ನಾಲ್ಕೂ ನಿಗಮಗಳ ಮುಷ್ಕರ : ನಾಳೆ ಬಸ್‌ ಸೇವೆ ಇರುತ್ತಾ? ಇರಲ್ವಾ ?

KannadaprabhaNewsNetwork |  
Published : Aug 04, 2025, 12:15 AM ISTUpdated : Aug 04, 2025, 02:18 AM IST
ಬಸ್‌  | Kannada Prabha

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆ.5ರಿಂದ ಕರೆ ನೀಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ.

  ಬೆಂಗಳೂರು :  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆ.5ರಿಂದ ಕರೆ ನೀಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ.

ವೇತನ ಹೆಚ್ಚಳ ಹಾಗೂ ವೇತನ ಹೆಚ್ಚಳ ಹಿಂಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.5ರಂದು (ಮಂಗಳವಾರ) ಬೆಳಗ್ಗೆ 6 ಗಂಟೆಯಿಂದ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರು ಮುಷ್ಕರ ಹೂಡುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮನವೊಲಿಕೆಗೆ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಹೀಗಾಗಿ ಸೋಮವಾರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಸಂಘಟನೆ ಜತೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ವೇತನ ಹೆಚ್ಚಳ ಹಾಗೂ ವೇತನ ಹಿಂಬಾಕಿ ಪಾವತಿ ಬೇಡಿಕೆಗೆ ಸ್ಪಂದಿಸುವ ಸಾಧ್ಯತೆ ಕಡಿಮೆ. ಬದಲಿಗೆ ಸಣ್ಣ ಮಟ್ಟದ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ.

ಒಂದು ವೇಳೆ ಮುಖ್ಯಮಂತ್ರಿಗಳ ಮನವೊಲಿಕೆಗೂ ಒಪ್ಪದೆ ಮುಷ್ಕರ ಹೂಡಿದರೆ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರಿಗೆ ವೇತನ ಪಾವತಿಸದಿರಲು ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳು ನಿರ್ಧರಿಸಿವೆ. ಇದರ ಜತೆಗೆ ಸಾರಿಗೆ ಸೇವೆ ಸಾರ್ವಜನಿಕ ಉಪಯುಕ್ತ ಸೇವೆಯಡಿ ಬರುವ ಕಾರಣ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿ ಮಾಡಲು ಸೋಮವಾರದ ಸಭೆಯಲ್ಲಿ ನಿರ್ಧಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ವಿಫಲವಾದರೆ ಸಾರಿಗೆ ಸೇವೆ ವ್ಯತ್ಯಯ:

ಸಂಧಾನ ಸಭೆ ವಿಫಲವಾದರೆ ಆ.5 ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿವರೆಗೆ ಮುಷ್ಕರ ಶುರುವಾಗುವ ಸಾಧ್ಯತೆಯಿದೆ. ಹೀಗಾದರೆ 23,000 ಬಸ್ಸುಗಳ ಸೇವೆ ಅಲಭ್ಯವಾಗಲಿದೆ. ಬಿಎಂಟಿಸಿಯ 7000 ಬಸ್ಸು, 8,000 ಕೆಎಸ್‌ಆರ್‌ಟಿಸಿ ಬಸ್ಸು ಇತರೆ ನಿಗಮಗಳ ಏಳು ಸಾವಿರ ಬಸ್ಸು ಸೇರಿ 23,000 ಬಸ್ಸು ಹಾಗೂ 1.2 ಲಕ್ಷ ಮಂದಿ ಸೇವೆಗೆ ಅಲಭ್ಯರಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಸಾರಿಗೆ ಇಲಾಖೆಯು ಖಾಸಗಿ ಬಸ್ಸುಗಳ ನೆರವು ಪಡೆಯುವ ಬಗ್ಗೆ ಚರ್ಚಿಸಿದ್ದು, ಅವರು ನೆರವಾಗುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಸಭೆ ಬಗ್ಗೆಯೂ ಅಪಸ್ವರ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಸಭೆ ಬಗ್ಗೆಯೂ ಕೆಎಸ್ಆರ್‌ಟಿಸಿ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಮುಖರು ಅಪಸ್ವರ ಎತ್ತಿದ್ದಾರೆ. ಸಭೆಗೆ ಕೇವಲ 30 ನಿಮಿಷ ಕಾಲಾವಕಾಶ ನೀಡಿದ್ದು, ಇಷ್ಟು ಸಮಯದಲ್ಲಿ ನೌಕರರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಘಟನೆಯೊಂದಿಗೂ ಸಿದ್ದರಾಮಯ್ಯ ಅವರು ಸಭೆ ನಡೆಸುವ ಬಗ್ಗೆ ಅಪಸ್ವರ ಕೇಳಿ ಬಂದಿದೆ.

- ವೇತನ ಹೆಚ್ಚಳ ಹಾಗೂ ವೇತನ ಹೆಚ್ಚಳ ಹಿಂಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರಿಂದ ಮುಷ್ಕರಕ್ಕೆ ಕರೆ

- ಮಂಗಳವಾರ ಬೆಳಗ್ಗೆ 6ರಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜು. ಕೆಎಸ್ಸಾರ್ಟಿಸಿಯ 8000, ಬಿಎಂಟಿಸಿಯ 7000 ಬಸ್‌ ಭಾಗಿ

- ನಾಲ್ಕೂ ನಿಗಮಗಳಿಂದ ಒಟ್ಟು 23 ಸಾವಿರ ಬಸ್‌ಗಳು ರಸ್ತೆಗಿಳಿಯುವುದು ಅನುಮಾನ. 1.2 ಲಕ್ಷ ಕಾರ್ಮಿಕರಿಂದ ಹೋರಾಟ

- ವೇತನ ಕಟ್‌, ಎಸ್ಮಾ ಜಾರಿ ಬೆದರಿಕೆಗೂ ಬಗ್ಗುತ್ತಿಲ್ಲ ನೌಕರರು. ಸಿದ್ದರಾಮಯ್ಯ ಇಂದು ನಡೆಸುವ ಸಭೆ ಬಗ್ಗೆ ಕುತೂಹಲ

PREV
Read more Articles on

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ