- ಅಮೆರಿಕದ ಅಂತಾರಾಷ್ಟ್ರೀಯ ಟ್ರೇಡ್ ಕೋರ್ಟ್ ಆದೇಶ
- ಇತ್ತೀಚೆಗಷ್ಟೇ ಪ್ರತಿ ತೆರಿಗೆ ರದ್ದು ಮಾಡಿದ್ದ ಸುಪ್ರೀಂ ಕೋರ್ಟ್- ಇದೀಗ ಟ್ರೇಡ್ ಕೋರ್ಟಿಂದ ಹಣ ವಾಪಸ್ ನೀಡಲು ಸೂಚನೆ
ವಾಷಿಂಗ್ಟನ್: ಭಾರತವೂ ಸೇರಿ ವಿಶ್ವದ ಹಲವು ದೇಶಗಳ ಮೇಲೆ ಹೇರಲಾಗಿರುವ ಪ್ರತಿ ತೆರಿಗೆಯ ಆದೇಶ ರದ್ದಾದ ಬೆನ್ನಲ್ಲೇ, ಇದೀಗ ಅಮೆರಿಕದ ವ್ಯಾಪಾರ ನ್ಯಾಯಾಲಯವೊಂದು ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಹೊಸ ಶಾಕ್ ನೀಡಿದೆ. ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಪ್ರತಿ ತೆರಿಗೆ ಹೆಸರಿನಲ್ಲಿ ಆಮದುದಾರರಿಂದ ವಸೂಲಿ ಮಾಡಿರುವ 12 ಲಕ್ಷ ಕೋಟಿ ರು. ಅನ್ನು ಬಡ್ಡಿ ಸಮೇತ ವಾಪಸ್ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಟ್ರಂಪ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಮ್ಯಾನ್‌ಹಟನ್‌ನಲ್ಲಿರುವ ಅಮೆರಿಕದ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ನ್ಯಾಯಾಲಯದ ನ್ಯಾಯಮೂರ್ತಿ ರಿಚರ್ಡ್ ಈಟನ್ ಅವರು ಈ ಆದೇಶ ನೀಡಿದ್ದಾರೆ. ಅಮೆರಿಕಕ್ಕೆ ಆಮದು ಮಾಡಲಾಗಿರುವ ವಸ್ತುಗಳ ಮೇಲಿನ ಮೌಲ್ಯವನ್ನು ಲೆಕ್ಕಹಾಕಿ. ಆ ಬಳಿಕ ಪ್ರತಿ ತೆರಿಗೆ ಹೆಸರಲ್ಲಿ ಎಷ್ಟು ಹಣ ವಸೂಲಿ ಮಾಡಲಾಗಿದೆಯೋ ಆ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಲು ಕ್ರಮ ಕೈಗೊಳ್ಳಿ ಎಂದು ಕಸ್ಟಮ್ಸ್ ಇಲಾಖೆಗೆ ಸೂಚನೆ ನೀಡಿದೆ.
ಕಸ್ಟಮ್ಸ್ ಇಲಾಖೆಗೆ ಯಾವ ರೀತಿ ಈ ಕುರಿತು ಲೆಕ್ಕಾಚಾರ ಹಾಕಬೇಕೆಂದು ಗೊತ್ತಿದೆ ಎಂದಿರುವ ಕೋರ್ಟ್, ವಸೂಲಿ ಮಾಡಲಾದ ಹೆಚ್ಚುವರಿ ತೆರಿಗೆ ವಾಪಸ್ ನೀಡುವ ಸಂಬಂಧ ಸೂಕ್ತ ವಿಧಾನವೊಂದನ್ನು ಸಿದ್ಧಪಡಿಸಿ ನ್ಯಾಯಾಲಯದ ಮುಂದೆ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.
ಸುಮಾರು 3 ಲಕ್ಷ ಆಮದುದಾರರು ಅಮೆರಿಕದ ಪ್ರತಿ ತೆರಿಗೆಯ ಬಿಸಿ ಅನುಭವಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಸಣ್ಣ ಉದ್ದಿಮೆದಾರರು.
ಕಳೆದ ವರ್ಷದಿಂದ ತೆರಿಗೆ:ಕಳೆದ ವರ್ಷ ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಭಾರತವೂ ಸೇರಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೂ ಪ್ರತಿ ತೆರಿಗೆ ವಿಧಿಸಿದ್ದರು. ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಈ ವೇಳೆ ಅತಿ ಹೆಚ್ಚು ಅಂದರೆ ಶೇ.25ರಷ್ಟು ತೆರಿಗೆ ವಿಧಿಸಲಾಗಿತ್ತು.
ಆ ಬಳಿಕ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಆಗಸ್ಟ್ ತಿಂಗಳಲ್ಲಿ ಹೆಚ್ಚುವರಿ ಶೇ.25ರಷ್ಟು ತೆರಿಗೆ ವಿಧಿಸಲಾಗಿತ್ತು. ಈ ಮೂಲಕ ಭಾರತದ ಮೇಲೆ ಒಟ್ಟಾರೆ ಶೇ.50ರಷ್ಟು ತೆರಿಗೆ ವಿಧಿಸಲಾಗಿತ್ತು. ಇದು ರಾಷ್ಟ್ರವೊಂದರ ಮೇಲೆ ವಿಧಿಸಿದ ಅತಿಹೆಚ್ಚಿನ ತೆರಿಗೆಯಾಗಿತ್ತು. ಆದರೆ ಕಳೆದ ತಿಂಗಳು ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸರ್ಕಾರದ ತೆರಿಗೆ ಕ್ರಮವನ್ನು ಅಕ್ರಮ ಎಂದು ಘೋಷಿಸಿ ರದ್ದು ಮಾಡಿತ್ತು.