ಚೆನ್ನೈ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳಿನ ಖ್ಯಾತ ನಟ ಮದನ್ ಬಾಬ್ ಅವರು ಚೆನ್ನೈನ ಅಡ್ಯಾರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ನಿಜವಾದ ಹೆಸರು ಎಸ್. ಕೃಷ್ಣಮೂರ್ತಿ. ಆದರೆ ಚಿತ್ರರಂಗದಲ್ಲಿ ಮದನ್ ಬಾಬ್ ಎಂದೇ ಜನಪ್ರಿಯರಾಗಿದ್ದರು. ಕಮಲ್ ಹಾಸನ್, ರಜನಿಕಾಂತ್, ಅಜಿತ್, ಸೂರ್ಯ, ವಿಜಯ್ ಸೇರಿದಂತೆ ಖ್ಯಾತ ನಟರ ಜೊತೆ ಅಭಿನಯಿಸಿದ್ದರು. ಮಾತ್ರವಲ್ಲದೇ ಸನ್ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಸಥ ಪೋವತು ಯಾರು?’ ಹಾಸ್ಯ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ತೆನಾಲಿ ಸಿನಿಮಾದಲ್ಲಿ ಡೈಮಂಡ್ ಬಾಬು, ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುದರ್ಶನ್ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದರು.
ರಾಜ್ ಠಾಕ್ರೆ ಕರೆ ಬಳಿಕ ಡಾನ್ಸ್ ಬಾರ್‌ಗೆ ಬೆಂಬಲಿಗರ ದಾಳಿ
ಥಾಣೆ: ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಕಾರ್ಯಕರ್ತರ ಪುಂಡಾಟ ಮುಂದುವರೆದಿದ್ದು, ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಕರೆಯಿಂದ ಪ್ರೇರಿತರಾಗಿ ಥಾಣೆ ಡಾನ್ಸ್ ಬಾರ್ ಮೇಲೆ ದಾಳಿ ಮಾಡಿದ್ದಾರೆ.ಠಾಕ್ರೆ ಇತ್ತೀಚೆಗೆ ‘ಶಿವಾಜಿ ಮಹಾರಾಜರ ನಾಡು ರಾಯಗಡದಲ್ಲಿ ಡಾನ್ಸ್ ಬಾರ್ ಬೇಡ’ ಎಂದಿದ್ದರು. ಇದರಿಂದ ಪ್ರೇರಿತರಾಗಿ ಥಾಣೆ ನೈಟ್‌ರೈಡರ್ಸ್ ಬಾರ್‌ಗೆ ನುಗ್ಗಿದ ಕಾರ್ಯಕರ್ತರು ಪೀಠೋಪಕರಣ ಧ್ವಂಸ ಮಾಡಿ, ಮದ್ಯದ ಬಾಟಲಿಗಳನ್ನು ಒಡೆದು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಮಾಡಿದ್ದಾರೆ.
ಘಟನೆಯ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ಅಮೆರಿಕದಲ್ಲಿ ಅಪಘಾತಕ್ಕೆ ಭಾರತೀಯ ಕುಟುಂಬವೇ ಬಲಿ
ನ್ಯೂಯಾರ್ಕ್: ನ್ಯೂಯಾರ್ಕ್‌ನ ಬಫೆಲೋದಿಂದ ಪಶ್ಚಿಮ ವರ್ಜಿನಿಯಾದ ದೇವಸ್ಥಾನಕ್ಕೆ ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಭಾರತೀಯ ಹಿರಿಯ ನಾಗರಿಕರು ಮಾರ್ಗಮಧ್ಯೆ ಸಂಭವಿಸಿದ ಭೀಕರ ಕಾರು ಅಪಘಾತಕ್ಕೆ ಬಲಿಯಾಗಿದ್ದಾರೆ.
ಆಶಾ ದಿವಾನ್ (85), ಕಿಶೋರ್ ದಿವಾನ್(89), ಶೈಲೇಶ್ ದಿವಾನ್ (86), ಗೀತಾ ದಿವಾನ್ (84) ಜುಲೈ ಕೊನೇ ವಾರ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ನಾಪತ್ತೆಯಾಗಿದ್ದರು. ಜು.29 ರಂದು ಪೆನ್ಸಿಲ್ವೇನಿಯಾದ ರೆಸ್ಟೋರೆಂಟ್‌ನಲ್ಲಿ ಕಡೆಯದಾಗಿ ಅವರ ಚಲನವಲನ ಕಂಡು ಬಂದಿತ್ತು. ಹೀಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಶನಿವಾರ ನಾಲ್ವರು ಭೀಕರ ಕಾರು ಅಪಘಾತಕ್ಕೆ ಬಲಿಯಾಗಿರುವ ಮಾಹಿತಿ ತಿಳಿದಿದೆ. ಮಾರ್ಷಲ್ ಕೌಂಟಿಯ ಬಿಗ್ ವೀಲಿಂಗ್ ಕ್ರೀಕ್ ರಸ್ತೆಯಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ನಿತಿನ್ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಒಬ್ಬನ ಬಂಧನ
ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.‘ವ್ಯಕ್ತಿ ಪೊಲೀಸ್ ನಿಯಂತ್ರಣ ಕೊಠಡಿಗೆ 112 ಸಂಖ್ಯೆಗೆ ಬೆಳಿಗ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ತನಿಖೆ ಕೈಗೊಂಡ ಅಧಿಕಾರಿಗಳು ಸಕ್ಕರದಾರಾ ನಗರದ ಉಮೇಶ್ ವಿಷ್ಣು ರಾವುತ್ ಹೆಸರಿನಲ್ಲಿ ಕರೆ ಬಂದಿದೆ ಎಂದು ಪತ್ತೆ ಮಾಡಿದ್ದಾರೆ. ಬಳಿಕ ಲೊಕೇಶನ್ ಆಧರಿಸಿ ರಾವುತ್‌ನನ್ನು ಬಂಧಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದೊಂದು ಹುಸಿ ಬಾಂಬ್ ಕರೆ ಎಂದು ಪತ್ತೆಯಾಗಿದ್ದು ರಾವುತ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಹೇಳಿದ್ದಾರೆ.
50 ವರ್ಷಗಳ ರಿಜಿಸ್ಟರ್ಡ್ ಪೋಸ್ಟ್ ಸೇವೆ ಸೆ.1ಕ್ಕೆ ಅಂತ್ಯ
ನವದೆಹಲಿ: ಭಾರತೀಯ ಅಂಚೆ ಇಲಾಖೆ ತನ್ನ ‘ಐಕಾನಿಕ್’ ರಿಜಿಸ್ಟರ್ಡ್ ಅಂಚೆ ಸೇವೆಯನ್ನು ಸೆ.1ರಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಈ ಮೂಲಕ 50 ವರ್ಷಗಳ ರಿಜಿಸ್ಟರ್ಡ್ ಪೋಸ್ಟ್ ಯುಗದ ಅಂತ್ಯವಾಗಲಿದೆ. ಇದನ್ನು ನೇಮಕ ಪತ್ರ, ಕಾನೂನು ಕಾಗದಪತ್ರ, ಸರ್ಕಾರಿ ಪತ್ರ ವ್ಯವಹಾರದಂತಹ ಪ್ರಮುಖ ಅಂಚೆಗಳ ರವಾನೆಗೆ ಬಳಸಲಾಗುತ್ತಿತ್ತು. ಆದರೆ ಖಾಸಗಿ ಕೊರಿಯರ್‌ಗಳು ಮತ್ತು ಇ-ಕಾಮರ್ಸ್ ಅಬ್ಬರದ ನಡುವೆ ಇದಕ್ಕೆ ಬೇಡಿಕೆ ಶೇ.25ರಷ್ಟು ಕುಸಿತವಾಗಿದೆ. ಹೀಗಾಗಿ ಸೆ.1ರಿಂದ ಇದನ್ನು ಸ್ಪೀಡ್‌ಪೋಸ್ಟ್ ಜತೆ ವಿಲೀನ ಮಾಡಲಾಗುತ್ತದೆ.