ಬಂಕಿಮಚಂದ್ರ ಚಟರ್ಜಿ ಗೀತೆಗೆ ಮತ್ತೆ ಮನ್ನಣೆ : ರಾಷ್ಟ್ರಗೀತೆ ಮುನ್ನ ವಂದೇ ಮಾತರಂ ಕಡ್ಡಾಯ

KannadaprabhaNewsNetwork |  
Published : Feb 12, 2026, 02:00 AM ISTUpdated : Feb 12, 2026, 05:56 AM IST
Vande Mataram

ಸಾರಾಂಶ

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಜನ ಗಣ ಮನ’ಕ್ಕೂ ಮೊದಲು, ‘ವಂದೇ ಮಾತರಂ’ ಕಡ್ಡಾಯವಾಗಿ 2 ಚರಣದ ಬದಲು 3 ನಿಮಿಷ 10 ಸೆಕೆಂಡ್‌ ಅವಧಿ ಹೊಂದಿರುವ ಪೂರ್ತಿ ಹಾಡಬೇಕು

  ನವದೆಹಲಿ :  ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಅದರನ್ವಯ, ‘ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೂ ಮೊದಲು, ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಮೊದಲಿನ 2 ಚರಣದ ಬದಲು 3 ನಿಮಿಷ 10 ಸೆಕೆಂಡ್‌ ಅವಧಿ ಹೊಂದಿರುವ ಪೂರ್ತಿ (ಎಲ್ಲ 6 ಚರಣ) ಹಾಡಬೇಕು ಅಥವಾ ನುಡಿಸಬೇಕು’ ಎಂದು ಸೂಚಿಸಿದೆ.

‘ಸರ್ಕಾರದ ಪ್ರಶಸ್ತಿ ಪ್ರದಾನ ಸೇರಿದಂತೆ ರಾಷ್ಟ್ರಪತಿಗಳು ಭಾಗಿಯಾಗುವ ಎಲ್ಲಾ ಸಮಾರಂಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ವೇಳೆ ವಂದೇ ಮಾತರಂ ಮೊಳಗಬೇಕು. ಶಾಲೆ-ಕಾಲೇಜುಗಳಲ್ಲೂ ಪ್ರಾರ್ಥನೆ ವೇಳೆ ಗೀತೆ ಹಾಡಬೇಕು. ಈ ವೇಳೆ ಕಡ್ಡಾಯವಾಗಿ ಎದ್ದು ನಿಲ್ಲಬೇಕು’ ಎಂದು ಹೊಸ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರ ಆಗುವ ಸಾಕ್ಷ್ಯಚಿತ್ರ ಅಥವಾ ಸಿನಿಮಾಗಳ ಮಧ್ಯೆ ಇದು ಪ್ರಸಾರವಾದರೆ ಜನರು/ಪ್ರೇಕ್ಷಕರು ಎದ್ದುನಿಲ್ಲುವ ಅಗತ್ಯವಿಲ್ಲ.

ಬಂಗಾಳಿ ಕವಿ ಬಂಕಿಮ ಚಂದ್ರ ಚಟರ್ಜಿ ಬರೆದ ಈ ಗೀತೆಗೆ ಸಂಬಂಧಿಸಿದ ಈ ಆದೇಶ ಪ.ಬಂಗಾಳ ಚುನಾವಣೆ ಹೊಸ್ತಿಲಲ್ಲೇ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಇದು ಬಿಜೆಪಿ ಹಾಗೂ ಇಂಡಿಯಾ ಕೂಟದ ಟಿಎಂಸಿ-ಸಿಪಿಎಂ-ಕಾಂಗ್ರೆಸ್‌ ನಡುವೆ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ. ಏಕೆಂದರೆ ಈವರೆಗೆ ಗೀತೆಯ 2 ಚರಣಕ್ಕೆ ಮಾತ್ರ ಅನುಮೋದನೆ ಇತ್ತು. ಉಳಿದ 4 ಚರಣಗಳಿಗೆ ವಿಪಕ್ಷಗಳ ವಿರೋಧವಿತ್ತು.

ವಿವಾದ ಏನು?:

ವಂದೇ ಮಾತರಂ ಎಂಬುದು 1870ರ ದಶಕದಲ್ಲಿ ಬಂಗಾಳಿ ಕವಿ ಬಂಕಿಮಚಂದ್ರ ಚಟರ್ಜಿ ಬರೆದ ದೇಶಭಕ್ತಿಯ ಕವಿತೆಯಾಗಿದ್ದು, ಇದನ್ನು ಮೊದಲು 1882ರಲ್ಲಿ ಅವರ ಬಂಗಾಳಿ ಕಾದಂಬರಿ ‘ಆನಂದಮಠ’ದಲ್ಲಿ ಪ್ರಕಟಿಸಲಾಯಿತು. ಇದರ ಆರಂಭಿಕ ಸಾಲಿನ ಅರ್ಥ ‘ನಾನು ನಿನಗೆ ನಮಸ್ಕರಿಸುತ್ತೇನೆ, ತಾಯಿ’. ಇದು ಮಾತೃಭೂಮಿಯನ್ನು ಉಲ್ಲೇಖಿಸುತ್ತದೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡು ಭಾರತೀಯ ರಾಷ್ಟ್ರೀಯತೆಯ ಪ್ರಮುಖ ಸಂಕೇತವಾಯಿತು. 1937ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು, ಆದರೆ ಮೊದಲ 2 ಚರಣ ಮಾತ್ರ ಬಳಸಲು ನಿರ್ಧರಿಸಿ ಉಳಿದವನ್ನು ಕೈಬಿಟ್ಟಿತು. ಏಕೆಂದರೆ ಉಳಿದ 4ರಲ್ಲಿ ದುರ್ಗಾ ಮಾತೆಯ ಗುಣಗಾನದ ಅಂಶಗಳಿದ್ದವು. ಏಕದೇವೋಪಾಸಕರಾದ ಮುಸ್ಲಿಮರು ಉಳಿದ ಚರಣಗಳಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದ್ದ ಕಾರಣ, ಜಾತ್ಯತೀತತೆ ಸಾರುವ ದೃಷ್ಟಿಯಿಂದ ಗಾಯನದಿಂದ ಉಳಿದ 4 ಚರಣ ಕೈಬಿಡಲಾಯಿತು.

ಆದರೆ, ಇದೀಗ 1937ರಲ್ಲಿ ತೆಗೆದುಹಾಕಿದ್ದ 4 ಚರಣಗಳನ್ನೂ ಕಡ್ಡಾಯವಾಗಿ ಹಾಡಬೇಕು ಎಂದು ಆದೇಶಿಸಲಾಗಿರುವುದು ಗಮನಾರ್ಹ.

ಜಟಾಪಟಿ:

ಕಳೆದ ವರ್ಷ ಗೀತೆಯ ಉಳಿದ 4 ಚರಣಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹ ಮಾಡಿದ್ದರು. ಇದು ಬಿಜೆಪಿ ಮತ್ತು ವಿಪಕ್ಷದ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿತ್ತು. ಇದೀಗ ಸರ್ಕಾರ ಹೊರಡಿಸಿದ ಆದೇಶ ಮತ್ತೆ ಜಟಾಪಟಿಗೆ ನಾಂದಿ ಹಾಡಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿದ್ದು, ‘1937ರಲ್ಲಿ, ರವೀಂದ್ರನಾಥ ಟ್ಯಾಗೋರ್ ಅವರ ಸಲಹೆ ಅನುಸರಿಸಿ ಜವಾಹರಲಾಲ್ ನೆಹರು ಅವರು ಈ ಹಾಡಿನ ಕೆಲವು ಭಾಗಗಳನ್ನು ಮಾತ್ರ ಅಳವಡಿಸಿಕೊಳ್ಳಲು ನಿರ್ಧರಿಸಿದ್ದರು. ನಂತರ, ಆ ಭಾಗಕ್ಕೆ ಮಾತ್ರ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಲಾಗಿತ್ತು. ಈಗ ಬಿಜೆಪಿ ಸರ್ಕಾರ ಆ ಇತಿಹಾಸವನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಒಂದು ದಿನವೂ ಕಂಬಿಗಳ ಹಿಂದೆ ಕಳೆಯದವರು ಈಗ ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ’ ಎಂದು ಕಿಡಿಕಾರಿದೆ.

ಸಿಪಿಎಂ ಕೇಂದ್ರ ಸಮಿತಿ ಪ್ರತಿಕ್ರಿಯಿಸಿ, ‘ದೇಶದ ತುರ್ತು ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಜೆಪಿ ವಂದೇ ಮಾತರಂ ಸುತ್ತ ಹೊಸ ನಿರೂಪಣೆಯನ್ನು ರಚಿಸಲು ಪ್ರಯತ್ನಿಸುತ್ತಿದೆ’ ಎಂದಿದೆ.

ಆದರೆ ಬಿಜೆಪಿ ನಾಯಕರು ಸರ್ಕಾರದ ನಿರ್ಧಾರ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹೊಸ ನಿಯಮ ಏನು?

- ಇನ್ನು ಮುಂದೆ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು 3 ನಿಮಿಷ 10 ಸೆಕೆಂಡ್‌ಗಳೊಳಗೆ ಹಾಡಬೇಕು

- ರಾಷ್ಟ್ರಪತಿಗಳ ಆಗಮನ, ನಿರ್ಗಮನ, ತ್ರಿವರ್ಣ ಧ್ವಜಾರೋಹಣ, ಗವರ್ನರ್‌ಗಳ ಭಾಷಣದ ವೇಳೆ ಗಾಯನ ಕಡ್ಡಾಯ

- ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಪ್ರಾರ್ಥನೆ ವೇಳೆ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಅನ್ನು ತಪ್ಪದೇ ಹಾಡಬೇಕು

- ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ- ಎರಡನ್ನೂ ಹಾಡಬೇಕಾದ ಸಂದರ್ಭದಲ್ಲಿ, ವಂದೇ ಮಾತರಂ ಮೊದಲು ಹಾಡಬೇಕು

- ರಾಷ್ಟ್ರಗೀತೆ ‘ಜನ ಗಣ ಮನ’ದ ರೀತಿ ವಂದೇ ಮಾತರಂ ಮೊಳಗುವಾಗ ಎದ್ದುನಿಂತು ಗೌರವ ಸಲ್ಲಿಸುವುದು ಕಡ್ಡಾಯ

- ಸಿನಿಮಾ ಅಥವಾ ಸಾಕ್ಷ್ಯಚಿತ್ರಗಳ ಪ್ರಸಾರದ ವೇಳೆ ಮಧ್ಯದಲ್ಲಿ ವಂದೇ ಪ್ರಸಾರ ಆದರೆ ಎದ್ದುನಿಲ್ಲುವ ಅಗತ್ಯವಿಲ್ಲ

- ಸರ್ಕಾರಿ/ಖಾಸಗಿ ಕಾರ್ಯಕ್ರಮಗಳಲ್ಲಿ ಅಗತ್ಯವಿದ್ದರೆ ಗೀತೆಯ ಮುದ್ರಿತ ಪ್ರತಿಯನ್ನು ಸಭಿಕರಿಗೆ ವಿತರಿಸಬೇಕು

- ಸೂಕ್ತ ಶಿಸ್ತಿನೊಂದಿಗೆ ಯಾವುದೇ ಕಾರ್ಯಕ್ರಮದಲ್ಲಾದರೂ ವಂದೇ ಮಾತರಂ ಗಾಯನಕ್ಕೆ ಅನುಮತಿಯಿದೆ

- 1870ರಲ್ಲಿ ಬಂಗಾಳಿ ಕವಿ ಬಂಕಿಮ ಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ದೇಶಭಕ್ತಿ ಕವಿತೆಯನ್ನು ರಚಿಸಿದ್ದರು

- ಇದರರ್ಥ- ತಾಯಿ, ನಿನಗೆ ನನ್ನ ನಮನ ಎಂದು. ಮಾತೃಭೂಮಿಯನ್ನು ಗೌರವಿಸುವ ಉದ್ದೇಶ ಹೊಂದಿರುವ ಗೀತೆ

- ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಗೀತೆ ಭಾರತೀಯ ರಾಷ್ಟ್ರೀಯತೆಯ ಪ್ರಮುಖ ಸಂಕೇತವಾಯಿತು

- 1937ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು

- ಈ ಗೀತೆಯಲ್ಲಿ ಆರು ಚರಣ ಇವೆ. ಆದರೆ 4 ಚರಣಗಳಲ್ಲಿ ದುರ್ಗಾಮಾತೆಯ ಗುಣಗಾನದ ಅಂಶಗಳು ಇವೆ

- ಮುಸ್ಲಿಮರ ವಿರೋಧ ಕಾರಣ 4 ಚರಣಗಳನ್ನು ಕೈಬಿಡಲಾಯಿತು. ಈಗ ಆ ನಾಲ್ಕೂ ಚರಣ ಸೇರಿಸಿ ಕಡ್ಡಾಯ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರು ಯುವತಿ ಜತೆ ಮದುವೆಯಾದ ಮಹಾಕುಂಭ ಖ್ಯಾತಿಯ ‘ಐಐಟಿ ಬಾಬಾ’
ಕೋಮಾದಲ್ಲಿ ಮೊಜ್ತಬಾ, ಕೋಂ ನಗರದಲ್ಲಿ ಚಿಕಿತ್ಸೆ