ನವದೆಹಲಿ: ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮಾಹಿತಿಯನ್ನು ಮಾಧ್ಯಮಗಳಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬುಡಕಟ್ಟು ವ್ಯವಹಾರಗಳ ಸಚಿವ ಕುನ್ವರ್ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಈ ವಿಷಯದಲ್ಲಿ ನೀವು ಹೈಕೋರ್ಟ್‌ನಲ್ಲಿ ಹೋಗಿ ಕ್ಷಮೆ ಕೋರಿ ಎಂದು ಸೂಚಿಸಿದೆ.
ತಮ್ಮ ವಿರುದ್ಧ ಮಧ್ಯಪ್ರದೇಶದಲ್ಲಿ ದಾಖಲಾದ ಎಫ್‌ಐಆರ್ ರದ್ದು ಕೋರಿ ಸಚಿವ ಕುನ್ವರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ‘ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನೀವೊಬ್ಬ ಸರ್ಕಾರದ ಜವಾಬ್ದಾರಿಯುವ ಸಚಿವ. ದೇಶವು ಇಂತಹ ಪರಿಸ್ಥಿತಿಯಲ್ಲಿ ಸಿಲುಕಿರುವಾಗ, ಜವಾಬ್ದಾರಿಯುತ ಸಚಿವರು ಉಚ್ಚರಿಸುವ ಪ್ರತಿಯೊಂದು ವಾಕ್ಯವೂ ಜವಾಬ್ದಾರಿಯುತವಾಗಿರಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜೊತೆಗೆ, ‘ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳು ಸ್ವಲ್ಪ ಮಟ್ಟಿಗೆ ಸಂಯಮವನ್ನು ವಹಿಸಬೇಕೆಂದು ನಿರೀಕ್ಷಿಸುತ್ತೇವೆ’ ಎಂದು ಕಟುವಾಗಿ ನುಡಿದ ನ್ಯಾಯಾಲಯ ಎಫ್‌ಐಆರ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದಿದ್ದು, ತಡೆ ನೀಡಲು ನಿರಾಕರಿಸಿದೆ. ಆದರೆ ಕುನ್ವರ್ ಅರ್ಜಿಯನ್ನು ಶುಕ್ರವಾರ ವಿಚಾರಣೆ ಮಾಡುವುದಾಗಿ ತಿಳಿಸಿದೆ.
ಏನಿದು ಪ್ರಕರಣ?:
ಕಳೆದ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಕುನ್ವರ್, ‘ನಮ್ಮ ದೇಶದ ಪುತ್ರಿಯರ ಸಿಂದೂರ ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಪ್ರಧಾನಿ ಮೋದಿಯವರು ಕಳಿಸಿದರು’ ಎಂದು ಬೆಳಗಾವಿಯ ಸೊಸೆ ಸೋಫಿಯಾ ಖುರೇಷಿ ಉದ್ದೇಶಿಸಿ ಹೇಳಿದ್ದರು.