100 ಜಿಲ್ಲೆಗಳಲ್ಲಿ ಧನ-ಧಾನ್ಯ ಯೋಜನೆ

KannadaprabhaNewsNetwork |  
Published : Jul 17, 2025, 12:30 AM IST
ಯೋಜನೆ | Kannada Prabha

ಸಾರಾಂಶ

ಕಡಿಮೆ ಉತ್ಪಾದಕತೆ ಇರುವ ಜಿಲ್ಲೆಗಳಲ್ಲಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡಿ, ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ದೇಶದ 100 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಜಾರಿ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

- ಕಡಿಮೆ ಕೃಷಿ ಉತ್ಪಾದಕತೆಯ ಜಿಲ್ಲೆಗಳಲ್ಲಿ ಜಾರಿ

- ಸುಸ್ಥಿರ ಕೃಷಿ, ಉತ್ಪಾದಕತೆ ಹೆಚ್ಚಿಸುವ ಯೋಜನೆ

- ₹24000 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಒಪ್ಪಿಗೆ

ನವದೆಹಲಿ: ಕಡಿಮೆ ಉತ್ಪಾದಕತೆ ಇರುವ ಜಿಲ್ಲೆಗಳಲ್ಲಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡಿ, ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ದೇಶದ 100 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಜಾರಿ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಮುಂದಿನ 6 ವರ್ಷಗಳಲ್ಲಿ ಈ ಯೋಜನೆಗೆ ವಾರ್ಷಿಕ 24 ಸಾವಿರ ಕೋಟಿ ನೀಡಲೂ ಅದು ಸಮ್ಮತಿಸಿದೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆ ಹಾಲಿ ಇರುವ ಕೃಷಿ ಸಂಬಂಧಿತ 36 ಯೋಜನೆಗಳಲ್ಲಿ ಬದಲಾವಣೆ ಮತ್ತು ಬೆಳೆಯಲ್ಲಿ ವೈವಿಧ್ಯ ಮತ್ತು ಸುಸ್ಥಿರ ಕೃಷಿಗೆ ಉತ್ತೇಜನ ನೀಡಲಿದೆ. ಈ ಯೋಜನೆಯು ದೇಶದ 1.7 ಕೋಟಿ ರೈತರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌, ಈ ಯೋಜನೆಯು ಬೆಳೆಕಟಾವಿನ ನಂತರದ ಕೃಷಿ ಉತ್ಪನ್ನಗಳ ಶೇಖರಣೆ, ಕೃಷಿ ಸೌಲಭ್ಯಗಳ ಸುಧಾರಣೆ ಮತ್ತು ಕೃಷಿ ಉತ್ಪಾದಕತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದರು.

ಸಮಿತಿಗಳ ರಚನೆ, ಪರಮಾಮರ್ಶೆ:

ಈ 100 ಜಿಲ್ಲೆಗಳನ್ನು ಕಡಿಮೆ ಉತ್ಪಾದಕತೆ, ಕಡಿಮೆ ಸಾಲ ವಿತರಣೆ ಮತ್ತು ಕಡಿಮೆ ಬೆಳೆ ತೀವ್ರತೆ ಆಧರಿಸಿಕೊಂಡು ಆಯ್ಕೆ ಮಾಡಲಾಗುತ್ತದೆ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕನಿಷ್ಠ 1 ಜಿಲ್ಲೆಯನ್ನಾದರೂ ಆಯ್ಕೆ ಕಡ್ಡಾಯ.

ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಪ್ಲಾನಿಂಗ್‌ ಮತ್ತು ನಿಗಾಗಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಜಿಲ್ಲೆಯ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಪ್ಲಾನಿಂಗ್‌ ಅನ್ನು ಜಿಲ್ಲಾ ಧನ್‌ ಧಾನ್ಯ ಸಮಿತಿ ಅಂತಿಮಗೊಳಿಸಲಿದೆ. ಪ್ರಗತಿಪರ ರೈತರೂ ಇದರ ಸದಸ್ಯರಾಗಿರಲಿದ್ದಾರೆ. ಜಿಲ್ಲಾ ಪ್ಲ್ಯಾನ್‌ಗಳು ಮಿಶ್ರಬೆಳೆ, ನೀರಿನ ರಕ್ಷಣೆ ಮತ್ತು ಮಣ್ಣಿನ ಆರೋಗ್ಯ, ಸ್ವಾವಲಂಬನೆ, ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಗುರಿಯೊಂದಿಗೆ ಬೆಸೆದುಕೊಂಡಿರುತ್ತವೆ. ಪ್ರತಿ ಧನ್‌-ಧಾನ್ಯ ಜಿಲ್ಲೆಗಳ ಪ್ರಗತಿಯನ್ನು 117 ಪ್ರಮುಖ ಸಾಧನೆಗಳ ಸೂಚ್ಯಂಕಗಳನ್ನು ಆಧರಿಸಿ ಪ್ರತಿ ತಿಂಗಳು ವಿಶ್ಲೇಷಣೆ ಮಾಡಲಾಗುತ್ತದೆ.

++++

ನೀತಿ ಆಯೋಗವು ಪರಿಶೀಲನೆ, ಜಿಲ್ಲಾ ಯೋಜನೆಗಳ ಪರಿವೀಕ್ಷಣೆ ನಡೆಸುತ್ತದೆ. ಪ್ರತಿ ಜಿಲ್ಲೆಗೆ ನೇಮಿಸಲಾದ ಕೇಂದ್ರದ ನೋಡಲ್‌ ಅಧಿಕಾರಿಯು ಯೋಜನೆಯನ್ನು ನಿಯಮಿತವಾಗಿ ಪರಿಶೀಲಿಸಲಿದ್ದಾರೆ.

==

ಮುಂಗಾರು ಅಧಿವೇಶನದಲ್ಲಿ ಕೇಂದ್ರದಿಂದ 8 ಮಸೂದೆಗಳ ಮಂಡನೆ ಸಾಧ್ಯತೆ

ನವದೆಹಲಿ: ಜು.21ರಿಂದ ಆರಂಭವಾಗುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಭೂ-ಪಾರಂಪರಿಕ ತಾಣಗಳು ಮತ್ತು ಭೌಗೋಳಿಕ ಅವಶೇಷಗಳನ್ನು ಸಂರಕ್ಷಿಸುವ ಮಸೂದೆ ಸೇರಿ ಒಟ್ಟು 8 ಮಸೂದೆಗಳನ್ನು ಮಂಡಿಸುವ ನಿರೀಕ್ಷೆಯಿದೆ.ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, ಭೂ-ಪಾರಂಪರಿಕ ತಾಣಗಳು ಮತ್ತು ಭೂ-ಅವಶೇಷಗಳು (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ, ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳನ್ನು ಕೇಂದ್ರ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.

PREV

Latest Stories

ಬಿಹಾರದಲ್ಲೂ ಉಚಿತ ವಿದ್ಯುತ್‌
35000 ಕಿ.ಮೀ. ಎತ್ತರದಲ್ಲಿ ಉಪಗ್ರಹಕ್ಕೆಇಂಧನ ಭರ್ತಿ: ಚೀನಾ ಹೊಸ ದಾಖಲೆ
ಏರ್‌ಇಂಡಿಯಾ ವಿಮಾನ ದುರಂತಕ್ಕೆ ತಾಂತ್ರಿಕ ಸಮಸ್ಯೆ ಕಾರಣವಾಯ್ತೇ?