ಅಮರಾವತಿ: ರೈತರ ಹೋರಾಟಕ್ಕೆ ಮಣಿದು, ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್ ಸ್ಥಾಪನೆಗಾಗಿ ದೇವನಹಳ್ಳಿಯ 1,777 ಎಕರೆ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟ ಬೆನ್ನಲ್ಲೇ, ಇದೇ ಅವಕಾಶವನ್ನು ತನ್ನ ಲಾಭಕ್ಕೆ ತಿರುಗಿಸಿಕೊಳ್ಳಲು ಆಂಧ್ರಪ್ರದೇಶ ಸರ್ಕಾರ ಕಸರತ್ತು ಆರಂಭಿಸಿದೆ.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್, ‘ನಮ್ಮ ರಾಜ್ಯದಲ್ಲೇ- ಅದರಲ್ಲೂ ಬೆಂಗಳೂರಿಗೆ ಸನಿಹದಲ್ಲೇ- ಜಮೀನು ನಾವು ಸಿದ್ಧವಿದ್ದು, ಅಲ್ಲಿಯೇ ಹೂಡಿಕೆ ಮಾಡಿ’ ಎಂದು ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ‘ಕರ್ನಾಟಕ ಭೂಸ್ವಾಧೀನ ಕೈಬಿಟ್ಟಿದೆ’ ಎಂಬ ವರದಿ ಲಗತ್ತಿಸಿ ಪೋಸ್ಟ್ ಮಾಡಿರುವ ಅವರು, ‘ಆತ್ಮೀಯ ಏರೋಸ್ಪೇಸ್ ಉದ್ಯಮಿಗಳೇ, ಈ ವಿಷಯ (ಕರ್ನಾಟಕ ಸರ್ಕಾರದ ವಿಷಯ) ತಿಳಿದು ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಐಡಿಯಾ ಇದೆ. ನೀವು ಆಂಧ್ರ ಪ್ರದೇಶದತ್ತ ಏಕೆ ನೋಡಬಾರದು? ಅತ್ಯುತ್ತಮ ಪ್ರೋತ್ಸಾಹ ಧನ ಮತ್ತು 8,000 ಎಕರೆಗಳಿಗೂ ಹೆಚ್ಚು ಬಳಕೆಗೆ ಸಿದ್ಧವಾದ ಭೂಮಿಯನ್ನು (ಬೆಂಗಳೂರಿನ ಹೊರಗೆ) ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು ನಾವು ಹೊಂದಿದ್ದೇವೆ! ಈ ಬಗ್ಗೆ ಚರ್ಚೆ ಮಾಡಲು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು ಆಶಿಸುತ್ತೇವೆ’ ಎಂದಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದೇವನಹಳ್ಳಿ ತಾಲೂಕಿನಲ್ಲಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ತಮ್ಮ ಸರ್ಕಾರ ಕೈಬಿಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಲೋಕೇಶ್ ಉದ್ಯಮಿಗಳಿಗೆ ಈ ಆಹ್ವಾನ ನೀಡಿದ್ದಾರೆ.
ಆಂಧ್ರದ ಗಾಳ ಮೊದಲಲ್ಲ:
ಇದಕ್ಕೂ ಮೊದಲು ಬೆಂಗಳೂರಿನ ಎಚ್‌ಎಎಲ್ ವಿಸ್ತರಿತ ಘಟಕವನ್ನು ಆಂಧ್ರಪ್ರದೇಶದಲ್ಲಿ ಸ್ಥಾಪಿಸುವಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರಕ್ಕೆ ಲಾಬಿ ಮಾಡಲು ಮುಂದಾಗಿದ್ದರು ಎನ್ನಲಾಗಿತ್ತು. ಅದು ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಅವರ ಪುತ್ರನೂ ಅದೇ ತಂತ್ರಕ್ಕೆ ಮುಂದಾಗಿದ್ದಾರೆ.