ತಮಿಳ್ನಾಡು ಬಿಜೆಪಿ ಅಧ್ಯಕ್ಷ ಹುದ್ದೆಗೆ ಅಣ್ಣಾಮಲೈ ಶೀಘ್ರವೇ ರಾಜೀನಾಮೆ : ಕೇಂದ್ರದಲ್ಲಿ ಮಹತ್ವದ ಸ್ಥಾನ?

KannadaprabhaNewsNetwork |  
Published : Apr 02, 2025, 01:02 AM ISTUpdated : Apr 02, 2025, 04:46 AM IST
ಅಣ್ಣಾಮಲೈ | Kannada Prabha

ಸಾರಾಂಶ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿರುವ ಹೊತ್ತಿನಲ್ಲೇ, ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಶೀಘ್ರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರಿಗೆ ಕೇಂದ್ರದಲ್ಲಿ ಮಹತ್ವದ ಸ್ಥಾನ ನೀಡಲು ಪಕ್ಷ ನಿರ್ಧರಿಸಿದೆ ಎಂಬ ವದಂತಿ ಹಬ್ಬಿದೆ.

ಚೆನ್ನೈ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿರುವ ಹೊತ್ತಿನಲ್ಲೇ, ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಶೀಘ್ರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರಿಗೆ ಕೇಂದ್ರದಲ್ಲಿ ಮಹತ್ವದ ಸ್ಥಾನ ನೀಡಲು ಪಕ್ಷ ನಿರ್ಧರಿಸಿದೆ ಎಂಬ ವದಂತಿ ಹಬ್ಬಿದೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮತ್ತೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ.

2026ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿದ್ದು, ಜಾತಿಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ ಎಂಬ ವಿಶ್ಲೇಷಣೆಗಳಿವೆ. ಅಣ್ಣಾಮಲೈ ಗೌಂಡರ್‌ ಸಮುದಾಯದವರಾಗಿದ್ದು, ಎಐಎಡಿಎಂಕೆ ರಾಜ್ಯಾಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಕೂಡ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಅಣ್ಣಾಮಲೈ ಜಾಗಕ್ಕೆ ಥೆವಾರ್‌ ಸಮುದಾಯಕ್ಕೆ ಸೇರಿದ ಬಿಜೆಪಿ ಸಂಸದ ನೈನಾರ್‌ ನಾಗೇಂದ್ರನ್‌ ಅವರನ್ನು ನೇಮಿಸಲಾಗುವುದು ಎನ್ನಲಾಗಿದೆ.

ಈ ಮಾಸಾಂತ್ಯಕ್ಕೆ ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆ

ನವದೆಹಲಿ: ಪಕ್ಷದ ರಾಜ್ಯ ಘಟಕಗಳ ಮತ್ತು ರಾಷ್ಟ್ರೀಯ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಚುರುಕು ನೀಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್‌, ಮುಂದಿನ ವಾರವೇ ಹಲವು ರಾಜ್ಯಗಳ ರಾಜ್ಯಾಧ್ಯಕ್ಷರ ಕುರಿತು ಘೋಷಣೆ ಮಾಡಲಿದೆ. ಜೊತೆಗೆ ಏಪ್ರಿಲ್‌ ಮಾಸಾಂತ್ಯಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಯ ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೇ ಅವಧಿ ವಿಸ್ತರಣೆಗೊಂಡು ಹೆಚ್ಚುವರಿ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಹೊಸ ಅಧ್ಯಕ್ಷರ ಆಯ್ಕೆ ಆಗಬೇಕಿದ್ದಲ್ಲಿ, ಕನಿಷ್ಠ ಶೇ.50ರಷ್ಟು ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಿರಬೇಕು. ಆದರೆ ಸದ್ಯ 13 ರಾಜ್ಯಗಳಿಗೆ ಮಾತ್ರವೇ ನೂತನ ಅಧ್ಯಕ್ಷರ ಆಯ್ಕೆ ಅಥವಾ ಹಿಂದಿನ ಅಧ್ಯಕ್ಷರನ್ನೇ ಮುಂದುವರೆಸುವ ನಿರ್ಧಾರ ಪ್ರಕಟಿಸಲಾಗಿದೆ

ಇದರ ಮುಂದುವರೆದ ಭಾಗವಾಗಿ ಮುಂದಿನ ವಾರ ಕೆಲ ರಾಜ್ಯಗಳ ಅಧ್ಯಕ್ಷರ ಕುರಿತು ಪಕ್ಷ ಘೋಷಣೆ ಮಾಡಲಿದೆ. ಅಲ್ಲಿಗೆ ಶೇ.50ರಷ್ಟು ರಾಜ್ಯಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಂತೆ ಆಗಲಿದೆ. ಹೀಗಾಗಿ ಅದರ ಮುಂದಿನ ಭಾಗವಾಗಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಳನ್ನು ಪಕ್ಷ ಮಾಡಲಿದೆ. ಬಳಿಕ ಹಂತಹಂತವಾಗಿ ಉಳಿದ ರಾಜ್ಯಗಳಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ