ಭೋಜಶಾಲಾ ಸಂಕೀರ್ಣದಲ್ಲಿ ದೇವಾಲಯ: ಎಎಸ್‌ಐ ವರದಿ?

KannadaprabhaNewsNetwork |  
Published : Jul 16, 2024, 12:33 AM ISTUpdated : Jul 16, 2024, 05:16 AM IST
ಭೋಜ್‌ಶಾಲಾ | Kannada Prabha

ಸಾರಾಂಶ

ಮಧ್ಯಪ್ರದೇಶದ 12ನೇ ಶತಮಾನದ ವಿವಾದಿತ ಭೋಜಶಾಲಾ ಕಟ್ಟಡ ಸಂಕೀರ್ಣದ ಕುರಿತಾದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ರಾಜ್ಯ ಹೈಕೋರ್ಟ್‌ಗೆ ಸೋಮವಾರ ಸಲ್ಲಿಕೆ ಮಾಡಿದೆ.

ಭೋಪಾಲ: ಮಧ್ಯಪ್ರದೇಶದ 12ನೇ ಶತಮಾನದ ವಿವಾದಿತ ಭೋಜಶಾಲಾ ಕಟ್ಟಡ ಸಂಕೀರ್ಣದ ಕುರಿತಾದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ರಾಜ್ಯ ಹೈಕೋರ್ಟ್‌ಗೆ ಸೋಮವಾರ ಸಲ್ಲಿಕೆ ಮಾಡಿದೆ. 2000 ಪುಟಗಳ ಈ ವರದಿಯಲ್ಲಿ ವಿವಾದಿತ ಸ್ಥಳದಲ್ಲಿ ಶಿಕ್ಷಣ ಕೇಂದ್ರ ಮತ್ತು ದೇವಾಲಯವಿತ್ತು ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಭೋಜಶಾಲಾ ಸಂಕೀರ್ಣವು ವಾಗ್ದೇವಿಯ ದೇಗುಲವಾಗಿತ್ತು ಎಂದು ಹಿಂದೂಗಳು ಕೋರ್ಟ್‌ಗೆ ಹೋಗಿದ್ದರು. ಆದರೆ ಈ ಸ್ಥಳ ಕಮಾಲ್‌ ಮೌಲಾ ಮಸೀದಿಯಾಗಿತ್ತು ಎಂದು ಮುಸ್ಲಿಮರು ಆಕ್ಷೇಪಿಸಿದ್ದರು. 21 ವರ್ಷಗಳ ಹಿಂದಿನಿಂದ ಇಲ್ಲಿ ಸರ್ಕಾರಿ ಆದೇಶದ ಅನುಸಾರ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು ಮತ್ತು ಶುಕ್ರವಾರ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದರು.

ಈ ಕುರಿತು ಹಿಂದೂಗಳ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌, ಭೋಜಶಾಲಾ ಸಂಕೀರ್ಣ ನಿಜಕ್ಕೂ ಏನಾಗಿತ್ತು ಎಂಬ ಬಗ್ಗೆ ಸಮೀಕ್ಷೆ ನಡೆಸಲು ಎಎಸ್‌ಐಗೆ ಸೂಚಿಸಿತ್ತು. ಅದು ಮೂರು ತಿಂಗಳ ಕಾಲ ಉತ್ಖನನ ನಡೆಸಿದ್ದು, ಈ ವೇಳೆ 94 ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಅವುಗಳಲ್ಲಿ ಭಗ್ನಗೊಂಡ ಗಣೇಶ, ಬ್ರಹ್ಮ, ನರಸಿಂಹ, ಭೈರವ ಮುಂತಾದ ದೇವರ ವಿಗ್ರಹಗಳಿವೆ. ಜೊತೆಗೆ 31 ನಾಣ್ಯಗಳು ಲಭಿಸಿವೆ. ಅವು ಮೊಘಲ್‌ ಸುಲ್ತಾನರು, ಬ್ರಿಟಿಷರೂ ಸೇರಿದಂತೆ ಬೇರೆ ಬೇರೆ ಕಾಲಕ್ಕೆ ಸೇರಿದ್ದಾಗಿವೆ. ಇವುಗಳಲ್ಲದೆ, ಸಂಸ್ಕೃತ ಮತ್ತು ಪ್ರಾಕೃತದ ಅನೇಕ ಕೆತ್ತನೆಗಳು ಲಭಿಸಿವೆ.

ಎಎಸ್‌ಐ ವರದಿಯಲ್ಲಿ, ಈ ಸ್ಥಳವು ಭೋಜರಾಜನು ಸ್ಥಾಪಿಸಿದ್ದ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ಮೊಹಮ್ಮದ್‌ ಶಾ ಇಲ್ಲಿಯ ದೇಗುಲವನ್ನು ಮಸೀದಿಯಾಗಿ ಪರಿವರ್ತನೆ ಮಾಡಿದ್ದ ಎಂದು ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ವಿಚಾರಣೆಯನ್ನು ಹೈಕೋರ್ಟ್‌ ಜು.22ಕ್ಕೆ ನಿಗದಿಪಡಿಸಿದೆ.

ಏನಿದು ಭೋಜಶಾಲಾ ವಿವಾದ?:ಧಾರ್‌ ಜಿಲ್ಲೆಯಲ್ಲಿರುವ ಭೋಜಶಾಲಾ ಎಂಬ ಧಾರ್ಮಿಕ ಸ್ಥಳ ತಮಗೆ ಸೇರಿದ್ದು ಎಂದು ಹಿಂದೂ, ಮುಸಲ್ಮಾನರಿಬ್ಬರೂ ವಾದಿಸುತ್ತಾರೆ. ಹಿಂದೂಗಳು ಇಲ್ಲಿ ಮಧ್ಯಕಾಲೀನ ಕೆತ್ತನೆಯಿರುವ ವಾಗ್ದೇವಿ ದೇಗುಲವಿದೆ ಎಂದು ಪ್ರತಿ ಮಂಗಳವಾರ ಪೂಜೆ ಸಲ್ಲಿಸುತ್ತಾರೆ. ಮುಸಲ್ಮಾನರು ಈ ಜಾಗವನ್ನು ಕಮಲ್‌ ಮೌಲಾ ಮಸೀದಿ ಎಂದು ಕರೆದು, ಪ್ರತಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವ್ಯಾಜ್ಯ ಕೋರ್ಟ್‌ನ ಮೆಟ್ಟಿಲೇರಿದ್ದು, ಮೂಲತಃ ಈ ಕಟ್ಟಡ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸುವಂತೆ ಎಎಸ್‌ಐಗೆ ಮಧ್ಯಪ್ರದೇಶದ ಹೈಕೋರ್ಟ್‌ ಈ ವರ್ಷಾರಂಭದಲ್ಲಿ ಆದೇಶಿಸಿತ್ತು.

ಸಮೀಕ್ಷೆ ವಿರುದ್ಧ ಸುಪ್ರೀಂಗೆ ಅರ್ಜಿ

ನವದೆಹಲಿ: ಭೋಜಶಾಲಾ ಕಟ್ಟಡದ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೌಲಾನಾ ಕಮಾಲುದ್ದೀನ್‌ ಕಲ್ಯಾಣ ಸಂಸ್ಥೆ ಅರ್ಜಿ ಸಲ್ಲಿಸಿದೆ. ಇದನ್ನು ಪಟ್ಟಿ ಮಾಡುವುದಕ್ಕೆ ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ