8ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕ: ಸಂಪುಟ ಸಮ್ಮತಿ

| Published : Oct 29 2025, 01:15 AM IST

ಸಾರಾಂಶ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಹೆಚ್ಚಳ ಮೊದಲಾದ ವಿಷಯದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುವ 8ನೇ ವೇತನ ಆಯೋಗದ ಉಲ್ಲೇಖದ ನಿಯಮಗಳಿಗೆ (ಟಿಒಆರ್‌) ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ.

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಹೆಚ್ಚಳ ಮೊದಲಾದ ವಿಷಯದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುವ 8ನೇ ವೇತನ ಆಯೋಗದ ಉಲ್ಲೇಖದ ನಿಯಮಗಳಿಗೆ (ಟಿಒಆರ್‌) ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ.

ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ 69 ಲಕ್ಷ ನಿವೃತ್ತರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ. ಆಯೋಗದ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ.ರಂಜನಾ ಪ್ರಕಾಶ್‌ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ಐಐಎಂನ ಪ್ರೊ.ಪುಲಕ್‌ ಘೋಷ್‌ ಮತ್ತು ಎಂಪಿಎನ್‌ಜಿ ಕಾರ್ಯದರ್ಶಿ ಪಂಕಜ್‌ ಜೈನ್‌ ಅವರು ಆಯೋಗದ ಸದಸ್ಯರಾಗಿರಲಿದ್ದಾರೆ.

ಆಯೋಗ ರಚನೆಯಾದ 18 ತಿಂಗಳೊಳಗಾಗಿ ತನ್ನ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಮುಂದಿನ ವರ್ಷ ಜ.1ರಿಂದಲೇ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆ ಇದೆ.

ಈ ವರ್ಷ ಜನವರಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಂಟನೇ ವೇತನ ಆಯೋಗ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.ರೈತರಿಗೆ ಕೇಂದ್ರ ಗಿಫ್ಟ್‌:

ರಸಗೊಬ್ಬರದ ಸಬ್ಸಿಡಿ

₹37000 ಕೋಟಿಗೇರಿಕೆ

ನವದೆಹಲಿ: ಹಿಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಯೂರಿಯಾಯೇತರ ಗೊಬ್ಬರಗಳಾದ ರಂಜಕ ಮತ್ತು ಗಂಧಕಗಳ ಮೇಲಿನ ಸಹಾಯಧನ ಪ್ರಮಾಣವನ್ನು 14,000 ಕೋಟಿ ರು.ನಷ್ಟು ಹೆಚ್ಚಿಸಿದ್ದು, 37,952 ಕೋಟಿ ರು.ಗೆ ತಲುಪಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌, ‘ಕೇಜಿ ರಂಜಕದ ಮೇಲೆ ಹಾಲಿ ನೀಡಲಾಗುತ್ತಿದ್ದ 43.60 ರು. ಸಹಾಯಧನವನ್ನು 47.96 ರು.ಗೆ ಏರಿಸಲಾಗಿದೆ. ಗಂಧಕ ಸಹಾಯಧನವನ್ನು 1.77 ರು. ನಿಂದ 2.87 ರು.ಗೆ ಹೆಚ್ಚಿಸಲಾಗಿದೆ. ಈ ವರ್ಷದ ಸಹಾಯಧನದ ಮೊತ್ತವನ್ನು 24000 ಕೋಟಿ ರು.ನಿಂದ 14000 ಕೋಟಿ ರು.ಹೆಚ್ಚಿಸಿ 37952 ಕೋಟಿ ರು.ಗೆ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.