ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯ ಸರಣಿ ಮುಂದುವರೆದಿದದು, ಇದೀಗ ಜಾಯ್ ಮಹಾಪಾತ್ರ ಎಂಬ ಯುವಕನನ್ನು ಗುಂಪೊಂದು ಥಳಿಸಿ, ಬಳಿಕ ವಿಷವಿಕ್ಕಿ ಹತ್ಯೆ ಮಾಡಿದೆ. ಇದರೊಂದಿಗೆ ಕಳೆದ 3 ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಮತಾಂಧರ ದಾಳಿಗೆ ಬಲಿಯಾದ ಹಿಂದೂಗಳ ಸಂಖ್ಯೆ 12ಕ್ಕೆ ತಲುಪಿದಂತಾಗಿದೆ.
19 ವರ್ಷದ ಜಾಯ್, ಅಮಿರುಲ್ ಇಸ್ಲಾಂ ಎಂಬಾತನ ಅಂಗಡಿಯಿಂದ 5,500 ಟಾಕಾ(ಬಾಂಗ್ಲಾ ರುಪಾಯಿ)ಗೆ ಮೊಬೈಲ್ ಖರೀದಿಸಿದ್ದ. ಆರಂಭದಲ್ಲಿ 2 ಸಾವಿರ ಟಾಕಾ ಪಾವತಿಸಿದ್ದ ಜಾಯ್, ಬಾಕಿ ಹಣವನ್ನು ವಾರಕ್ಕೆ 500 ಟಾಕಾಗಳ ಕಂತಿನಂತೆ ಪಾವತಿಸುತ್ತಿದ್ದ. ಆದರೆ ಕೊನೆಯ ಕಂತು ವಿಳಂಬವಾಗಿತ್ತು. ಅಂಗಡಿಯಾತ ಗುರುವಾರ ಜಾಯ್‌ಗೆ ಈ ಕುರಿತು ಪ್ರಶ್ನಿಸಿದ್ದಾನೆ. ಈ ವೇಳೆ ಆತನ ಬಳಿ ಹಣ ಇರಲಿಲ್ಲ. ಹೀಗಾಗಿ ಅಂಗಡಿಯಾತ ಮೊಬೈಲ್ ಕಿತ್ತುಕೊಂಡಿದ್ದಾನೆ. ಮೊಬೈಲ್‌ನಲ್ಲಿದ್ದ ಸಿಮ್ ಕೇಳಿದಾಗ ಅಂಗಡಿಗೆ ಬಂದು ಕೊಂಡೊಯ್ಯುವಂತೆ ಮಾಲಿಕ ಸೂಚಿಸಿದ್ದ. ಅದರಂತೆ ಸಂಜೆ ಅಂಗಡಿಗೆ ಹೋದಾಗ ಆತನ ಮೇಲೆ ಹಲ್ಲೆ ನಡೆಸಿದ್ದು, ನಂತರ ವಿಷ ಸೇವಿಸಿದ ಸ್ಥಿತಿಯಲ್ಲಿ ಜಾಯ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ.
ಇಸ್ಲಾಮಾಬಾದ್: ಅತ್ತ ಬಾಂಗ್ಲಾದಲ್ಲಿ ಹಿಂದೂಗಳ ನರಮೇಧದ ನಡುವೆಯೇ, ಇತ್ತ ಪಾಕಿಸ್ತಾನದಲ್ಲಿ ಬಡ ಹಿಂದೂ ರೈತನೊಬ್ಬನನ್ನು ಪ್ರಭಾವಿ ಜಮೀನ್ದಾರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಇದರ ವಿರುದ್ಧ ಹಿಂದೂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹಟ್ಟಿಯೊಂದರ ನಿರ್ಮಾಣ ವಿಚಾರವಾಗಿ ಪ್ರಭಾವಿ ಜಮೀನ್ದಾರ ಸರ್ಫರಾಜ್ ನಿಜಾಮಾನಿ ಎಂಬಾತ ಯುವ ರೈತ ಕೈಲಾಶ್ ಕೊಲ್ಹಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನಾಲ್ಕು ದಿನಗಳ ಹಿಂದೆ ನಡೆದ ಈ ಹತ್ಯೆಗೆ ಸಂಬಂಧಿಸಿ ಆರೋಪಿಯನ್ನು ಈವರೆಗೂ ಬಂಧಿಸದ ಪೊಲೀಸರ ಕ್ರಮ ಪ್ರಶ್ನಿಸಿ ಪ್ರತಿಭಟನಾಕಾರರು ಬದಿನ್-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಆರಂಭಿಸಿದ್ದಾರೆ. ಈ ದಿಢೀರ್ ಪ್ರತಿಭಟನೆಯಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹಿರಿಯರು, ಕಿರಿಯರೆನ್ನದೆ ಭಾರೀ ಸಂಖ್ಯೆಯಲ್ಲಿ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಚಳಿಯ ನಡುವೆಯೂ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಿದ್ದಾರೆ. ಆರೋಪಿಗೆ ಶಿಕ್ಷೆ ಆಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ರಾಜಕೀಯ ಪಕ್ಷಗಳ ಬೆಂಬಲ:
ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಪ್ರತಿಭಟನೆಗೆ ಇದೀಗ ಜಮಾತ್ ಉಲೇಮಾ-ಎ-ಇಸ್ಲಾಂ, ಪಾಕಿಸ್ತಾನ್ ತೆಹ್ರೀಕ್ -ಎ-ಇನ್ಸಾಫ್(ಪಿಟಿಐ) ಸೇರಿ ಹಲವು ರಾಜಕೀಯ ಪಕ್ಷಗಳಿಂದಲೂ ಬೆಂಬಲ ವ್ಯಕ್ತವಾಗಿದ್ದು, ತೀವ್ರ ಸ್ವರೂಪ ಪಡೆಯುತ್ತಿದೆ.