ವೈದ್ಯೆಯರ ನೈಟ್‌ ಶಿಫ್ಟ್‌: ದೀದಿ ಸರ್ಕಾರಕ್ಕೆ ಸುಪ್ರೀಂ ತರಾಟೆ

KannadaprabhaNewsNetwork |  
Published : Sep 18, 2024, 01:58 AM IST
ಸುಪ್ರೀಂ ಕೋರ್ಟ್ | Kannada Prabha

ಸಾರಾಂಶ

ಕೋಲ್ಕತಾದಲ್ಲಿ ನಡೆದ ವೈದ್ಯೆಯ ರೇಪ್‌ ಪ್ರಕರಣದ ಬಳಿಕ ‘ಸರ್ಕಾರಿ ಆಸ್ಪತ್ರೆಗಳು ಮಹಿಳಾ ವೈದ್ಯರಿಗೆ ರಾತ್ರಿ ಪಾಳಿ ನೀಡುವುದನ್ನು ಆದಷ್ಟು ನಿಲ್ಲಿಸಬೇಕು’ ಎಂಬ ಮಮತಾ ಬ್ಯಾನರ್ಜಿ ನೇತೃತ್ವದ ಪ.ಬಂಗಾಳ ಸರ್ಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ಗರಂ ಆಗಿದೆ.

ಪಿಟಿಐ ನವದೆಹಲಿ

ಕೋಲ್ಕತಾದಲ್ಲಿ ನಡೆದ ವೈದ್ಯೆಯ ರೇಪ್‌ ಪ್ರಕರಣದ ಬಳಿಕ ‘ಸರ್ಕಾರಿ ಆಸ್ಪತ್ರೆಗಳು ಮಹಿಳಾ ವೈದ್ಯರಿಗೆ ರಾತ್ರಿ ಪಾಳಿ ನೀಡುವುದನ್ನು ಆದಷ್ಟು ನಿಲ್ಲಿಸಬೇಕು’ ಎಂಬ ಮಮತಾ ಬ್ಯಾನರ್ಜಿ ನೇತೃತ್ವದ ಪ.ಬಂಗಾಳ ಸರ್ಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ಗರಂ ಆಗಿದೆ. ‘ವೈದ್ಯೆಯರಿಗೆ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಅದು ಬಿಟ್ಟು ರಾತ್ರಿ ಪಾಳಿ ಬೇಡ ಎಂಬ ಸೂಚನೆ ಸರಿಯೇ?’ ಎಂದು ಪ್ರಶ್ನಿಸಿದೆ.ವೈದ್ಯೆಯ ಅತ್ಯಾಚಾರ-ಕೊಲೆ ಕೇಸಿನ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ಅವರ ಪೀಠ, ‘ಮಹಿಳೆಯರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಅವರು ರಾತ್ರಿ ಪಾಳಿಯಿಂದ ವಿನಾಯ್ತಿ ಬೇಡುತ್ತಿಲ್ಲ. ಅವರು ರಾತ್ರಿ ಪಾಳಿ ಕೆಲಸಕ್ಕೆ ಸಿದ್ಧ. ಆದರೆ ನೀವು ಭದ್ರತೆ ನೀಡಬೇಕಷ್ಟೇ’ ಎಂದು ಚಾಟಿ ಬೀಸಿ ಅಧಿಸೂಚನೆ ತಿದ್ದುಪಡಿಗೆ ಸೂಚಿಸಿತು. ವಿಚಾರಣೆಯನ್ನು 1 ವಾರದ ಮಟ್ಟಿಗೆ ಮುಂದೂಡಿತು.ಸಿಬಿಐ ನಿದ್ರಿಸುತ್ತಿಲ್ಲ:

ಇದೇ ವೇಳೆ, ‘ಪ್ರಕರಣದ ಬಗ್ಗೆ ಈವರೆಗಿನ ತನಿಖೆಯ ಬಗ್ಗೆ ಸಿಬಿಐ ನೀಡಿದ ವರದಿ ಆಘಾತಕಾರಿ ಆಗಿದೆ. ಅದನ್ನು ಬಹಿರಂಗಪಡಿಸಿದರೆ ಮುಂದಿನ ತನಿಖೆಗೆ ಅಡ್ಡಿ ಆಗುತ್ತದೆ. ಸಿಬಿಐ ಏನೂ ನಿದ್ರಿಸುತ್ತಿಲ್ಲ. ತ್ವರಿತ ತನಿಖೆ ಮಾಡುತ್ತಿದೆ’ ಎಂದ ಪೀಠ, ಪ್ರಕರಣ ನಡೆದ ಆರ್‌ಜಿ ಕರ್‌ ಆಸ್ಪತ್ರೆಯ ಹಣಕಾಸು ಅಕ್ರಮದ ವಸ್ತುಸ್ಥಿತಿ ವರದಿ ನೀಡಲು ಸಿಬಿಐಗೆ ಸೂಚಿಸಿತು.ಹೆಸರು, ಚಿತ್ರ ತೆಗೆಯಿರಿ-ವಿಕಿಗೆ ಸೂಚನೆ:

ರೇಪ್‌ಗೆ ಒಳಗದ ವೈದ್ಯೆಯ ಹೆಸರು, ಫೋಟೋ ವಿಕಿಪಿಡಿಯಾದಲ್ಲಿದೆ ಎಂಬ ಮಾಹಿತಿ ಲಭಿಸಿದೆ. ಕೂಡಲೇ ಇದನ್ನು ತೆಗೆದು ಹಾಕಿ ಎಂದು ವಿಕಿಪಿಡಿಯಾಗೆ ಸೂಚಿಸಿತು.ನೇರಪ್ರಸಾರ ನಿಲ್ಲಿಸಿ ಎಂಬ ಸಿಬಲ್‌ ಕೋರಿಕೆಗೆ ನಕಾರ:

ಈ ನಡುವೆ ಮಮತಾ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿ, ‘ರೇಪ್‌ ಪ್ರಕರಣ ವಿಚಾರಣೆಯ ನೇರಪ್ರಸಾರ ಬೇಡ. ನಾನು ಸರ್ಕಾರದ ಪರ ವಾದ ಮಾಡುತ್ತಿರುವುದನ್ನು ಟೀವಿಯಲ್ಲಿ ನೋಡಿ ಕೆಲವರು ನನ್ನ ಕಚೇರಿಯ ಮಹಿಳಾ ವಕೀಲ ಸಿಬ್ಬಂದಿಗೆ ಅತ್ಯಾಚಾರ ಬೆದರಿಕೆ ಹಾಕುತ್ತಿದ್ದಾರೆ’ ಎಂದರು. ಅದರೆ ‘ಜನಹಿತ ಹಿತ ಅಡಗಿರುವ ಕಾರಣ ನೇರಪ್ರಸಾರ ನಿಲ್ಲಿಸಲಾಗದು’ ಎಂದ ಪೀಠ, ಮಹಿಳಾ ವಕೀಲರಿಗೆ ಭದ್ರತೆ ಕೊಡಿಸುವ ಭರವಸೆ ನೀಡಿತು.

==

ವೈದ್ಯರ ಬೇಡಿಕೆಗೆ ಮಣಿದ ದೀದಿ: 3 ಹಿರಿಯ ಅಧಿಕಾರಿಗಳ ಎತ್ತಂಗಡಿ

ಪಿಟಿಐ ಕೋಲ್ಕತಾವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧ 1 ತಿಂಗಳಿಂದ ಧರಣಿ ನಡೆಸುತ್ತಿರುವ ವೈದ್ಯರಿಗೆ ಪ.ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದ್ದು, ಕೋಲ್ಕತಾ ಪೊಲೀಸ್‌ ಆಯುಕ್ತ ಸೇರಿ 3 ಅಧಿಕಾರಿಗಳನ್ನು ಮಂಗಳವಾರ ಬದಲಿಸಿದೆ.ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪ ಹೊತ್ತಿದ್ದ ಪೊಲೀಸ್‌ ಆಯುಕ್ತ ವಿನೀತ್‌ ಗೋಯಲ್‌ರನ್ನು ಎತ್ತಂಗಡಿ ಮಾಡಿ ಹಿರಿಯ ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ವರ್ಮಾ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ. ಇನ್ನು ವೈದ್ಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ। ಕೌಸ್ತವ್‌ ನಾಯಕ್‌ ಹಾಗೂ ಆರೋಗ್ಯ ಇಲಾಖೆ ನಿರ್ದೇಶಕ ಡಾ। ದೇಬಾಶಿಷ್‌ ಹಲ್ದೇರ್‌ ಅವರನ್ನೂ ಎತತಂಗಡಿ ಮಾಡಿ ಇವರ ಸ್ಥಾನಕ್ಕೆ ಕ್ರಮವಾಗಿ ಡಾ। ಸುಪರ್ಣಾ ದತ್ತಾ ಹಾಗೂ ಡಾ। ಸ್ವಪನ್‌ ಸೊರೇನ್ ಅವರನ್ನು ನೇಮಿಸಲಾಗಿದೆ.ಈ ಮೂವರ ಎತ್ತಂಗಡಿಗೆ ವೈದ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಸೋಮವಾರ ರಾತ್ರಿ ಸಂಧಾನ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಒಪ್ಪಿದ್ದರು. ಆದಾಗ್ಯೂ ಎತ್ತಂಗಡಿ ಆದೇಶ ಪ್ರಕಟ ಆದ ಬಳಿಕ ಮಾತ್ರ ಮುಷ್ಕರ ಕೈಬಿಡುವುದಾಗಿ ವೈದ್ಯರು ಹೇಳಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ