;Resize=(412,232))
ಖೈರಾಗಢ(ಛತ್ತಿಸ್‌ಗಢ): ದೇಶದಲ್ಲಿ ಮೀಸಲಾತಿಯು ಶಾಶ್ವತವಾಗಿರಲಿದ್ದು, ಬಿಜೆಪಿಯೂ ಎಂದಿಗೂ ಅದನ್ನು ತೆಗೆಯುವುದಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಅದನ್ನು ತೆಗೆಯಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಹುಟ್ಟಿದ ದಿನದಂದು ನಾವು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ. ಅವರ ಆಶಯದಂತೆ ಆದಿವಾಸಿಗಳು, ಮಹಿಳೆಯರು, ದಲಿತರನ್ನು ಶೋಷಣೆಯಿಂದ ಪಾರು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಾನು ಕೇಂದ್ರ ಸರ್ಕಾರದಲ್ಲಿ ಎಂದಿಗೂ ಮೀಸಲಾತಿಯನ್ನು ತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಆದರೆ ಕಾಂಗ್ರೆಸ್ ಪಕ್ಷವು ಸದಾ ಸುಳ್ಳನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದು, ಸಂವಿಧಾನ ಬದಲಿಸಿ ಮೀಸಲಾತಿಯನ್ನು ರದ್ದು ಮಾಡುವುದಾಗಿ ಸುಳ್ಳುಸುದ್ದಿ ಹಬ್ಬಿಸುತ್ತಿದೆ’ ಎಂದು ಕಿಡಿ ಕಾರಿದರು.
ಬಿಜೆಪಿ 400 ಸೀಟು ಗೆದ್ದರೆ ಸಂವಿಧಾನ ಬದಲಿಸಲಿದೆ ಎಂದು ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದರು. ಆಗಿನಿಂದ ಮೀಸಲು ಕೂಡ ರದ್ದಾಗಬಹುದು ಎಂಬ ಗುಲ್ಲು ದೇಶದಲ್ಲಿ ಹರಡಿದೆ.
ನಕ್ಸಲರ ನಿರ್ಮೂಲನೆ:
ಇದೇ ವೇಳೆ ಮಾತನಾಡುತ್ತಾ, ‘ಪ್ರಧಾನಿ ಮೋದಿಗೆ ಮೂರನೇ ಬಾರಿ ಅಧಿಕಾರ ನೀಡಿದರೆ ಮೂರು ವರ್ಷಗಳಲ್ಲಿ ನಕ್ಸಲರ ಉಪಟಳವನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತಾರೆ. ಈಗಾಗಲೇ ಮಾವೋವಾದಿಗಳ ಅಟ್ಟಹಾಸವನ್ನು ಬಿಜೆಪಿ ನಿರ್ಮೂಲನೆ ಮಾಡಿದ್ದು, ಅತ್ಯಲ್ಪ ಪ್ರಮಾಣದಲ್ಲಿ ಉಳಿದುಕೊಂಡಿರುವ ನಕ್ಸಲರನ್ನೂ ನಿರ್ಮೂಲನೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.
ಅಂಬೇಡ್ಕರ್ ಹುಟ್ಟಿದ ದಿನವೂ ಕೈ ಸುಳ್ಳಾಟಅಂಬೇಡ್ಕರ್ ಅವರ ಹುಟ್ಟಿದ ದಿನದಂದು ಎಲ್ಲರೂ ಸಂವಿಧಾನವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಿದ್ದರೆ ಕಾಂಗ್ರೆಸ್ ಪಕ್ಷ ಮಾತ್ರ ಸುಳ್ಳುಗಳನ್ನು ಹರಡುವುದರಲ್ಲಿ ಬ್ಯುಸಿಯಾಗಿದೆ. ಮೋದಿ 3ನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ.- ಅಮಿತ್ ಶಾ, ಕೇಂದ್ರ ಗೃಹ ಸಚಿವ