ನವದೆಹಲಿ : ಇಷ್ಟು ದಿನ ವಿಮಾನದಲ್ಲಿ ಕಪಾಳಮೋಕ್ಷ, ಜಗಳ- ಈ ರೀತಿಯ ಗಲಾಟೆ ನೋಡಿದ್ದವು. ಈಗ ವಿಮಾನ ನಿಲ್ದಾಣದಲ್ಲಿ ಇಂಥ ಘಟನೆ ನಡೆದಿದೆ. ಹೆಚ್ಚುವರಿ ಲಗೇಜ್ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಸೇನಾಧಿಕಾರಿ ಕ। ರಿತೇಶ್ ಸಿಂಗ್ ಎಂಬುವವರು, ನಾಲ್ವರು ಸ್ಟೈಸ್‌ಜೆಟ್ ಸಿಬ್ಬಂದಿಯನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಘಟನೆಯಲ್ಲಿ ಸಿಬ್ಬಂದಿ ಗಾಯಗೊಂಡಿದ್ದು, ಸೇನಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಲವು ಸ್ಪೈಸ್‌ಜೆಟ್ ಸಿಬ್ಬಂದಿ ವಿರುದ್ಧವೂ ಪ್ರಕರನ ದಾಖಲಿಸಲಾಗಿದೆ.ಜುಲೈ 26 ರಂದು ಶ್ರೀನಗರದಿಂದ ದೆಹಲಿಗೆ ಹೊರಟಿದ್ದ ಸ್ಟೈಸ್ ಜೆಟ್ ವಿಮಾನ ಬೋರ್ಡಿಂಗ್ ಗೇಟ್ ಎಸ್‌ಜಿ- 386ರಲ್ಲಿ ಈ ಘಟನೆ ನಡೆದಿದ್ದು, ಸ್ಪೈಸ್‌ಜೆಟ್ ಅಧಿಕೃತ ಪ್ರಕಟಣೆ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಮೊಬೈಲ್‌ನಲ್ಲಿ ಚಿತ್ರೀಕರಣಗೊಂಡಿದ್ದು, ವೈರಲ್ ಆಗಿದೆ.
ಆಗಿದ್ದೇನು?:
ಕ। ರಿತೇಶ್ ಸಿಂಗ್ 16 ಕೇಜಿಯ 2 ಲಗೇಜ್ ತಂದಿದ್ದರು. ಇದು ವಿಮಾನಯಾನ ಸಂಸ್ಥೆ ನಿಗದಿ ಪಡಿಸಿರುವ 7 ಕೇಜಿ ಲಗೇಜ್‌ಗಿಂತಲೂ ದುಪ್ಪಟ್ಟು. ಹೀಗಾಗಿ ಹೆಚ್ಚುವರಿ ಲಗೇಜ್‌ಗೆ ಹಣ ಪಾವತಿಸುವಂತೆ ಕ। ಸಿಂಗ್ ಬಳಿ ಸಿಬ್ಬಂದಿ ಮನವಿ ಮಾಡಿದ್ದಾರೆ. ಆದರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಮಾತ್ರವಲ್ಲದೇ ಶಿಷ್ಟಾಚಾರ ಉಲ್ಲಂಘಿಸಿ ಏರೋಬ್ರಿಡ್ಜ್ ಹತ್ತಲು ಪ್ರಯತ್ನಿಸಿದ್ದಾರೆ. ಆಗ ಸಿಐಎಸ್‌ಎಫ್ ಅಧಿಕಾರಿಯು ಅವರನ್ನು ಹಿಂದಕ್ಕೆ ಕಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ನಾಲ್ವರು ಸಿಬ್ಬಂದಿ ಮೇಲೆ, ಅಲ್ಲೇ ಇದ್ದ ಕ್ಯೂ ಸ್ಟ್ಯಾಂಡ್ ಎತ್ತಿಕೊಂಡು ಹಲ್ಲೆ ನಡೆಸಿದ್ದಾರೆ.
ಸಿಬ್ಬಂದಿ ದವಡೆಗೆ ಗಾಯ : ಏಟಿನ ತೀವ್ರತೆಗೆ ಒಬ್ಬ ಸ್ಪೈಸ್‌ಜೆಟ್ ಸಿಬ್ಬಂದಿ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದರೆ, ಇನ್ನೊಬ್ಬ ಸಿಬ್ಬಂದಿ ದವಡೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಆಗಿದೆ. ಒಬ್ಬ ಸಿಬ್ಬಂದಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಆದರೂ ಹಲ್ಲೆ ಮಾಡುವುದನ್ನು ಮುಂದುವರೆಸಿದ ಅಧಿಕಾರಿ, ಮೂರ್ಛೆ ತಪ್ಪಿದ ಮೇಲೆಯೂ ಹೊಡೆದ ಆರೋಪ ಕೇಳಿ ಬಂದಿದೆ. ಜೊತೆಗೆ ಥಳಿತಕ್ಕೊಳಗಾದವರ ಸಹಾಯಕ್ಕೆ ಬಂದ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಿದ್ದು ಪರಿಣಾಮ ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವ ಆಗಿದೆ.
ಸೇನಾಧಿಕಾರಿ ಹಲ್ಲೆ ನಡೆಸುತ್ತಿರುವ ವಿಡಿಯೋ ಜಾಲತಾಣದಲ್ಲಿ ಸೆರೆಯಾಗಿದೆ.
ಎಫ್‌ಐಆರ್ ದಾಖಲು, ನಿಷೇಧಕ್ಕೆ ಚಿಂತನೆ:ಈ ಸಂಬಂಧ ಸೇನಾಧಿಕಾರಿ ಕ। ರಿತೇಶ್ ಸಿಂಗ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅವರ ಬಂಧನದ ಬಗ್ಗೆ ಇನ್ನು ಖಚಿತವಾಗಿಲ್ಲ. ಹಲ್ಲೆ ನಡೆಸಿದ ವ್ಯಕ್ತಿ ವಿರುದ್ಧ ಕಠಿಣ ಕ್ರಮಕ್ಕೆ ಸ್ಟೈಸ್ ಜೆಟ್ ಮುಂದಾಗಿದ್ದು , ಹಾರಾಟ ನಿಷೇಧ ಶಿಕ್ಷೆ ವಿಧಿಸಲು ಚಿಂತನೆ ನಡೆಸಿದೆ. ಮಾತ್ರವಲ್ಲದೇ ನಾಗರಿಕ ವಿಮಾನಯಾನ ಸಿಬ್ಬಂದಿಗೆ ಪತ್ರ ಬರೆದು ಘಟನೆ ಬಗ್ಗೆ ಮಾಹಿತಿ ನೀಡಿದೆ.