ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಶೀಘ್ರವೇ ಭಾರತ ಪ್ರವಾಸ : ಬೆಂಗಳೂರಿಗೂ ಭೇಟಿ

Published : Oct 05, 2024, 07:25 AM IST
mohamed muizzu

ಸಾರಾಂಶ

ಭಾರತವನ್ನು ಕೆಣಕಿ ಬಳಿಕ ಮೆತ್ತಗಾಗಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಅ.6ರಿಂದ 5 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ನವದೆಹಲಿ : ಭಾರತವನ್ನು ಕೆಣಕಿ ಬಳಿಕ ಮೆತ್ತಗಾಗಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಅ.6ರಿಂದ 5 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ವಿಶೇಷವೆಂದರೆ ಈ ಪ್ರವಾಸದ ವೇಳೆ ಸಿಲಿಕಾನ್ ಸಿಟಿ ಬೆಂಗಳೂರಿಗೂ ಅವರ ಭೇಟಿ ನಿಗದಿಯಾಗಿದೆ. ಭಾರತದೊಂದಿಗೆ ಹಳಸಿರುವ ಸಂಬಂಧ ಸುಧಾರಣೆಯ ಭಾಗವಾಗಿ ಮುಯಿಜು ಪ್ರವಾಸ ಹಮ್ಮಿಕೊಂಡಿದ್ದಾರೆ ಎನ್ನಲಾಗಿದ್ದರೂ, ಚೀನಾ ಪರವಿರುವ ದೇಶವನ್ನು ತನ್ನ ಮಾತಿಗೆ ಮಣಿಯುವಂತೆ ಮಾಡಿದ ಭಾರತದ ರಾಜತಾಂತ್ರಿಕ ಚಾಕಚಕ್ಯತೆ ಕೂಡಾ ಇಂಥದ್ದೊಂದು ಭೇಟಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ಮಾಲ್ಡೀವ್ಸ್‌ ಸಂಸದೀಯ ಚುನಾವಣೆ ವೇಳೆ ಮುಯಿಜು ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದರು. ಗೆದ್ದ ಮೇಲೆ ತಮ್ಮ ದೇಶ ದಲ್ಲಿನ ಭಾರತೀಯ ಯೋಧರಿಗೆ ದೇಶ ತೊರೆಯಲು ಗಡುವು ನೀಡಿದ್ದರು. ಚೀನಾ ಜೊತೆಗೆ ಮತ್ತಷ್ಟು ಸ್ನೇಹದ ಹಸ್ತಚಾಚಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದಕ್ಕೆ ಭಾರತೀಯರು ನೀಡಿದ 'ಬಾಯ್ಕಾಟ್ ಮಾಲ್ಡೀವ್ಸ್‌' ಅಭಿಯಾನದ ತಿರುಗೇಟಿನ ಬಳಿಕ ಎಚ್ಚೆತ್ತುಕೊಂಡ ಮುಯಿಜು, ಪ್ರವಾಸೋದ್ಯಮ ನಂಬಿರುವ ತಮ್ಮ ದೇಶಕ್ಕೆ ಭಾರತ ಎಷ್ಟು ಅಗತ್ಯ ಎಂದು ಮನಗಂಡು ತಣ್ಣಗಾಗಿದ್ದರು.

ಸಂಬಂಧ ಸುಧಾರಣೆ: ಈ ಹಿನ್ನೆಲೆ ಸಂಬಂಧ ಸುಧಾರಣೆಗಾಗಿ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಭಾಗವಾಗಿ ಮುಯಿಜು ರಾಷ್ಟ್ರಪತಿ ದೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಪ್ರವಾಸದ ವೇಳೆ ಅವರು ಬೆಂಗಳೂರು, ದೆಹಲಿ ಮತ್ತು ಮುಂಬೈಗೆ ಭೇಟಿ ನೀಡಲಿದ್ದಾರೆ.

ಬೆಂಗಳೂರಿಗೆ ಏಕೆ?: ಕರ್ನಾಟಕ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಹೊಂದಿದ ನಗರ. ಭಾರತದ ಸಿಲಿಕಾನ್ ಸಿಟಿ ಎಂಬ ಹಿರಿಮೆ ಹೊಂದಿದೆ. ಜಾಗತಿಕ ಕಂಪನಿಗಳೆಲ್ಲಾ ಇಲ್ಲಿ ಬೀಡುಬಿಟ್ಟಿವೆ. ಭಾರತದ ಸ್ಟಾರ್ಟಪ್‌ಗಳ ರಾಜಧಾನಿ ಎಂಬ ಹಿರಿಮೆಯೂ ಇದೆ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೂಡಿಕೆ ಆಗುತ್ತಿದೆ. ಭಾರತದ ದೊಡ್ಡ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಮಾಲ್ಡೀಕ್ಸ್‌ನೊಂದಿಗೆ ಆರ್ಥಿಕ ಒಪ್ಪಂದ ಸಾಧ್ಯತೆ ಇರುವ ಪ್ರಮುಖ ನಗರಗಳ ಪೈಕಿ ಒಂದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಲವು ಉದ್ಯಮ ಸಭೆಗಳಲ್ಲಿ ಮುಯಿಜು ಭಾಗಿಯಾಗುತ್ತಿದ್ದಾರೆ.

PREV

Recommended Stories

ಮಹಿಳಾ ಡಿಎಸ್ಪಿಗೆ ‘ಎಷ್ಟು ಧೈರ್ಯ’ ಎಂದ ಅಜಿತ್‌: ವಿವಾದ
ಭಾರತಕ್ಕೆ ಮತ್ತಷ್ಟು ರಕ್ಷಣಾ ಬಲ: 15 ವರ್ಷದ ನೀಲನಕ್ಷೆ ಸಿದ್ಧ