ಮಾತನಾಡಿ, ‘ಎನ್‌ಡಿಎ ಕೂಟಕ್ಕೆ ಎಐಎಡಿಎಂಕೆ ಸಾರಥ್ಯ ವಹಿಸಲಿದೆ. ಕೂಟ ಜಯ ಸಾಧಿಸಿದರೆ ನಾನೇ ಸಿಎಂ ಆಗುತ್ತೇನೆ ಎಂದು ಬಿಜೆಪಿಯೂ ಸ್ಪಷ್ಟಪಡಿಸಿದೆ. ಎಐಎಡಿಎಂಕೆ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ’ ಎಂದರು. ಆದರೆ ಇದೇ ವೇಳೆ, ಎಐಎಡಿಎಂಕೆ ಮತ್ತು ಬಿಜೆಪಿ ನಡುವೆ ಒಡಕು ಉಂಟಾಗಿದೆ ಎಂಬ ಉಹೆ ಅಲ್ಲಗಳೆದರು.

ಈ ಮುಂಚೆಯೂ ಅವರು ‘ಅಣ್ಣಾಡಿಎಂಕೆ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ. ಏಕೆಂದರೆ ತಮಿಳ್ನಾಡಿನಲ್ಲಿ ಮೈತ್ರಿ ಸರ್ಕಾರದ ಇತಿಹಾಸವೇ ಇಲ್ಲ’ ಎಂದಿದ್ದರು.

==

ಸತ್ಯಜಿತ್‌ ರೇ ನಿವಾಸ ಧ್ವಂಸ ನಿಲ್ಲಿಸಿದ ಬಾಂಗ್ಲಾ

ಢಾಕಾ: ಬಾಂಗ್ಲಾದೇಶದ ರಾಜಧಾನಿ ಬಳಿಯ ಭಾರತದ ಖ್ಯಾತ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರ ಪೂರ್ವಜರ ಮನೆಯ ಧ್ವಂಸ ಕಾರ್ಯವನ್ನು ಬುಧವಾರ ನಿಲ್ಲಿಸಲಾಗಿದೆ ಎಂದು ಗೊತ್ತಾಗಿದೆ. ಧ್ವಂಸಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಮನೆಯನ್ನು ಸ್ಮಾರಕ ಮಾಡಲು ನೆರವು ನೀಡುವುದಾಗಿ ಭಾರತ ಮಂಗಳವಾರ ಹೇಳಿತ್ತು.

==

ಬಾಂಗ್ಲಾ: ಹಸೀನಾ ತವರಲ್ಲಿ ಹಿಂಸೆಗೆ 4 ಬಲಿ

ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಹಾಗೂ ಅವರ ತಂದೆ ವಂಗಬಂಧು ಮುಜಿಬುರ್‌ ರೆಹಮಾನ್‌ ಅವರ ತವರೂರು ಗೋಪಾಲಗಂಜ್‌ನಲ್ಲಿ ಬುಧವಾರ ನ್ಯಾಷನಲ್‌ ಸಿಟಿಜನ್‌ ಪಾರ್ಟಿ (ಎನ್‌ಸಿಪಿ) ನಡೆಸಿದ ಸಮಾವೇಶದ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಈ ವೇಳೆ ಹಸೀನಾ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಕಾದಾಟ ನಡೆದು 4 ಮಂದಿ ಸಾವನ್ನಪ್ಪಿದ್ದಾರೆ.

==

ಏರ್‌ ಇಂಡಿಯಾ ಬಿ87 ಲಾಕ್‌ ಸಮಸ್ಯೆ ಇಲ್ಲ: ಪರೀಕ್ಷೆ ವೇಳೆ ಸಾಬೀತು

ನವದೆಹಲಿ: ಏರ್ ಇಂಡಿಯಾ ಬುಧವಾರ ತನ್ನ ಬೋಯಿಂಗ್ 787 ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳ ಲಾಕಿಂಗ್ ಕಾರ್ಯವಿಧಾನದ ಪರಿಶೀಲನೆ ಪೂರ್ಣಗೊಳಿಸಿದೆ ಮತ್ತು ಅದರಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ಅಪಘಾತಕ್ಕೂ ಮುನ್ನ ಇಂಧನ ಸ್ವಿಚ್‌ ಕಡಿತಗೊಳಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿತ್ತು. ಹೀಗಾಗಿ ಬಿ787 ಹಾಗೂ 737 ವಿಮಾನಗಳ ಸ್ವಿಚ್‌ ತಪಾಸಣೆ ನಡೆದಿದೆ.

ಇಂಡಿಗೋ ಎಂಜಿನ್‌ ವೈಫಲ್ಯ: ತುರ್ತು ಭೂಸ್ಪರ್ಶಮುಂಬೈ: ದೆಹಲಿಯಿಂದ ಗೋವಾಗೆ ಹೊರಟ ಇಂಡಿಗೋ ವಿಮಾನ ಎಂಜಿನ್‌ ವೈಫಲ್ಯ ಕಾರಣ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇದು ಏರ್‌ಬಸ್‌ 320 ವಿಮಾನವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ಹೇಳಿವೆ.

PREV

Latest Stories

ಬಿಹಾರದಲ್ಲೂ ಉಚಿತ ವಿದ್ಯುತ್‌
35000 ಕಿ.ಮೀ. ಎತ್ತರದಲ್ಲಿ ಉಪಗ್ರಹಕ್ಕೆಇಂಧನ ಭರ್ತಿ: ಚೀನಾ ಹೊಸ ದಾಖಲೆ
ಏರ್‌ಇಂಡಿಯಾ ವಿಮಾನ ದುರಂತಕ್ಕೆ ತಾಂತ್ರಿಕ ಸಮಸ್ಯೆ ಕಾರಣವಾಯ್ತೇ?