ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ:ಹೊಸ ಪಕ್ಷ ಸ್ಥಾಪನೆ ಘೋಷಣೆ- ಬದಲಾವಣೆ- ಸದ್ಯ ಆಂದೋಲನ, ಬಳಿಕ ಪಕ್ಷ ಸ್ಥಾಪನೆ- ನಮಗೇನೂ ನಷ್ಟವಿಲ್ಲ: ಬಿಜೆಪಿ ಪ್ರತಿಕ್ರಿಯೆ

KannadaprabhaNewsNetwork |  
Published : Jun 06, 2026, 01:45 AM IST
ಅಣ್ಣಾಮಲೈ  | Kannada Prabha

ಸಾರಾಂಶ

ತಮ್ಮ ಖಡಕ್‌ ವ್ಯಕ್ತಿತ್ವ ಮತ್ತು ಆಕ್ರಮಣಕಾರಿ ರಾಜಕೀಯ ಶೈಲಿಯಿಂದ ಭಾರಿ ಜನಪ್ರಿಯತೆ ಗಳಿಸಿ ದ್ರಾವಿಡ ಪಕ್ಷಗಳನ್ನು ನೇರವಾಗಿ ಎದುರಿಸಿದ್ದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ.

ಅಣ್ಣಾಮಲೈ ಹೇಳಿದ್ದೇನು?

ಬಿಜೆಪಿ ತೊರೆಯುವ ನಿರ್ಧಾರ ಆತುರದ್ದಲ್ಲ. ಬಿಜೆಪಿಯ ನಾಯಕರಿಗೆ ಈ ಬಗ್ಗೆ ಮೊದಲು ತಿಳಿಸಿದ್ದೆ

ಸ್ವತಂತ್ರ್ಯ ಸ್ಪರ್ಧೆ, ‘ಭಾಷೆ (ತಮಿಳು) ವಿಚಾರದಲ್ಲಿ ರಾಷ್ಟ್ರೀಯ ಬಿಜೆಪಿಗೂ ನನಗೂ ಭಿನ್ನಮತವಿತ್ತು

ಆದರೆ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಪಕ್ಷದಲ್ಲಿ ಇರುವಂತೆ ನನಗೆ ಸೂಚಿಸಿದ್ದರು

ಪ್ರಧಾನಿ ಮೋದಿ ಬಗ್ಗೆ ನನಗೆ ಗೌರವವಿದೆ. ಬಿಜೆಪಿಯಿಂದ ಗೌರವಯುತವಾಗಿ ಹೊರಬಂದಿದ್ದೇನೆ

ನಾವು ಹೊಸ ರಾಜಕೀಯ ಚಳವಳಿ ಪ್ರಾರಂಭಿಸುತ್ತೇವೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಶಾಶ್ವತ ಶಾಸಕ, ಸಂಸದ, ನಾಯಕರ ಪರಿಕಲ್ಪನೆಯನ್ನು ನಾವು ಮುರಿಯುತ್ತೇವೆ.ಪಿಟಿಐ ನವದೆಹಲಿ/ಚೆನ್ನೈ

ತಮ್ಮ ಖಡಕ್‌ ವ್ಯಕ್ತಿತ್ವ ಮತ್ತು ಆಕ್ರಮಣಕಾರಿ ರಾಜಕೀಯ ಶೈಲಿಯಿಂದ ಭಾರಿ ಜನಪ್ರಿಯತೆ ಗಳಿಸಿ ದ್ರಾವಿಡ ಪಕ್ಷಗಳನ್ನು ನೇರವಾಗಿ ಎದುರಿಸಿದ್ದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ.

ಇದೇ ವೇಳೆ, ಸದ್ಯದ ಮಟ್ಟಿಗೆ ಹೊಸ ಆಂದೋಲನ ಹಾಗೂ ಮುಂದೆ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ ಅವರು, ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಅವರು ‘ವಿ ದ ಲೀಡರ್ಸ್‌ ಫೌಂಡೇಶನ್‌’ ಮೂಲಕ ಜನಾಂದೋಲನ ನಡೆಸಲಿದ್ದು, ಅದರ ವೆಬ್‌ಗೆ ಶುಕ್ರವಾರ ಸಜೆ ವೇಳೆಗೆ 6 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ.

ಇದರ ನಡುವೆ ಅಣ್ಣಾಮಲೈ ಬೆಂಬಲಿಸಿ ಬಿಜೆಪಿ ತಮಿಳುನಾಡು ಉಪಾಧ್ಯಕ್ಷ ಕರು ನಾಗರಾಜನ್‌ ಹಾಗೂ ಕಾರ್ಯದರ್ಶಿ ಸುಮತಿ ವೆಂಕಟೇಶ್‌ ಕೂಡ ರಾಜೀನಾಮೆ ನೀಡಿದ್ದಾರೆ.

ಜೂ.2ರಂದು ದೆಹಲಿಗೆ ತೆರಳಿದ್ದ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಆ ವೇಳೆ ನಿತಿನ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು ಎನ್ನಲಾಗಿತ್ತು. ಶುಕ್ರವಾರ ಅವರ ರಾಜೀನಾಮೆಯನ್ನು ನಿತಿನ್‌ ಅಂಗೀಕರಿಸಿದ್ದಾರೆ. ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಲೈವ್‌ ಬಂದ ಅಣ್ಣಾಮಲೈ ರಾಜೀನಾಮೆ ವಿಚಾರವನ್ನು ಸ್ವತಃ ಘೋಷಿಸಿದ್ದಾರೆ.

ಅಣ್ಣಾಮಲೈ ಹೇಳಿದ್ದೇನು?:

‘ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ. ಬಿಜೆಪಿಯಿಂದ ಗೌರವಯುತವಾಗಿ ಹೊರಬಂದಿದ್ದೇನೆ. ಇಂದಿನಿಂದ ಹೊಸ ಹಾದಿ, ಹೊಸ ಆಂದೋಲನ. ನಾವು ಹೊಸ ರಾಜಕೀಯ ಚಳವಳಿಯನ್ನು ಪ್ರಾರಂಭಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ’ ಎಂದು ಅಣ್ಣಾಮಲೈ ಹೇಳಿದರು.

‘ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ನಾನು ಬಯಸಿದ್ದೆ. ಸ್ಥಳೀಯ ಸಂಸ್ಥೆಗಳು ಮತ್ತು ಇತರ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಿದ್ದೆ. ಆದರೂ ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಲಾಯಿತು. ಬಿಜೆಪಿ ತೊರೆಯುವ ನಿರ್ಧಾರವನ್ನು ಆತುರದಿಂದ ತೆಗೆದುಕೊಂಡಿಲ್ಲ. 2025ರ ಡಿ.4ರಂದು ಬಿಜೆಪಿಯ ಉನ್ನತ ನಾಯಕರಿಗೆ ನನ್ನ ನಿರ್ಗಮನದ ಬಗ್ಗೆ ಮೊದಲು ತಿಳಿಸಿದ್ದೆ. ಆದರೆ ಚುನಾವಣಾ ಕೆಲಸ ಮುಗಿಯುವವರೆಗೆ ಪಕ್ಷದಲ್ಲೇ ಇರುವಂತೆ ಕೇಳಿಕೊಂಡರು. ಹಾಗಾಗಿ ಇಷ್ಟು ದಿನ ಉಳಿದೆ’ ಎಂದರು.

ಇದಲ್ಲದೆ, ‘ಭಾಷೆ (ತಮಿಳು) ವಿಚಾರದಲ್ಲೂ ರಾಷ್ಟ್ರೀಯ ಬಿಜೆಪಿಗೂ ನನಗೂ ಭಿನ್ನಮತವಿತ್ತು’ ಎಂದು ಅವರು ಹೇಳಿದರು.

ಪಂಥೀಯ ರಾಜಕೀಯಕ್ಕೆ ಬ್ರೇಕ್:

‘ರಾಜಕೀಯ ಯಾವುದೇ ಒಂದು ಕುಟುಂಬಕ್ಕೆ ಸೇರಿದ್ದಲ್ಲ. ಶಾಶ್ವತ ಶಾಸಕ, ಸಂಸದ, ನಾಯಕರ ಪರಿಕಲ್ಪನೆಯನ್ನು ನಾವು ಮುರಿಯುತ್ತೇವೆ. ಪಂಥೀಯ ರಾಜಕೀಯದಿಂದ ಹೊರಬಂದು, ಜನಸಾಮಾನ್ಯರ ರಾಜಕೀಯವನ್ನು ಸ್ಥಾಪಿಸುವ ಅಗತ್ಯವಿದೆ. ನಾವು ಯಾರಿಗೂ ಪ್ರತಿಸ್ಪರ್ಧಿಯಲ್ಲ. ನಮ್ಮ ಜೊತೆಯಾಗಲು ಬಯಸುವವರು ತಾಳ್ಮೆಯಿಂದಿರಬೇಕು. ಹೊಸ ಪಕ್ಷಕ್ಕೆ ನಾವು ನಾಯಕರನ್ನು, ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು. ಇದು ಸಮಯ ತೆಗೆದುಕೊಳ್ಳುತ್ತದೆ. ಸರಿಯಾದ ಸಮಯದಲ್ಲಿ ನಮ್ಮ ಚಳವಳಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳುತ್ತದೆ’ ಎಂದು ತಿಳಿಸಿದರು.

---

ನಮಗೇನೂ ನಷ್ಟವಿಲ್ಲ: ಬಿಜೆಪಿ ತಿರುಗೇಟು

ಅಣ್ಣಾಮಲೈ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್‌, ‘ಅಣ್ಣಾಮಲೈ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ವಿಶ್ವದ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಪಕ್ಷವು ತನ್ನ ಸಿದ್ಧಾಂತದಲ್ಲಿ ದೃಢವಾಗಿ ಮುಂದುವರಿಯಲಿದೆ’ ಎಂದರು. ಅಣ್ಣಾಮಲೈ ಅವರ ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಕುರಿತು ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಸ್ವತಂತ್ರರು’ ಎಂದು ಅಭಿಪ್ರಾಯಪಟ್ಟರು.

-----

ಬಿಜೆಪಿಯಿಂದ ಅಣ್ಣಾಮಲೈ

ದೂರವಾಗಿದ್ದು ಏಕೆ?

ಬಿಜೆಪಿಯು ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಲೋಕಸಭಾ ಚುನಾವಣೆಗೂ ಮುಂಚಿತವಾಗಿ, 2023ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಆಗಿನಿಂದಲೇ ಪಕ್ಷದ ಜತೆ ಬಿರುಕು ಆರಂಭವಾಯಿತು.

ಮೈತ್ರಿ ಆದಾಗಿನಿಂದಲೂ ಅಣ್ಣಾಡಿಎಂಕೆ ನಾಯಕರು ಹಾಗೂ ಅಣ್ಣಾಮಲೈ ನಡುವೆ ಎಲ್ಲವೂ ಸರಿಯಿರಲಿಲ್ಲ. ಅಣ್ಣಾಮಲೈ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರತೊಡಗಿದ್ದವು. 2025ರಲ್ಲಿ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ನೈನಾರ್ ನಾಗೇಂದ್ರನ್‌ರನ್ನು ಆ ಹುದ್ದೆಗೆ ನೇಮಿಸಲಾಯಿತು. ಆಮೇಲೆ ನಡೆದ ಪಕ್ಷದ ರಾಜ್ಯ ಮಟ್ಟದ ಸಭೆಗಳಿಗೆ ಅಣ್ಣಾಮಲೈ ಹಾಜರಾಗುತ್ತಿರಲಿಲ್ಲ. ಇತ್ತೀಚೆಗೆ ಸಿಬಿಎಸ್‌ಇ 9ನೇ ತರಗತಿಗೆ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದ್ದನ್ನೂ ಅವರು ವಿರೋಧಿಸಿದ್ದರು. ಇಂಥ ಹಲವು ಬೆಳವಣಿಗೆಗಳ ಬೆನ್ನಲ್ಲೇ ಪಕ್ಷ ತೊರೆದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಿಎಫ್‌ಐನ 25 ನಾಯಕರ ವಿರುದ್ಧ ದೋಷಾರೋಪ: ದೆಹಲಿ ಕೋರ್ಟ್‌ ಆದೇಶ
ಪ್ಲಾಸ್ಟಿಕ್‌ ನೋಟು ಚಲಾವಣೆಗೆ ಪ್ರಸ್ತಾಪ