ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 41 ರು. ಇಳಿಕೆ ಮಾಡಿದೆ.
ನವದೆಹಲಿ: ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 41 ರು. ಇಳಿಕೆ ಮಾಡಿದೆ. ಇಳಿಕೆಯ ಬಳಿಕ ಬೆಂಗಳೂರಿನಲ್ಲಿ 19 ಕೆಜಿ ತೂಕದ ಸಿಲಿಂಡರ್ ಬೆಲೆ 1836 ರು.ಗೆ ಇಳಿಕೆಯಾಗಿದೆ. ಉಳಿದಂತೆ ಮುಂಬೈನಲ್ಲಿ 1713.50 ರು., ಕೋಲ್ಕತಾ 1868.50 ರು., ಚೆನ್ನೈನಲ್ಲಿ 1921.50 ರು. ಇದೆ. ಇದೇ ವೇಳೆ ವೈಮಾನಿಕ ಇಂಧನ ದರಗಳನ್ನೂ ಕೂಡಾ ಇಳಿಸಲಾಗಿದೆ. ವಿಮಾನದ ಇಂಧನದ ದರ ಪ್ರತಿ 1000 ಲೀ.ಗೆ 5870 ರು. ಇಳಿಕೆಯಾಗಿದೆ. ಹೀಗಾಗಿ ದರ ಇದೀಗ 89441 ರು.ಗೆ ಕಡಿತಗೊಂಡಿದೆ.
ದೇಶಾದ್ಯಂತ ಟೋಲ್ ದರ ಹೆಚ್ಚಳ; ಶೇ.4- 5ರಷ್ಟು ಏರಿಕೆ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಟೋಲ್ ದರ ಏರಿಕೆ ಬಿಸಿ ತಟ್ಟಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದೇಶಾದ್ಯಂತ ಹೆದ್ದಾರಿ ವಿಭಾಗಗಳಲ್ಲಿ ಸರಾಸರಿ ಶೇ.4ರಿಂದ 5ರಷ್ಟು ಟೋಲ್ ದರವನ್ನು ಹೆಚ್ಚಿಸಿದ್ದು, ಮಂಗಳವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಪ್ರತ್ಯೇಕವಾಗಿ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಸಗಟು ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರದಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿ ದರಗಳನ್ನು ಪರಿಷ್ಕರಿಸಲಾಗುತ್ತದೆ. ವಾಡಿಕೆಯಂತೆ ಪ್ರತಿ ವರ್ಷ ಏ.1ರಂದು ಟೋಲ್ ದರ ಪರಿಷ್ಕರಣೆ ನಡೆಯುತ್ತದೆ.
45 ದಿನದ ಕುಂಭಮೇಳ ಅವಧಿಯಲ್ಲಿ 2.8 ಲಕ್ಷ ಕೋಟಿ ರು. ವಹಿವಾಟು
ಮುಂಬೈ: ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಮಹಾಕುಂಭಮೇಳದ ಅವಧಿಯಲ್ಲಿ ಒಟ್ಟಾರೆ 2.8 ಲಕ್ಷ ಕೋಟಿ ರು.ಗಳ ಬೃಹತ್ ಆರ್ಥಿಕ ವಹಿವಾಟು ನಡೆದಿರುವುದಾಗಿ ಡನ್ ಮತ್ತು ಬ್ರಾಡ್‌ಸ್ಟ್ರೀಟ್ ವರದಿ ತಿಳಿಸಿದೆ. ರಸ್ತೆ ಸಾರಿಗೆಯಿಂದ 37,000 ಕೋಟಿ ರು., ರೈಲ್ವೆಯಿಂದ 17,700 ಕೋಟಿ ರು. ವಹಿವಾಟು ನಡೆದಿದೆ. ಯಾತ್ರಿಕರು ಮನರಂಜನಾ ಚಟುವಟಿಕೆಗಳಿಗಾಗಿ 10,000 ಕೋಟಿ ರು.ಗಳನ್ನು ಖರ್ಚು ಮಾಡಿದ್ದಾರೆ. ಚಿಲ್ಲರೆ ವ್ಯಾಪಾರಿಗಳಿಂದ 7,000 ಕೋಟಿ ರು. ಹಾಗೂ ಆಹಾರ ಸೇವೆಗಳಿಂದ 6,500 ಕೋಟಿ ರು. ವಹಿವಾಟಾಗಿದೆ. ಚಹಾ ಅಂಗಡಿಯವರು ದಿನಕ್ಕೆ ಸರಾಸರಿ 30,000 ರು. ಗಳಿಸಿದರೆ, ಪೂರಿ ಅಂಗಡಿಯವರು 1,500 ರು. ಗಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬ್ಯಾಂಕಲ್ಲಿ ಸಂವಹನಕ್ಕೆ ಮರಾಠಿ ಕಡ್ಡಾಯ: ಎಂಎನ್‌ಎಸ್ ಆಗ್ರಹ
ಥಾಣೆ: ಮಹಾರಾಷ್ಟ್ರದ ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆಗೆ ಸಂವಹನ ನಡೆಸಲು ಮರಾಠಿ ಪ್ರಮುಖ ಭಾಷೆಯಾಗಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಆಗ್ರಹಿಸಿದೆ. ಎರಡು ದಿನಗಳ ಹಿಂದಷ್ಟೇ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಗುಡಿ ಪಡ್ವಾ ರ್‍ಯಾಲಿಯಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಪಕ್ಷದ ನಿಲುವನ್ನು ಪುನರ್ ಉಚ್ಚರಿಸಿದ್ದರು. ಈ ಬೆನ್ನಲ್ಲೇ ಬ್ಯಾಂಕುಗಳಲ್ಲಿ ಮರಾಠಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಎಲ್ಲ ಬ್ಯಾಂಕುಗಳಿಗೆ ಎಂಎನ್‌ಎಸ್ ಕಾರ್ಯಕರ್ತರು ಪತ್ರ ಹಂಚಿದ್ದಾರೆ. ಈ ಸಂದರ್ಭದಲ್ಲಿ ಕೆಲ ಬ್ಯಾಂಕುಗಳಲ್ಲಿ ಮರಾಠಿಯಲ್ಲಿರದ ನಾಮಫಲಕಗಳನ್ನು ಕಿತ್ತೆಸೆದ ಘಟನೆಯೂ ನಡೆಯಿತು. ಅಲ್ಲದೇ ಇದೇ ವೇಳೆ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರಿಂದ ಮರಾಠಿಗೆ ಆಗುವ ಅಗೌರವವನ್ನು ಸಹಿಸುವುದಿಲ್ಲ ಎಂದು ಎಂಎನ್‌ಎಸ್ ಎಚ್ಚರಿಸಿದೆ.
ಮಾರ್ಚ್‌ನಲ್ಲಿ 1.96 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ: ಕರ್ನಾಟಕಕ್ಕೆ 2ನೇ ಸ್ಥಾನ
ನವದೆಹಲಿ: ಮಾರ್ಚ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು 1.96 ಲಕ್ಷ ಕೋಟಿ ತಲುಪಿದೆ. ಇದು ಜಿಎಸ್ಟಿ ನೀತಿ ಜಾರಿಯಾದ ಬಳಿಕ ದಾಖಲಾದ 2ನೇ ಗರಿಷ್ಠ ತೆರಿಗೆ ಪ್ರಮಾಣವಾಗಿದೆ. ಜೊತೆಗೆ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ.9.9ರಷ್ಟು ಹೆಚ್ಚಳವಾಗಿದೆ.
ದೇಶೀಯ ವರ್ಗಾವಣೆಗಳ ಮೂಲಕ 1.49 ಲಕ್ಷ ಕೋಟಿ ರು., ಆಮದಿತ ಸರಕುಗಳಿಂದ 46,919 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರೀಯ ಜಿಎಸ್ಟಿ 38145 ಕೋಟಿ ರು., ರಾಜ್ಯ ಜಿಎಸ್ಟಿ 49891 ಕೋಟಿ ರು., ಸಂಯೋಜಿತ ಜಿಎಸ್ಟಿ 95853 ಕೋಟಿ ರು. ಮತ್ತು ಸೆಸ್ ಮೂಲಕ 12253 ಕೋಟಿ ರು. ಸಂಗ್ರಹವಾಗಿದೆ.ಇನ್ನು 31534 ಕೋಟಿ ರು. ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ, 13497 ಕೋಟಿ ರು.ನೊಂದಿಗೆ ಕರ್ನಾಟಕ 2ನೇ ಸ್ಥಾನ ಮತ್ತು 11795 ಕೋಟಿ ರು. ಜಿಎಸ್ಟಿ ಸಂಗ್ರಹದೊಂದಿಗೆ ತಮಿಳುನಾಡು 3ನೇ ಸ್ಥಾನದಲ್ಲಿದೆ.
ಟ್ರಂಪ್ ತೆರಿಗೆ ದಾಳಿಗೆ ಹೆದರಿ ಸೆನ್ಸೆಕ್ಸ್ 1390 ಅಂಕಗಳ ಭಾರೀ ಕುಸಿತ
ಮುಂಬೈ: ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಮೇಲೆ ಪ್ರತಿತೆರಿಗೆ ಜಾರಿ ಮಾಡುವ ಅಮೆರಿಕ ಸರ್ಕಾರದ ಘೋಷಣೆ ಮಂಗಳವಾರ ಮುಂಬೈ ಷೇರುಪೇಟೆಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿದೆ. ಮಂಗಳವಾರ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ 1390 ಅಂಕಗಳ ಭಾರೀ ಕುಸಿತ ಕಂಡು 76024 ಅಂಕಗಳಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಹೂಡಿಕೆದಾರರ 3.44 ಲಕ್ಷ ಕೋಟಿ ರು. ಸಂಪತ್ತು ಕರಗಿಹೋಗಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1502 ಅಂಕಗಳವರೆಗೂ ಕುಸಿತ ಕಂಡಿತ್ತಾದರೂ, ದಿನದಂತ್ಯಕ್ಕೆ ಅಲ್ಪ ಚೇತರಿಕೆ ಕಂಡಿತು. ಅಮೆರಿಕದ ತೆರಿಗೆ ದಾಳಿಯ ಪರಿಣಾಮ ಭೀತಿ ಭಾರತ ಸೇರಿದಂತೆ ಜಾಗತಿಕ ಷೇರುಪೇಟೆಗಳ ಮೇಲ ವ್ಯತಿರಿಕ್ತ ಪರಿಣಾಮ ಬೀರಿದೆ.