ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 100 ದಿನ, ಮೋದಿಗೆ 74 ವರ್ಷ: ಬಿಜೆಪಿಯಲ್ಲಿ ಸಂಭ್ರಮ

KannadaprabhaNewsNetwork |  
Published : Sep 18, 2024, 01:58 AM ISTUpdated : Sep 18, 2024, 07:55 AM IST
birthday pm modi

ಸಾರಾಂಶ

ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ 100 ದಿನದ ಸಾಧನೆ ಮತ್ತು ಪ್ರಧಾನಿ ಮೋದಿ ಅವರ 74ನೇ ಜನ್ಮದಿನವನ್ನು ಭಾರತೀಯ ಜನತಾ ಪಕ್ಷ ಮಂಗಳವಾರ ದೇಶವ್ಯಾಪಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿತು.

ನವದೆಹಲಿ: ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ 100 ದಿನದ ಸಾಧನೆ ಮತ್ತು ಪ್ರಧಾನಿ ಮೋದಿ ಅವರ 74ನೇ ಜನ್ಮದಿನವನ್ನು ಭಾರತೀಯ ಜನತಾ ಪಕ್ಷ ಮಂಗಳವಾರ ದೇಶವ್ಯಾಪಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿತು.ಪಕ್ಷದ ಕಾರ್ಯಕರ್ತರು ಮಂಗಳವಾರ ದೇಶವ್ಯಾಪಿ ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. 

ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಪಕ್ಷದ ನಾಯಕರು ದೇಶವ್ಯಾಪಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಮೊದಲ 100 ದಿನಗಳ ಸಾಧನೆ ಮತ್ತು ಗುರಿ ಬಿಚ್ಚಿಟ್ಟರು.ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅಮಿತ್‌ ಶಾ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲೇ 14 ವಲಯಗಳಲ್ಲಿ 15 ಲಕ್ಷ ಕೋಟಿ ರು. ಮೊತ್ತದ ನೀತಿಗಳನ್ನು ಜಾರಿಗೊಳಿಸಿದೆ.

 ಹೊಸ ಮೆಟ್ರೋ ರೈಲು ಸೇವೆ, ಕೈಗಾರಿಕಾ ಕಾರಿಡಾರ್‌, ವಯಸ್ಕರಿಗೆ ಆರೋಗ್ಯ ವಿಮೆ, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಕ್ರಮ, ರಫ್ತು ಉತ್ತೇಜನಕ್ಕೆ ಕ್ರಮ, ಉದ್ಯಮ ಸಾಲ ವಿತರಣೆ ಮಾಡಲಾಗಿದೆ ಎಂದರು. ಜೊತೆಗೆ ಒಂದು ದೇಶ ಒಂದು ಚುನಾವಣೆ, ಜನಗಣತಿ, ವಕ್ಫ್‌ ತಿದ್ದುಪಡಿ ಕಾಯ್ದೆ ಶೀಘ್ರವೇ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜನಗಣತಿ: ಕೊರೋನಾ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಜನಗಣತಿಯನ್ನು ಶೀಘ್ರವೇ ನಡೆಸಲಾಗುವುದು ಎಂದ ಅಮಿತ್‌ ಶಾ, ಜಾತಿಗಣತಿ ಬಗ್ಗೆ ಪ್ರಶ್ನಿಸಿದಾಗ, ಜನಗಣತಿ ಘೋಷಣೆ ವೇಳೆ ಎಲ್ಲಾ ಮಾಹಿತಿಯನ್ನೂ ನೀಡಲಾಗುವುದು ಎಂದು ನಿಗೂಢವಾಗಿ ಉತ್ತರ ನೀಡಿದರು.

ಏಕ ಚುನಾವಣೆ: ಲೋಕಸಭೆ, ವಿಧಾನಸಭೆಗೆ ದೇಶವ್ಯಾಪಿ ಒಂದೇ ಬಾರಿ ಚುನಾವಣೆ ನಡೆಸುವ ಗುರಿ ಹೊಂದಿರುವ ಒಂದು ದೇಶ, ಒಂದು ಚುನಾವಣೆ ನೀತಿ ಜಾರಿಗೆ ನಾವು ಬದ್ಧ. ಅದನ್ನು ಮೋದಿ 3.0 ಸರ್ಕಾರದ ಅವಧಿಯಲ್ಲೇ ಜಾರಿಗೊಳಿಸಲಾಗುವುದು. ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳ ವಿರೋಧದ ಕಾರಣಕ್ಕೆ ಸದ್ಯ ಸಂಸತ್ತಿನ ಜಂಟಿ ಸಮಿತಿ ಪರೀಶಿಲನೆ ನಡೆಸುತ್ತಿದೆ. ಮಸೂದೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಬಗೆಹರಿದು ಶೀಘ್ರದಲ್ಲಿ ವಕ್ಫ್ ಆಸ್ತಿ ರಕ್ಷಿಸುವ ಸಲುವಾಗಿ ಜಾರಿಗೆ ಕಾನೂನು ಬರಲಿದೆ ಎಂದರು.

ಮಣಿಪುರ ಶಾಂತಿಗೆ ಕ್ರಮ:  ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅಮಿತ್‌ ಶಾ ಹೇಳಿದರು.

ಕಳೆದ ವಾರದ 3 ದಿನ ಹೊರತುಪಡಿಸಿದರೆ ಮಣಿಪುರ ಬಹುತೇಕ ಶಾಂತಿಯುತವಾಗಿದೆ. ಮಾತುಕತೆ ಹೊರತಾಗಿ ಈ ಜನಾಂಗೀಯ ಸಂಘರ್ಷಕ್ಕೆ ಅಂತ್ಯಹಾಡುವುದು ಸಾಧ್ಯವಿಲ್ಲ. ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ನೀಲನಕ್ಷೆ ಸಿದ್ದಪಡಿಸಿದ್ದೇವೆ ಎಂದರು.

ಜೊತೆಗೆ ಮ್ಯಾನ್ಮಾರ್‌ನಿಂದ ಅಕ್ರಮ ವಲಸೆ ತಡೆಯಲು ಗಡಿಯಲ್ಲಿ ಬೇಲಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 30 ಕಿ.ಮೀ ವ್ಯಾಪ್ತಿಯಲ್ಲಿ ಬೇಲಿ ಹಾಕಲಾಗಿದೆ. ಒಟ್ಟು 1500 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಬೇಲಿ ಹಾಕಲಾಗುವುದು ಎಂದು ಹೇಳಿದರು.

ಹಲವು ರೈತ ಸ್ನೇಹಿ ಕ್ರಮ: ಮೊದಲ 100 ದಿನಗಳ ಅವಧಿಯಲ್ಲಿ ಕೃಷಿ ಉತ್ಪಾದಕತೆ ಮತ್ತು ರಫ್ತು ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಮುಖ್ಯವಾಗಿ 9.3 ಕೋಟಿ ರೈತರಿಗೆ 20000 ಕೋಟಿ ರು. ಪಿಎಂ ಕಿಸಾನ್ ನಿಧಿ ವಿತರಿಸಲಾಗಿದೆ. ಹೆಚ್ಚಿನ ಬೆಳಗಳನ್ನು ಕನಿಷ್ಠ ಬೆಂಬಲ ವ್ಯಾಪ್ತಿಗೆ ತರಲಾಗಿದೆ. ಮುಂಗಾರು ಬೆಳೆಗಳ ಖರೀದಿ ಬೆಲೆ ಹೆಚ್ಚಿಸಲಾಗಿದೆ. ಎಥೆನಾಲ್‌ ಹೆಚ್ಚಳಕ್ಕಾಗಿ ಸಕ್ಕರೆ ಕಾರ್ಖಾನೆಗಳನ್ನು ಮಲ್ಟಿ ಫೀಡ್‌ ಡಿಸ್ಟಿಲರಿಗಳಾಗಿ ಪರಿವರ್ತಿಸಲಾಗಿದೆ. ಜೊತೆಗೆ ರಫ್ತು ಹೆಚ್ಚಳಕ್ಕಾಗಿ ಸಕ್ಕರೆ ಮತ್ತು ಬಾಸುಮತಿ ಅಕ್ಕಿ ಮೇಲಿನ ಕನಿಷ್ಠ ರಫ್ತು ಬೆಲೆ ರದ್ದುಪಡಿಸಲಾಗಿದೆ ಎಂದು ಹೇಳಿದರು.

ಮಧ್ಯಮ ವರ್ಗ:  ಪುಣೆ, ಥಾಣೆ, ಬೆಂಗಳೂರಿನಲ್ಲಿ ಮೆಟ್ರೋಗೆ ₹30,700 ಕೋಟಿ, 12 ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆ, ₹7 ಲಕ್ಷದವರೆಗೆ ತೆರಿಗೆ ವಿನಾಯ್ತಿ, ಆಯುಷ್ಮಾನ್‌ ಯೋಜನೆಯಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಪ್ರತಿ ವರ್ಷ ₹5 ಲಕ್ಷ ವಿಮೆ, ಪಿಎಂ ಆವಾಸ್‌ ಯೋಜನೆಯಡಿ ಕೋಟಿ ಕುಟುಂಬಗಳಿಗೆ ಮನೆ, 3.5 ಲಕ್ಷ ಮನೆಗಳಿಗೆ ಸೋಲಾರ್, ಮುದ್ರಾ ಯೋಜನೆಯಲ್ಲಿ ₹20 ಲಕ್ಷ ರು. ನೆರವು ನೀಡಲಾಗಿದೆ ’ ಎಂದು ಅಮಿತ್‌ ಶಾ ಹೇಳಿದರು.

PREV

Recommended Stories

ಟ್ರಿಪಲ್‌ ಏರ್‌ಡಿಫೆನ್ಸ್‌ ಪರೀಕ್ಷೆ ಯಶಸ್ವಿ
ಗಗನಯಾನದ ಏರ್‌ಡ್ರಾಪ್‌ ಪರೀಕ್ಷೆ ಯಶಸ್ವಿ - ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯ