ರೈತರಿಂದ ನೇರವಾಗಿ ತೊಗರಿ ಖರೀದಿಗೆ ವೆಬ್‌ಸೈಟ್‌ ಆರಂಭ

KannadaprabhaNewsNetwork |  
Published : Jan 05, 2024, 01:45 AM ISTUpdated : Jan 05, 2024, 03:02 PM IST
amith shah

ಸಾರಾಂಶ

ಕೇಂದ್ರ ಸರ್ಕಾರವು ರೈತರಿಂದ ನೇರವಾಗಿ ತೊಗರಿ ಖರೀದಿಗೆ ವೆಬ್‌ಸೈಟ್‌ ಆರಂಭಿಸಿದ್ದು, ಇದರ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ.

ಪಿಟಿಐ ನವದೆಹಲಿ 

ಕನಿಷ್ಠ ಬೆಂಬಲ ಬೆಲೆ ಅಥವಾ ಮಾರುಕಟ್ಟೆ ದರದಡಿ ರೈತರಿಂದ ನೇರವಾಗಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಹೊಸ ವೆಬ್‌ಸೈಟ್‌ ಆರಂಭಿಸಿದೆ. ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಗುರುವಾರ ತೊಗರಿ ಖರೀದಿಗೆ www.esamridhi.in ಪೋರ್ಟಲ್‌ ಲೋಕಾರ್ಪಣೆ ಮಾಡಿದರು. 

ಇದರಿಂದ ತೊಗರಿ ಹೆಚ್ಚು ಬೆಳೆವ ಕರ್ನಾಟಕದ ಕಲಬುರಗಿ ರೈತರಿಗೆ ಅನುಕೂಲವಾಗಲಿದೆ.ಆಹಾರ ಭದ್ರತೆಗಾಗಿ ಹೆಚ್ಚುವರಿ ದಾಸ್ತಾನು ಮಾಡಲು ಕೇಂದ್ರ ಸರ್ಕಾರ ಈ ಪೋರ್ಟಲ್‌ ಮೂಲಕ ರೈತರಿಂದ ತೊಗರಿ ಖರೀದಿಸಲಿದೆ. ರೈತರು ಇದರಲ್ಲಿ ನೋಂದಣಿ ಮಾಡಿಕೊಂಡು ಸರ್ಕಾರಿ ಸ್ವಾಮ್ಯದ ನಾಫೆಡ್‌ ಅಥವಾ ಎನ್‌ಸಿಸಿಎಫ್‌ಗೆ ಕನಿಷ್ಠ ಬೆಂಬಲ ಬೆಲೆ ಅಥವಾ ಮಾರುಕಟ್ಟೆ ಬೆಲೆ ಇವುಗಳಲ್ಲಿ ಯಾವುದು ಹೆಚ್ಚಿದೆಯೋ ಆ ಬೆಲೆಗೆ ತಮ್ಮ ತೊಗರಿಯನ್ನು ಮಾರಾಟ ಮಾಡಬಹುದು. ಅದರ ಹಣವು ರೈತರ ಬ್ಯಾಂಕ್‌ ಖಾತೆಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಸಂದಾಯವಾಗಲಿದೆ. ಪೋರ್ಟಲ್‌ ಲೋಕಾರ್ಪಣೆ ಮಾಡಿದ ಅಮಿತ್‌ ಶಾ ಡಿಬಿಟಿ ಅಡಿ 25 ತೊಗರಿ ಬೆಳೆಗಾರರಿಗೆ 68 ಲಕ್ಷ ರು.ಗಳನ್ನು ವರ್ಗಾವಣೆ ಮಾಡಿದರು. 

ದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಜಾರ್ಖಂಡ್‌ ಮತ್ತು ಗುಜರಾತ್‌ನಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಇಲ್ಲಿನ ರೈತರಿಗೆ ಸರ್ಕಾರದ ಈ ಪೋರ್ಟಲ್‌ನಿಂದ ಅನುಕೂಲವಾಗಲಿದೆ. ‘ಸದ್ಯ ತೊಗರಿ ಸೇರಿದಂತೆ ಅನೇಕ ಬೇಳೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. 2014ರಲ್ಲಿ 19.2 ದಶಲಕ್ಷ ಟನ್‌ ಇದ್ದ ದೇಸಿ ತೊಗರಿ ಉತ್ಪಾದನೆಯು ಬೆಂಬಲ ಬೆಲೆ ದ್ವಿಗುಣಗೊಳಿಸಿದ್ದರ ಪರಿಣಾಮ 2023ರಲ್ಲಿ 26 ದಶಲಕ್ಷ ಟನ್‌ಗೆ ಏರಿಕೆಯಾಗಿದ್ದರೂ ಸ್ವಾವಲಂಬನೆ ಸಾಧ್ಯವಾಗಿಲ್ಲ. 

2027ಕ್ಕೆ ಬೇಳೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. 2028ರ ಜನವರಿಯಿಂದ ಒಂದೇ ಒಂದು ಕೆ.ಜಿ. ಬೇಳೆಕಾಳನ್ನೂ ನಾವು ಆಮದು ಮಾಡಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಮೆಕ್ಕೆಜೋಳ, ಚನ್ನಂಗಿ ಬೇಳೆ, ಉದ್ದು ಮುಂತಾದ ಬೇಳೆಗಳನ್ನು ಖರೀದಿಸುವುದಕ್ಕೂ ಪೋರ್ಟಲ್‌ ಬಿಡುಗಡೆ ಮಾಡಲಾಗುವುದು’ ಎಂದು ಅಮಿತ್‌ ಶಾ ಹೇಳಿದರು.

ರೈತರು ತೊಗರಿ ಮಾರುವುದು ಹೇಗೆ? 

ಸದ್ಯ ಕನಿಷ್ಠ ಬೆಂಬಲ ಬೆಲೆಯಡಿ ಕೇಂದ್ರ ಸರ್ಕಾರ ದೇಶದ ಬೇರೆ ಬೇರೆ ಕಡೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ತೊಗರಿ ಖರೀದಿಸುತ್ತಿದೆ. ಇನ್ನುಮುಂದೆ ರೈತರು ತೊಗರಿ ಬೆಳೆಯುವುದಕ್ಕೂ ಮೊದಲೇ ಪ್ರಾಥಮಿಕ ಕೃಷಿ ಕ್ರೆಡಿಟ್‌ ಸೊಸೈಟಿ ಅಥವಾ ಕೃಷಿ ಉತ್ಪಾದಕ ಕೇಂದ್ರಗಳ ಮೂಲಕ www.esamridhi.in ವೆಬ್‌ಸೈಟಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬೆಳೆ ಬಂದ ಮೇಲೆ ನಾಫೆಡ್‌ ಅಥವಾ ಎನ್‌ಸಿಸಿಎಫ್‌ಗೆ ಈ ಪೋರ್ಟಲ್‌ನಲ್ಲೇ ಮಾರಾಟ ಮಾಡಬಹುದು. ಮಧ್ಯವರ್ತಿಗೆ ಅವಕಾಶವಿಲ್ಲದಂತೆ ಹಣ ನೇರವಾಗಿ ರೈತರ ಖಾತೆಗೆ ವರ್ಗಾವಣೆಯಾಗುತ್ತದೆ. ಇಲ್ಲಿ ನೋಂದಣಿ ಮಾಡಿಕೊಂಡ ಮೇಲೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿರುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ