ರಾಹುಲ್‌ ಭಾರತ್‌ ಜೋಡೋಗೆ ಅಖಿಲೇಶ್‌ ಸಾಥ್‌

KannadaprabhaNewsNetwork | Updated : Feb 26 2024, 11:57 AM IST

ಸಾರಾಂಶ

ಸೀಟು ಹೊಂದಾಣಿಕೆ ಅಂತಿಮ ಹಿನ್ನೆಲೆ ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಎಸ್‌ಪಿ ನೇತಾರ ಅಖಿಲೇಶ್‌ ಯಾದವ್‌ ಸಾಥ್‌ ನೀಡಿದ್ದಾರೆ.

ಆಗ್ರಾ: ಹಾಲಿ ಉತ್ತರಪ್ರದೇಶದ ಆಗ್ರಾದಲ್ಲಿರುವ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಭಾನುವಾರ ಪಾಲ್ಗೊಂಡರು. 

ಇದು ರಾಹುಲ್‌ ಯಾತ್ರೆಯಲ್ಲಿ ಇಂಡಿಯಾ ಮೈತ್ರಿಕೂಟದ ದೊಡ್ಡ ನಾಯಕರು ಭಾಗಿಯಾದ ಮೊದಲ ಉದಾಹರಣೆ ಎಂಬುದು ವಿಶೇಷ.

ರಾಜ್ಯದಲ್ಲಿ ಸೀಟು ಹಂಚಿಕೆ ಅಂತಿಮ ಆಗುವವರೆಗೂ ತಾವು ಪಾದಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಅಖಿಲೇಶ್‌ ಪಟ್ಟು ಹಿಡಿದಿದ್ದರು. 

ಹೀಗಾಗಿ ಮೈತ್ರಿ ಮುರಿದು ಬೀಳುವ ಆತಂಕ ಎದುರಾಗಿತ್ತು. ಆದರೆ ಕೊನೆಗೆ ಪ್ರಿಯಾಂಕಾ ವಾದ್ರಾ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ವೇಳೆ 17 ಸೀಟುಗಳನ್ನು ಮಾತ್ರ ಬಿಟ್ಟುಕೊಡುವ ಸಮಾಜವಾದಿ ಪಕ್ಷದ ಆಫರ್‌ ಅನ್ನು ಕಾಂಗ್ರೆಸ್ ಒಪ್ಪಿಕೊಂಡಿತ್ತು.

ಅದರ ಬೆನ್ನಲ್ಲೇ ಅಖಿಲೇಶ್‌ ಭಾನುವಾರ ಯಾತ್ರೆಯಲ್ಲಿ ಭಾಗಿಯಾದರು ಹಾಗೂ ಬಿಜೆಪಿ ವಿರುದ್ಧ ವಾಗ್ದಾಳ ನಡೆಸಿದರು. ಇದು ಉತ್ತರಪ್ರದೇಶದಲ್ಲಿ ಬಿಜೆಪಿಯ ಓಟಕ್ಕೆ ಬ್ರೇಕ್ ಹಾಕುವ ಕಾಂಗ್ರೆಸ್‌ ಕನಸಿಗೆ ಒಂದಷ್ಟು ಬಲ ತುಂಬಿದೆ. 

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 80 ಸ್ಥಾನಗಳ ಪೈಕಿ ಎನ್‌ಡಿಎ 64, ಎಸ್‌ಪಿ 5, ಬಿಎಸ್‌ಪಿ 10, ಕಾಂಗ್ರೆಸ್‌ 1 ಸ್ಥಾನ ಗೆದ್ದಿತ್ತು.

Share this article